ಕೊಲಂಬೋ: ಬುಧವಾರ ಶ್ರೀಲಂಕಾದಲ್ಲಿನ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ ಅವ ರಿಗೆ ನೀಡಿದ್ದ ಬೆಂಬಲವನ್ನು ಮೂವರು ಸಂಸದರು ಹಿಂದೆಗೆದುಕೊಂಡಿದ್ದಾರೆ. ಮೂವರೂ ಎಸ್‌ಎಲ್‌ಎಂಸಿ ಪಕ್ಷದ ಮುಸ್ಲಿಂ ಸಂಸದರು. ಇದರಿಂದ ರಾಜಪಕ್ಸ ಸರಕಾರ ಉರುಳುವುದು ಸನ್ನಿಹಿತ ಎಂಬ ಪರಿಸ್ಥಿತಿ ಸೃಷ್ಟಿಯಾಗಿದೆ. ಇದಕ್ಕಿಂತ ಕೆಲವು ದಿನಗಳ ಮುನ್ನ 39 ಸಂಸದರು ಬೆಂಬಲ ಹಿಂಪಡೆದಿದ್ದರು!
ಇದರ ನಡುವೆ ವಿಪಕ್ಷದ ನಾಯಕ ಸಾಜಿಥ್ ಪ್ರೇಮದಾಸ ನೀಡಿದ ಹೇಳಿಕೆಯೊಂದು ಭಾರೀ ವಿವಾದವೆಬ್ಬಿಸಿದೆ. ರಾಜಪಕ್ಸ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧವಿದ್ದಾರೆ ಎಂದು ಆಡಳಿತಾರೂಢ ಪಕ್ಷದ ಸ್ಪೀಕರ್ ಮಹಿಂದಾ ಯಪ ಅಬೆಯವರ್ದನ ಹೇಳಿದ್ದಾರೆಂದು ಪ್ರೇಮದಾಸ ಹೇಳಿದ್ದರು! ಇದಕ್ಕೆ ಸ್ಪಷ್ಟನೆ ನೀಡಿದ ಅಬೆಯವರ್ದನ ನಾನು ಹಾಗೆ ಹೇಳಿಯೇ ಇಲ್ಲ. ತಮ್ಮ ಅಭಿಪ್ರಾಯಗಳನ್ನು ತಪ್ಪಾಗಿ ಅರ್ಥೈಸ ಲಾಗಿದೆ ಎಂದಿದ್ದಾರೆ.
ಈ ನಡುವೆ ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸ ಪುತ್ರ ನಮಲ್ ರಾಜಪಕ್ಸ ಜನರ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿದ್ದಾರೆ. “ತಮಗೆ ಕಷ್ಟವಾಗಿರುವುದರಿಂದ ಜನರ ಪ್ರತಿಭಟಿಸುವುದು ಸಹಜ. ಸರಕಾರ ಪರಿಸ್ಥಿತಿಯನ್ನು ಇನ್ನಷ್ಟು ಉತ್ತಮವಾಗಿ ನಿಭಾಯಿಸಬೇಕಿತ್ತು’ ಎಂದಿದ್ದಾರೆ.
ಹಾಗೆಯೇ ಭಾರತದ ನೆರವನ್ನು ಹೊಗಳಿದ್ದಾರೆ. ಇದೇ ವೇಳೆ ಶ್ರೀಲಂಕಾದ ಸಂವಿಧಾನಕ್ಕೆ ತಿದ್ದುಪಡಿ ತರಲು ಪ್ರಧಾನಿ ಮಹಿಂದಾ ಶಿಫಾರಸು ಮಾಡಿದ್ದಾರೆ!
ಸುಸ್ಥಿರತೆಯ ಭರವಸೆ ನೀಡಿ: ಶ್ರೀಲಂಕಾ ಸರಕಾರ ಐಎಂಎಫ್ ಬಳಿ 4 ಬಿಲಿಯನ್ ಡಾಲರ್ ಸಾಲ ನೀಡಿ ಎಂದು ಮನವಿ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಐಎಂಎಫ್ ಪರಿಸ್ಥಿತಿಯಲ್ಲಿ ಸುಸ್ಥಿರತೆ ಕಾಪಾಡಿಕೊಳ್ಳಬೇಕು, ಅದಕ್ಕೆ ಸೂಕ್ತ ಭರವಸೆ ನೀಡ ಬೇಕು ಎಂದು ಸೂಚಿಸಿದೆ.