Advertisement

ಶ್ರೀ ಅಯ್ಯಪ್ಪ ಸೇವಾ ಸಮಿತಿ: ವಾರ್ಷಿಕ ಶೈಕ್ಷಣಿಕ ನೆರವು ವಿತರಣೆ

03:47 PM Sep 15, 2017 | Team Udayavani |

ನವಿಮುಂಬಯಿ: ಅಯ್ಯಪ್ಪ ಸಂಸ್ಥೆಯು ಕಳೆದ ಐದು ವರ್ಷಗಳಿಂದ ವಿದ್ಯಾನಿಧಿ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಇಂದಿನ ಮಕ್ಕಳಿಗೆ ವಿದ್ಯಾಜ್ಞಾನದ ಒತ್ತಡ ಅಧಿಕವಾಗಿದ್ದು, ಅಂಕಗಳನ್ನು ಗಳಿಸುವ ಪೈಪೋಟಿ ಹೆಚ್ಚಾಗುತ್ತಿದೆ. ಅದರ ಬದಲು ಅವರಲ್ಲಿರುವಂತಹ ಪ್ರತಿಭೆಯನ್ನು ಹೊರ ತರುವ ಪ್ರಯತ್ನವನ್ನು ಪಾಲಕರು ಮಾಡ ಬೇಕು. ನಾನು ಕಳೆದ ವರ್ಷದಿಂದ ಈ ಸಂಸ್ಥೆಗೆ ಅಧಿಕ ನಿಧಿಯನ್ನು ನೀಡುವ ಯೋಚನೆಯನ್ನು ಮಾಡಿದ್ದೇನೆ. ನಿಮ್ಮೆಲ್ಲರ ಸಮಾಜಪರ ಕಾರ್ಯಗಳಿಗೆ ನನ್ನ ಪ್ರೋತ್ಸಾಹ, ಸಹಕಾರ ಸದಾಯಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್‌ನ ನವಿಮುಂಬಯಿ ಜಿಲ್ಲಾಧ್ಯಕ್ಷ ಅನಂತ ಸುತಾರ್‌ ಅವರು  ಹೇಳಿದರು.

Advertisement

ಸೆ. 9 ರಂದು ಸಂಜೆ ಐರೋಲಿಯ ಶ್ರೀ ಅಯ್ಯಪ್ಪ ಸೇವಾ ಸಮಿತಿ  ವತಿಯಿಂದ ಸಮಿತಿಯ ಐರೋಲಿಯ ಶಿಬಿರದಲ್ಲಿ ಹಮ್ಮಿಕೊಳ್ಳಲಾಗಿದ್ದ  ವಿದ್ಯಾನಿಧಿ ವಿತರಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳು ತುಂಬಾ ಪ್ರಯತ್ನಪಡಬೇಕಾದ ಅನಿವಾರ್ಯತೆ ಇದೆ. ಶೇ. 97 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಕೂಡ ಉತ್ತಮ ಶಾಲೆಗಳಲ್ಲಿ ಪ್ರವೇಶವನ್ನು ಪಡೆಯಲು ಪೈಪೋಟಿ ನಡೆಸಬೇಕಾದಂತಹ ಅನಿವಾರ್ಯತೆ ಇದೆ ಎಂದು ನುಡಿದರು.

ಇನ್ನೋರ್ವ ಅತಿಥಿ ತುಳುಕೂಟ ಐರೋಲಿಯ ಅಧ್ಯಕ್ಷ ಹರೀಶ್‌ ಶೆಟ್ಟಿ ಪಡುಬಿದ್ರೆ ಅವರು ಮಾತನಾಡಿ, ಇಂದಿನ ಮಕ್ಕಳು ನಮಗಿಂತ ಬುದ್ಧಿವಂತರಾಗಿದ್ದಾರೆ. ನಾವು ತಿಳಿಹೇಳುವಂತಹ ವಿಷಯಗಳೇನು ಇಲ್ಲ. ಆದರೂ ಮಾತಾಪಿತರು ಮಕ್ಕಳಿಗೆ ಹಿರಿಯರನ್ನು ಗೌರವದಿಂದ ಕಾಣುವ ಸಂಸ್ಕೃತಿ, ಸಂಪ್ರದಾಯಗಳನ್ನು ಕಲಿಸಲು ಹಿಂಜರಿಯಬಾರದು. ಇಂದಿನ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳು ವಾಟ್ಸಾಪ್‌ ಅಥವಾ ಫೇಸ್‌ಬುಕ್‌ನಂತಹ ತಂತ್ರಜ್ಞಾನದಿಂದ ಮಕ್ಕಳು ಉತ್ತಮ ವಿಚಾರಗಳನ್ನು ಕಲಿಯಲು ಸಾಧ್ಯ. ಆದರೆ ನಾವು ಅದರ ಅವಗುಣಗಳನ್ನೇ ಅವಲಂಭಿಸಿದ್ದೇವೆ. ಇಂದಿನ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಓದಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಸ್ವತ: ಪ್ರಜ್ಞಾವಂತರಾಗಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೃಷ್ಣ ವಿ. ಶೆಟ್ಟಿ ಅವರು ಮಾತನಾಡಿ, ಅನಂತ ಸುತಾರ್‌ ಅವರು ನಮ್ಮ ಸಂಸ್ಥೆಗೆ ಅತೀವ ಸಹಾಯ ಮಾಡಿದ್ದಾರೆ. ಈ ಶಿಬಿರದ ನಿರ್ಮಾಣದ ಸಂದರ್ಭದಲ್ಲೂ ಆರ್ಥಿಕ ರೂಪದಲ್ಲಿ ಸಹಕರಿಸಿದ್ದಾರೆ. ಕಳೆದ ವರ್ಷವೂ ವಿದ್ಯಾರ್ಥಿಗಳಿಗೆ 50 ಸಾವಿರ ರೂ. ದೇಣಿಗೆ ನೀಡಿದ್ದಾರೆ. ಈ ವರ್ಷ ಅವರ ವತಿಯಿಂದ ಶಾಲಾ ಪರಿಕರಗಳ ವಿತರಣೆ ಮಾಡಿದ್ದಾರೆ.  ಈ ಸಂಸ್ಥೆಯ ಅಧ್ಯಕ್ಷ ಪದವಿಯನ್ನು ಅವರಿಗೆ ನೀಡುವಾಗ ಅವರು ಅನ್ಯ ಸಂಸ್ಥೆಗಳಲ್ಲೂ ಸೇವಾ ನಿರತರಾಗಿರುವ ಕಾರಣ ಅದಕ್ಕೆ ಒಪ್ಪಿರಲಿಲ್ಲ. ಅವರು ನಮ್ಮೊಂದಿಗೆ ಸದಾ ಇದ್ದಾರೆ. ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಗುಣಮಟ್ಟದ ಶಿಕ್ಷಣ ಸಿಗಲಿ. ಶ್ರೀ ಅಯ್ಯಪ್ಪ ದೇವರು ಅವರೆಲ್ಲರ ಬೆಂಗಾವಲಾಗಿ ಸದಾಯಿರಲಿ ಎಂದು ಹಾರೈಸಿದರು.

ಸುಮಾರು 27 ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಹಾಗೂ ಪ್ರತಿಭಾ ಪುರಸ್ಕಾರವನ್ನು ಪ್ರದಾನಿಸಲಾಯಿತು. ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಉಪಾಧ್ಯಕ್ಷ ಕಳತ್ತೂರು ಅಮರನಾಥ ಶೆಟ್ಟಿ, ಗುರುಸ್ವಾಮಿ ಶೇಖರ್‌ ಎನ್‌. ಶೆಟ್ಟಿ, ಗೌರವಾಧ್ಯಕ್ಷ ರಘು ಪಡವ್‌, ಗೌರವ ಪ್ರಧಾನ ಕಾರ್ಯದರ್ಶಿ ವೀರೇಂದ್ರ ಶೆಟ್ಟಿ, ಕೋಶಾಧಿಕಾರಿ ಶ್ಯಾಮ್‌ ಎಂ. ಶೆಟ್ಟಿ, ಉದ್ಯಮಿ ಅಶೋಕ್‌ ಶೆಟ್ಟಿ, ಶಿಬಿರದ ಗುರುಸ್ವಾಮಿ ಅಣ್ಣಿ ಎಚ್‌. ಶೆಟ್ಟಿ, ರುಕ್ಮಿಣಿ ವಿಠಲ ದೇವಾಲಯದ ಮಹಿಳಾ ಕಾರ್ಯಾಧ್ಯಕ್ಷೆ ಶೋಭಾ ಎಂ. ಕೋಟ್ಯಾನ್‌ ಅವರು ಉಪಸ್ಥಿತರಿದ್ದರು. ಬಾಲಕೃಷ್ಣ ಶೆಟ್ಟಿ ಕಟೀಲು ಅವರು ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಶ್ರೀ ಅಯ್ಯಪ್ಪ ವ್ರತಧಾರಿಗಳಿಂದ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next