Advertisement

ಟಿ20ಯಲ್ಲಿ 62 ಸೋಲು: ಸೋಲಿನಲ್ಲೇ ವಿಶ್ವ ದಾಖಲೆ ಬರೆದ ಶ್ರೀಲಂಕಾ

10:19 AM Jan 10, 2020 | keerthan |

ಇಂದೋರ್‌ (ಮಧ್ಯಪ್ರದೇಶ): ಇಲ್ಲಿ ಮಂಗಳವಾರ ಭಾರತ ವಿರುದ್ಧ ಆಡಿದ 2ನೇ ಟಿ20 ಪಂದ್ಯದಲ್ಲಿ, ಶ್ರೀಲಂಕಾ ಬೇಡದ ವಿಶ್ವದಾಖಲೆಯೊಂದನ್ನು ನಿರ್ಮಿಸಿದೆ.

Advertisement

ಇಂದೋರ್ ನಲ್ಲಿ 7 ವಿಕೆಟ್‌ಗಳಿಂದ ಅದು ಸೋತ ನಂತರ, ಟಿ20 ಪಂದ್ಯಗಳಲ್ಲಿ ಅದರ ಸೋಲಿನ ಸಂಖ್ಯೆ 62ಕ್ಕೇರಿದೆ. ಇದು ತಂಡವೊಂದು ಅನುಭವಿಸಿದ ಗರಿಷ್ಠ ಸೋಲು. ಅದು 61 ಪಂದ್ಯ ಸೋತಿರುವ ವೆಸ್ಟ್‌ ಇಂಡೀಸ್‌ ದಾಖಲೆಯನ್ನು ಮುರಿದಿದೆ.

ಒಂದು ಕಾಲದಲ್ಲಿ ಸೋಲರಿಯದ ಅಜೇಯ ತಂಡವೆಂಬ ಹೆಗ್ಗಳಿಕೆ ಹೊಂದಿದ್ದ ಶ್ರೀಲಂಕಾ, ಈಗ ಸೋಲನ್ನು ಬಿಟ್ಟು ಬೇರೇನನ್ನೂ ಕಾಣುತ್ತಿಲ್ಲ. ನಿರಂತರ ಸೋಲಿನಿಂದ ಅದು ಸಂಪೂರ್ಣ ಕುಸಿದುಹೋಗಿದೆ. ಕಳೆದ ಮೂರು ವರ್ಷಗಳಿಂದ ಆ ತಂಡ ಸಂಪೂರ್ಣ ದುಸ್ಥಿತಿಯಲ್ಲಿದೆ.

ಲಂಕಾ ಹೀಗೆ ಬೇಡದ ದಾಖಲೆ ನಿರ್ಮಿಸಿ ತಾಪತ್ರಯ ಪಡುತ್ತಿದ್ದರೆ, ಭಾರತ ಗೆಲುವಿನ ಮೇಲೆ ಗೆಲುವು ಸಾಧಿಸಿ ಅದ್ಭುತ ಸಾಧನೆ ಮಾಡುತ್ತಿದೆ. ಮಂಗಳವಾರ ಶ್ರೀಲಂಕಾ ವಿರುದ್ಧ ಭಾರತದ ಗೆಲುವಿನ ಸಂಖ್ಯೆ 12ಕ್ಕೇರಿತು. ಇದು ತಂಡವೊಂದರ ವಿರುದ್ಧ ಭಾರತ ಸಾಧಿಸಿದ ಗರಿಷ್ಠ ಟಿ20 ಜಯ. ಆಸ್ಟ್ರೇಲಿಯ ವಿರುದ್ಧ 11 ಜಯ ಸಾಧಿಸಿರುವುದು 2ನೇ ಶ್ರೇಷ್ಠ ಸಾಧನೆ.

ಇಂದೋರ್‌ನಲ್ಲಿ ಅಜೇಯ: ಇಂದೋರ್‌ ನ ಹೋಳ್ಕರ್‌ ಮೈದಾನದಲ್ಲಿ ಆಡಲಾದ ಎಲ್ಲ 9 ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ಅಜೇಯ ದಾಖಲೆ ಕಾಯ್ದುಕೊಂಡಿತು. ಇದರಲ್ಲಿ 2 ಟಿ20, 5 ಏಕದಿನ ಹಾಗೂ 2 ಟೆಸ್ಟ್‌ ಪಂದ್ಯಗಳು ಸೇರಿವೆ.

Advertisement

ಕೊಹ್ಲಿ ದಾಖಲೆಗಳು: ವಿರಾಟ್‌ ಕೊಹ್ಲಿ ಟಿ20 ಪಂದ್ಯದ ಯಶಸ್ವಿ ಚೇಸಿಂಗ್‌ ವೇಳೆ 15 ಸಲ ಅಜೇಯರಾಗಿ ಉಳಿದು ಧೋನಿ ಅವರ ಭಾರತೀಯ ದಾಖಲೆಯನ್ನು ಸರಿದೂಗಿಸಿದರು. ಇವರಿಗಿಂತ ಮುಂದಿರುವ ಏಕೈಕ ಕ್ರಿಕೆಟಿಗನೆಂದರೆ ಶೋಯಿಬ್‌ ಮಲಿಕ್‌ (16 ಪಂದ್ಯ). ವಿರಾಟ್‌ ಕೊಹ್ಲಿ ಮಂಗಳವಾರ ಚೇಸಿಂಗ್‌ ವೇಳೆ ಸಿಕ್ಸರ್‌ ಬಾರಿಸಿ ತಂಡವನ್ನು ಗೆಲ್ಲಿಸಿದರು. ಈ ಹಿಂದೆ ಮೂರು ಬಾರಿ ಸಿಕ್ಸರ್‌ ಬಾರಿಸಿ, ತಂಡದ ಗೆಲುವನ್ನು ಸಾರಿದ್ದ ಧೋನಿ ಅವರ ಭಾರತೀಯ ದಾಖಲೆಯನ್ನು ಸರಿಗಟ್ಟಿದರು

ನಾಯಕನಾಗಿ ಕೊಹ್ಲಿ 5000 ಟಿ20 ರನ್‌
ಕೊಹ್ಲಿ, ಟಿ20ಯಲ್ಲಿ (ಐಪಿಎಲ್‌ ಕೂಡ ಸೇರಿ) ನಾಯಕನಾಗಿ 5000 ರನ್‌ ಗಡಿದಾಟಿದ ಸಾಧನೆ ಮಾಡಿದರು. ಅಂತಾರಾಷ್ಟ್ರೀಯ ಟಿ20, ಐಪಿಎಲ್‌ ಸೇರಿ ನಾಯಕನಾಗಿ ಅವರ ಗಳಿಕೆ 5016 ರನ್‌ಗಳಿಗೇರಿದೆ. ಇಂತಹ ಸಾಧನೆ ಮಾಡಿದ ವಿಶ್ವದ ಕೇವಲ 2ನೇ ನಾಯಕ. ಇನ್ನೊಬ್ಬ ಭಾರತೀಯ ನಾಯಕ ಎಂ.ಎಸ್‌. ಧೋನಿ ಈ ಸಾಧನೆ ಮಾಡಿದ ಮೊದಲಿಗ. ಮಂಗಳವಾರ ಕೊಹ್ಲಿ 14 ರನ್‌ ಗಳಿಸಿದ್ದಾಗ ಈ ಸಾಧನೆ ಸಾಧ್ಯವಾಯಿತು.

ಅಂತಾರಾಷ್ಟ್ರೀಯ ಟಿ20ಯಲ್ಲಿ 1000 ರನ್‌: ಇದೇ ವೇಳೆ ವಿರಾಟ್‌ ಕೊಹ್ಲಿ ಬರೀ ಅಂತಾರಾಷ್ಟ್ರೀಯ ಟಿ20ಯಲ್ಲಿ ನಾಯಕನಾಗಿ 1000ರನ್‌ ಗಳಿಸಿದ ಸಾಧನೆ ಮಾಡಿದರು. ಮಂಗಳವಾರ 24 ರನ್‌ ಗಳಿಸಿದ್ದಾಗ ಅವರು ಈ ಗಡಿ ಮುಟ್ಟಿದರು. ಈ ಸಾಧನೆ ಮಾಡಿದ ವಿಶ್ವದ ಕೇವಲ 6ನೇ ನಾಯಕ ಅವರು. ಅತಿವೇಗವಾಗಿ ಈ ದಾಖಲೆ ಮಾಡಿದ ನಾಯಕನೂ ಹೌದು.

Advertisement

Udayavani is now on Telegram. Click here to join our channel and stay updated with the latest news.

Next