Advertisement
ಇತ್ತೀಚೆಗಷ್ಟೇ ತನ್ನ ನಾಲ್ಕನೇ ವರದಿ ಸಲ್ಲಿಸಿದ್ದ ಸುಪ್ರೀಂ ನಿಯೋಜಿತ ಬಿಸಿಸಿಐ ಆಡಳಿತಾಧಿಕಾರಿಗಳು, ನ್ಯಾಯಪೀಠದ ಆದೇಶ ಜಾರಿಗೆ ಶ್ರೀನಿ, ನಿರಂಜನ್ ಅವರೇ ಕೊಕ್ಕೆ ಹಾಕುತ್ತಿದ್ದಾರೆ. ಅವರಿಬ್ಬರಿಗೆ ಸ್ವಹಿತಾಸಕ್ತಿ ಇದೆ ಎಂದು ಆರೋಪಿಸಿದ್ದರು. ನ್ಯಾಯಪೀಠದ 70 ವರ್ಷದ ವಯೋಮಿತಿ ನಿಬಂಧನೆ ಪ್ರಕಾರ, ಈ ಇಬ್ಬರೂ ಅನರ್ಹಗೊಳ್ಳುತ್ತಾರೆ. ಆದ್ದರಿಂದ ಅವರು ಮತ್ತೆ ಬಿಸಿಸಿಐನ ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಆದರೂ ಇಬ್ಬರು ಬಿಸಿಸಿಐ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದು ಆಡಳಿತಾಧಿಕಾರಿಗಳನ್ನು ಕೆರಳಿಸಿದೆ.
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕ್ರಿಮಿನಲ್ ವಿಚಾರಣೆ ಎದುರಿಸುತ್ತಿದ್ದ ಬಿಸಿಸಿಐ ಪದಚ್ಯುತ ಅಧ್ಯಕ್ಷ ಅನುರಾಗ್ ಠಾಕೂರ್ ನಿಟ್ಟುಸಿರು ಬಿಟ್ಟಿದ್ದಾರೆ. ತರ್ಕಗಳಿಗೆ ಆಸ್ಪದವಿಲ್ಲದಂತೆ, ಬೇಷರತ್ ಕ್ಷಮೆಯಾಚನೆ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಪೀಠ ಅವರ ಮೇಲಿನ ವಿಚಾರಣೆ ಕೈಬಿಟ್ಟಿದೆ. ಬಿಸಿಸಿಐಗೆ ಆಡಳಿತಾತ್ಮಕ ಸುಧಾರಣೆಗಳನ್ನು ಘೋಷಿಸಿ ನ್ಯಾಯಪೀಠ 2016ರಲ್ಲಿ ತೀರ್ಪು ನೀಡಿತ್ತು. ಅದಾದ ಮೇಲೆ ಐಸಿಸಿಯನ್ನು ಸಂಪರ್ಕಿಸಿದ್ದ ಅನುರಾಗ್, ಈ ಸುಧಾರಣೆಗಳನ್ನು ಅಳವಡಿಸಿಕೊಂಡರೆ ಬಿಸಿಸಿಐಯನ್ನು ಅಮಾನತು ಮಾಡಬೇಕಾಗುತ್ತದೆ ಎಂಬ ಪತ್ರ ನೀಡಿ ಎಂದು ಮನವಿ ಮಾಡಿದ್ದರು. ಇದನ್ನು ಸ್ವತಃ ಐಸಿಸಿಯೇ ಬಯಲು ಮಾಡಿತ್ತು. ಇದರಿಂದ ಕೆರಳಿದ ನ್ಯಾಯಪೀಠ ಅನುರಾಗ್‌ರನ್ನು ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿ, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡಿತ್ತು.