Advertisement

ಭೂ ಕುಸಿತ ಸಂಭವಿಸುವ 30 ಸ್ಥಳ ಗುರುತು

03:34 PM Jun 03, 2022 | Team Udayavani |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭಕ್ಕೆ ಕಾಲ ಸನ್ನಿಹಿತವಾಗಿದೆ. ಮಳೆಯಿಂದ ಭೂಕುಸಿತ ಸಂಭವಿಸಬಹುದಾದ 30 ಪ್ರದೇಶಗಳನ್ನು ಗುರುತಿಸಿದ್ದು, ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಎಚ್ಚರಿಕೆ ವಹಿಸಿದೆ.

Advertisement

2019-20ನೇ ಸಾಲಿನಲ್ಲಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಹಾಮಳೆ ಅನಾಹುತ ಸೃಷ್ಟಿಸಿತ್ತು. ಭೂಕುಸಿತ ಸಂಭವಿಸಿ ಅಪಾರ ಪ್ರಮಾಣ ಆಸ್ತಿಪಾಸ್ತಿ, ಮನೆ, ಜೀವಹಾನಿ ಸಂಭವಿಸಿತ್ತು. ಅಲ್ಲಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಸಂಭವಿಸಬಹುದಾದ ಅವಘಡವನ್ನು ತಪ್ಪಿಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟಿ, ಅಲೇಖಾನ್‌ ಹೊರಟ್ಟಿ, ಹಳ್ಳಿಕೆರೆ, ಚನ್ನಹಡ್ಲು, ಬಾಳೂರು ಹೊರಟ್ಟಿ, ಭೂತನಕಾಡು, ಮಲೆಮನೆ, ಮೇಗೂರು, ಜಾವಳಿ, ಮಧುಗುಂಡಿ, ಬಲಿಗೆ, ದುರ್ಗದಹಳ್ಳಿ, ಅವತಿ ಹೊಸಳ್ಳಿ, ಶಿರವಾಸೆ, ಚನ್ನಡ್ಲು ಕಾಫಿ ಎಸ್ಟೇಟ್‌ (ಮಲ್ಲೇಶ್ವರಗುಡ್ಡ), ಬೂದಿಗುಂಡಿ, ಯಡೂರು, ಯಳಂದೂರು, ಕೋಟೆಮಕ್ಕಿ, ಹೆಮ್ಮಕ್ಕಿ, ಕಸ್ಕೆಬೈಲು, ದೇವವೃಂದ, ಅತ್ತಿಗೆರೆ, ಕೆಳಗೂರು, ಕೆಳಗೂರು ಕಾಫಿ ಎಸ್ಟೇಟ್‌, ಮುಸ್ತಿಖಾನ್‌ ಕಾಫಿ ತೋಟ, ಸುಂಕಸಾಲೆ, ಬದನೆಖಾನ್‌ ಕಾಫಿ ಎಸ್ಟೇಟ್‌, ಕುಣಿಯಳ್ಳಿ, ಬಲ್ಲಾಳರಾಯನದುರ್ಗ, ದುರ್ಗದಹಳ್ಳಿಗಳನ್ನು ಗುರುತಿಸಲಾಗಿದೆ.

2019-20ನೇ ಸಾಲಿನಲ್ಲಿ ಅವಘಡ ಸಂಭವಿಸಿದ ಪ್ರದೇಶಗಳಿಗೆ ಜಿಯಾಲಾಜಿಕಲ್‌ ಸರ್ವೇ ಆಫ್‌ ಇಂಡಿಯಾ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ- ಸೂಚನೆಗಳನ್ನು ನೀಡಿದ್ದು, ಅದರಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಕಳೆದ ಬಾರಿ ಭೂಕುಸಿತ ಸಂಭವಿಸಿರಲಿಲ್ಲ.

Advertisement

ಜಿಯಾಲಾಜಿಕಲ್‌ ಸರ್ವೇ ಆಫ್‌ ಇಂಡಿಯಾ ತಂಡದಿಂದ ಭೂ ಕುಸಿತ ಸಂಭವಿಸಿದ ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ರಸ್ತೆ ಬದಿ ಸೈಡ್‌ ಕಟಿಂಗ್‌ ಮಾಡಲಾಗಿದೆ. ಬ್ಯಾರಿಕೇಡ್‌ ವಾಲ್‌ ನಿರ್ಮಿಸಲಾಗಿದೆ. ನೀರು ಸರಾಗವಾಗಿ ಹರಿಯಲು ಅನುಕೂಲವಾಗುವಂತೆ ಚರಂಡಿಗಳನ್ನು ನಿರ್ಮಿಸಲಾಗಿದೆ.

ಅವಘಡಗಳು ಸಂಭವಿಸದಂತೆ ಕ್ರಮ ಕೈಗೊಳ್ಳಲು ಲೋಕೋಪಯೋಗಿ ಇಲಾಖೆ, ಪಂಚಾಯತ್‌ ರಾಜ್‌ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನೇನು ಮುಂಗಾರು ಮಳೆ ಆರಂಭದ ದಿನಗಳು ಹತ್ತಿರವಾಗುತ್ತಿವೆ. ಒಟ್ಟಾರೆ ಈ ವರ್ಷದ ಮುಂಗಾರು ಮಳೆಯಿಂದ ಸಂಭವಿಸಬಹುದಾದ ಅನಾಹುತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

2019-20ನೇ ಸಾಲಿನಲ್ಲಿ ಸಂಭವಿಸಿದ ಅನಾಹುತ ಪ್ರದೇಶಗಳಿಗೆ ಕಳೆದ ವರ್ಷ ಜಿಯಾಲಾಜಿಕಲ್‌ ಸರ್ವೇ ಆಫ್‌ ಇಂಡಿಯಾ ಅಧಿಕಾರಿಗಳ ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿ ಕೆಲವು ಸೂಚನೆಗಳನ್ನು ನೀಡಿದ್ದರು. ಅದರಂತೆ ಭೂ ಕುಸಿತ ಪ್ರದೇಶಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಕಳೆದ ವರ್ಷ ಹೆಚ್ಚಿನ ಅನಾಹುತ ಸಂಭವಿಸಿರಲಿಲ್ಲ. ಅದರಂತೆ ಈ ವರ್ಷವೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. -ವಿಂಧ್ಯಾ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next