Advertisement

3 ಕೋಟಿ ಬಡವರಿಗೆ ಮನೆ; ನಮೋ 3.0 ಸಚಿವ ಸಂಪುಟದ ಮೊದಲ ನಿರ್ಧಾರ

01:24 AM Jun 11, 2024 | Team Udayavani |

ಹೊಸದಿಲ್ಲಿ: ಸತತ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನ ಅಂದರೆ, ಸೋಮವಾರ ಪ್ರಧಾನಿ ಮೋದಿಯವರು ತಮ್ಮ ಮೊದಲ ಸಚಿವ ಸಂಪುಟ ಸಭೆ ನಡೆಸಿ, ಪ್ರಧಾನಮಂತ್ರಿ ಆವಾಸ್‌ ಯೋಜನೆ (ಪಿಎಂಎವೈ)ಯಡಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದಾರೆ.
ಗ್ರಾಮೀಣ ಮತ್ತು ನಗರ ಪ್ರದೇಶಗಳ ಅರ್ಹ ಫ‌ಲಾನುಭವಿಗಳಿಗೆ ಪಿಎಂಎವೈ ಯೋಜನೆ ಯಡಿ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು ಒದಗಿಸಲಾಗುತ್ತದೆ.

Advertisement

“ಅರ್ಹ ಕುಟುಂಬಗಳ ಸಂಖ್ಯೆಯಲ್ಲಿ ಹೆಚ್ಚಳ ದಿಂದ ಉಂಟಾಗುವ ವಸತಿ ಆವಶ್ಯಕತೆಗಳನ್ನು ಪೂರೈಸಲು ಹೆಚ್ಚುವರಿಯಾಗಿ 3 ಕೋಟಿ ಮನೆಗಳ ನಿರ್ಮಾಣಕ್ಕೆ, ಗ್ರಾಮೀಣ ಮತ್ತು ನಗರ ಪ್ರದೇಶದ ಕುಟುಂಬಗಳಿಗೆ ನೆರವು ನೀಡಲು ಸೋಮವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧ ರಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಕೇಂದ್ರ ಸರಕಾರವು ಪಿಎಂಎವೈ ಯೋಜನೆಯಡಿ 4.21 ಕೋಟಿ ಮನೆಗಳ ನಿರ್ಮಾಣಕ್ಕೆ ಅರ್ಹ ಫ‌ಲಾನುಭವಿಗಳಿಗೆ ಆರ್ಥಿಕ ನೆರವು ಒದಗಿಸಿದೆ. ಕೇಂದ್ರ ಸರಕಾರದ ಪ್ರಮುಖ ಯೋಜನೆಗಳಲ್ಲಿ ಪಿಎಂಎವೈ ಯೋಜನೆ ಒಂದಾಗಿದೆ. ಈ ಯೋಜನೆಯಡಿ ವಸತಿರಹಿತರಿಗೆ ಆಶ್ರಯ ಕಲ್ಪಿಸುವ ಮೂಲಕ ಸಾಮಾಜಿಕ ಬದಲಾವಣೆಗೆ ಸರಕಾರ ಕಾರಣವಾಗಿದೆ. ಪ್ರಧಾನಿ ಮೋದಿ ಈ ಯೋಜನೆಯ ಬಗ್ಗೆ ಹೆಚ್ಚು ಹೆಮ್ಮೆ ಹೊಂದಿದ್ದು, ಚುನಾವಣೆ ಪ್ರಚಾರದ ವೇಳೆ ಈ ಬಗ್ಗೆ ಹೇಳಿಕೊಂಡಿದ್ದರು. ಈಗ 3ನೇ ಬಾರಿಗೆ ಪ್ರಧಾನಿಯಾಗುತ್ತಿದ್ದಂತೆ ಹೆಚ್ಚುವರಿ ಮನೆಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡುವ ಮೂಲಕ ಪಿಎಂಎವೈ ಯೋಜನೆಯ ಮಹತ್ವವನ್ನು ಸಾರಿದ್ದಾರೆ.

ಯಾವ ಸೌಕರ್ಯ?
ಪಿಎಂಎವೈಯಡಿ ನಿರ್ಮಿಸಲಾದ ಎಲ್ಲ ಮನೆಗಳಿಗೆ ಶೌಚಾಲಯ, ಎಲ್‌ಪಿಜಿ ಸಂಪರ್ಕ, ವಿದ್ಯುತ್‌ ಸಂಪರ್ಕ, ಕುಡಿಯುವ ನೀರು ಪೂರೈಕೆ ಸೇರಿ ಎಲ್ಲ ಮೂಲ ಸೌಕರ್ಯ ಒದಗಿಸಲಾಗುತ್ತದೆ.

100 ದಿನಗಳ ಕ್ರಿಯಾ ಯೋಜನೆಯ ಅಂತಿಮ ಪ್ರಾತ್ಯಕ್ಷಿಕೆ ಮುಂದಿನ ವಾರ
ತೃತೀಯ ಬಾರಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಅಭಿವೃದ್ಧಿ ಕಾರ್ಯಗಳತ್ತ ಮೋದಿ ಸರಕಾರ ಗಮನ ನೆಟ್ಟಿದೆ. “ಮೊದಲ 100 ದಿನಗಳ ಅಜೆಂಡಾ’ವನ್ನು ಜಾರಿ ಮಾಡುವ ನಿಟ್ಟಿನಲ್ಲಿ ಸರಕಾರ ಹೆಜ್ಜೆ ಇರಿಸಿದೆ. ಈ ನಿಟ್ಟಿನಲ್ಲಿ ಎಲ್ಲ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಿಗೆ 100 ದಿನಗಳ ಕ್ರಿಯಾ ಯೋಜನೆಯ ಅಂತಿಮ ಪ್ರಾತ್ಯಕ್ಷಿಕೆ ನೀಡುವಂತೆ ಪಿಎಂಒ ಕಚೇರಿಯಿಂದ ಕೋರಿಕೆ ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಕಿಸಾನ್‌ ನಿಧಿ ಕಡತಕ್ಕೆ ಮೊದಲ ಸಹಿ
ಕೇಂದ್ರ ಸಚಿವ ಸಂಪುಟದ ಪ್ರಮಾಣ ಸ್ವೀಕಾರ ಕಾರ್ಯಕ್ರಮದ ಬೆನ್ನಲ್ಲೇ ಪ್ರಧಾನಿ ಮೋದಿ ಯವರು ಸೋಮವಾರ ದಿಲ್ಲಿಯ ಸೌತ್‌ ಬ್ಲಾಕ್‌ ಕಚೇರಿಯಲ್ಲಿ ಪ್ರಧಾನಿಯಾಗಿ ತಮ್ಮ 3ನೇ ಇನ್ನಿಂಗ್ಸ್‌ ಆರಂಭಿಸಿದರು. ಮೊದಲ ದಿನವೇ ಅವರು 17ನೇ ಕಂತಿನ “ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ’ ಬಿಡುಗಡೆಯ ಕಡತಕ್ಕೆ ಸಹಿ ಹಾಕಿದರು.

ಏನಿದು ಪಿಎಂಎವೈ?
-ಇದು ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುವ ಯೋಜನೆ
-ಗ್ರಾಮೀಣ, ನಗರ ಪ್ರದೇಶದ ಅರ್ಹ ಕುಟುಂಬಗಳಿಗೆ ಧನಸಹಾಯ
-2015ರಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆ ಆರಂಭ
-ಕೇಂದ್ರದ ಯಶಸ್ವಿ ಯೋಜನೆಗಳಲ್ಲಿ ಪಿಎಂಎವೈ ಕೂಡ ಒಂದು
-ವಾರ್ಷಿಕ 3-18 ಲಕ್ಷ ರೂ. ಆದಾಯ ಇರುವವರು ಅರ್ಹರು

ಪ್ರಧಾನಮಂತ್ರಿ ಕಚೇರಿ (ಪಿಎಂಒ) ಬರೀ ಪ್ರಧಾನಿಗೆ ಸೀಮಿತವಾದುದಲ್ಲ, ಜನರಿಗೆ ಮುಕ್ತವಾಗಿರಬೇಕು. 10 ವರ್ಷಗಳ ಹಿಂದೆ ಬರೀ ಆಡಳಿತದ ಶಕ್ತಿ ಕೇಂದ್ರವಾಗಿದ್ದ ಪಿಎಂಒ ಈಗ ವ್ಯವಸ್ಥೆಯ ಬದಲಾವಣೆಗೆ ಶಕ್ತಿ, ಚೈತನ್ಯ ತುಂಬುವ ಬದಲಾವಣೆಯ ಹರಿಕಾರನಾಗಿ ಬದಲಾಗಿದೆ.
-ನರೇಂದ್ರ ಮೋದಿ, ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next