ಪಲ್ಲೆಕೆಲೆ: ಮಳೆಯಿಂದ ಅಡಚಣೆಗೊಳಗಾದ ರವಿವಾರದ ದ್ವಿತೀಯ ಟಿ20 ಪಂದ್ಯದಲ್ಲಿ ಶ್ರೀಲಂಕಾಕ್ಕೆ 7 ವಿಕೆಟ್‌ಗಳ ಸೋಲುಣಿಸಿದ ಭಾರತ ಸರಣಿ ವಶಪಡಿಸಿಕೊಂಡಿದೆ.
ಶ್ರೀಲಂಕಾ 9 ವಿಕೆಟಿಗೆ 161 ರನ್ ಪೇರಿಸಿತು. ಭಾರತದ ಚೇಸಿಂಗ್ ವೇಳೆ ಮಳೆ ಸುರಿದ ಕಾರಣ ಪಂದ್ಯವನ್ನು 8 ಓವರ್‌ಗಳಿಗೆ ಇಳಿಸಿ ಡಿಎಲ್‌ಎಸ್ ನಿಯಮದಂತೆ 78 ರನ್ ಗುರಿ ನಿಗದಿಪಡಿಸಲಾಯಿತು. ಭಾರತ 6.3 ಓವರ್‌ಗಳಲ್ಲಿ 3 ವಿಕೆಟಿಗೆ 81 ರನ್ ಬಾರಿಸಿತು. ಮೊದಲ ಪಂದ್ಯವನ್ನು ಭಾರತ 43 ರನ್ನುಗಳಿಂದ ಜಯಿಸಿತ್ತು. 3ನೇ ಹಾಗೂ ಅಂತಿಮ ಪಂದ್ಯ ಮಂಗಳವಾರ ನಡೆಯಲಿದೆ.
ಚೇಸಿಂಗ್ ವೇಳೆ ಜೈಸ್ವಾಲ್ 30, ಸೂರ್ಯಕುಮಾರ್ 26, ಪಾಂಡ್ಯ ಔಟಾಗದೆ 22 ರನ್ ಮಾಡಿದರು. ಈ ಪಂದ್ಯ 45 ನಿಮಿಷ ವಿಳಂಬವಾಗಿ ಆರಂಭ ಗೊಂಡಿತ್ತು. 15ನೇ ಓವರ್ ತನಕ ಶ್ರೀಲಂಕಾ ಉತ್ತಮ ಹಿಡಿತ ಸಾಧಿಸಿತ್ತು. ಆದರೆ ಅನಂತರ ತೀವ್ರ ಕುಸಿತ ಕಂಡಿತು.
ಪಥುಮ್ ನಿಸ್ಸಂಕ 32, ಕುಸಲ್ ಪೆರೆರ 53 ರನ್ ಹೊಡೆದರು. ಇದರಿಂದ ಲಂಕಾ ಒಂದು ಹಂತದಲ್ಲಿ 2 ವಿಕೆಟಿಗೆ 130 ರನ್ ಪೇರಿಸುವಲ್ಲಿ ಯಶಸ್ವಿಯಾಯಿತು. ಅನಂತರ ಭಾರತದ ಬೌಲಿಂಗ್ ದಾಳಿ ತೀವ್ರಗೊಂಡಿತು. ಲೆಗ್‌ಸ್ಪಿನ್ನರ್ ರವಿ ಬಿಷ್ಣೋಯಿ ಘಾತಕವಾಗಿ ಪರಿಣಮಿಸಿದರು. ಅವರು ಸತತ ಎಸೆತಗಳಲ್ಲಿ ದಸುನ್ ಶಣಕ ಮತ್ತು ವನಿಂದು ಹಸರಂಗ ಅವರನ್ನು ಬೌಲ್ಡ್ ಮಾಡಿ ಭಾರತಕ್ಕೆ ಮೇಲುಗೈ ಒದಗಿಸಿದರು. ಇವರಿಬ್ಬರೂ ಖಾತೆ ತೆರೆಯಲು ವಿಫಲರಾದರು. 26ಕ್ಕೆ 3 ವಿಕೆಟ್ ಉರುಳಿಸಿದ ಬಿಷ್ಣೋಯಿ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.
ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ಕೂಡ ಪರಿಣಾಮಕಾರಿ ಬೌಲಿಂಗ್ ಸಂಘಟಿಸಿ ತಲಾ 2 ವಿಕೆಟ್ ಕೆಡವಿದರು. 26 ರನ್ ಮಾಡಿದ ಕಮಿಂಡು ಮೆಂಡಿಸ್ ಲಂಕಾ ಸರದಿಯ ಮತ್ತೋರ್ವ ಪ್ರಮುಖ ಸ್ಕೋರರ್.