ಬಾಗಲಕೋಟೆ: ಶಿಕ್ಷಣದ ಜತೆಗೆ ದೈಹಿಕ, ಮಾನಸಿಕ ಹಾಗೂ ಉತ್ತಮ ಆರೋಗ್ಯಕ್ಕೆ ಕ್ರೀಡಾ ಚಟುವಟಿಕೆ ಅಗತ್ಯವಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ ಹೇಳಿದರು.
ತೋಟಗಾರಿಕೆ ವಿವಿಯ ಕ್ರೀಡಾಂಗಣದಲ್ಲಿ ಶುಕ್ರವಾರ ಜರುಗಿದ ತೋವಿವಿಯ 13ನೇ ಅಂತರ ಮಹಾವಿದ್ಯಾಲಯ ಕ್ರೀಡಾಕೂಟದ ಕ್ರೀಡಾ ಜ್ಯೋತಿಯನ್ನು ಸ್ವಾಗತಿಸಿ, ಬಲೂನ್‌ಗಳನ್ನು ಆಕಾಶಕ್ಕೆ ಹಾರಿ ಬಿಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರಕಾರ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಗ್ರಾಮೀಣ ಭಾಗದ ಪ್ರತಿಭೆಗಳನ್ನು ಹೊರತರುವ ನಿಟ್ಟಿನಲ್ಲಿ ಸರಕಾರದಿಂದ ವಿವಿಧ ಕ್ರೀಡಾಕೂಟ ಆಯೋಜಿಸುತ್ತಿದೆ ಎಂದರು.
ಕ್ರೀಡಾಪಟುಗಳು ವೇದಿಕೆ ಹಾಗೂ ಅವಕಾಶ ಸಿಕ್ಕಲ್ಲಿ ಸದುಪಯೋಗ ಪಡೆದುಕೊಂಡಲ್ಲಿ ಉನ್ನತ ಮಟ್ಟಕ್ಕೆ ಬರಲು ಸಾಧ್ಯವಾಗುತ್ತದೆ. ತೋವಿವಿಯಲ್ಲಿ ವರ್ಷದಿಂದ ವರ್ಷಕ್ಕೆ ಕ್ರೀಡೆಗಳಲ್ಲಿ ಮೆಡಲ್‌ಗಳ ಸಂಖ್ಯೆ ಹೆಚ್ಚಾಗುತ್ತಿವೆ. ಮೆಡಲ್‌ಗಳ ಸಂಖ್ಯೆ ಹೆಚ್ಚಾಗುತ್ತಾ ಇರಬೇಕು. ಶಿಕ್ಷಣದ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ತಿಳಿಸಿದ ಅವರು ಕ್ರೀಡಾಪಟುಗಳು ಎಷ್ಟೇ ಎತ್ತರಕ್ಕೆ ಹೋದರು ಶಿಸ್ತು ಪಾಲನೆಯಾಗಬೇಕು. ನಿರ್ಣಾಯಕರ ನಿರ್ಣಯಕ್ಕೆ ಬದ್ದರಾಗಿರಲು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ತೋವಿವಿಯ ಕುಲಪತಿ ಡಾ|ಕೆ. ಎಂ.ಇಂದಿರೇಶ ಮಾತನಾಡಿ, ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು. ದೇಶದ ಪ್ರಧಾನಮಂತ್ರಿಗಳು ಧಾರವಾಡದಲ್ಲಿ ಇತ್ತೀಚೆಗೆ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿದ್ದಾರೆ. ಯುವಜನರಲ್ಲಿರುವ ಕಲೆಯನ್ನು ಹೊರಹಾಕುವ ಕಾರ್ಯ ನಡೆಯುತ್ತಿದೆ. ಕಲೆ ಮತ್ತು ಕ್ರೀಡೆಗಳಲ್ಲಿ ಯುವಕರು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಂಡಲ್ಲಿ ದೈಹಿಕವಾಗಿ ಆರೋಗ್ಯರಾಗಲು ಸಾಧ್ಯ ಎಂದರು.
ತೋವಿವಿಯ ಕ್ರೀಡಾಕೂಟಗಳಲ್ಲಿ 9 ಕಾಲೇಜಿನ ಒಟ್ಟು 360 ಕ್ರೀಡಾಪಟುಗಳು ಭಾಗವಹಿಸುತ್ತಿದ್ದೀರಿ. ತೋವಿವಿಯಲ್ಲಿ ಮುಖ್ಯ ಆವರಣ ಹೊರತುಪಡಿಸಿ ಉಳಿದ ಯಾವ ಕಾಲೇಜುಗಳಲ್ಲಿ ಮೈದಾನ ಇರುವುದಿಲ್ಲ. ಮೈದಾನ ನಿರ್ಮಾಣಕ್ಕೆ ಖೇಲೋ ಇಂಡಿಯಾ ಯೋಜನೆಯಡಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅನುದಾನ ಬಂದಲ್ಲಿ ತೋವಿವಿಯ ವ್ಯಾಪ್ತಿಯ ಎಲ್ಲ ಕಾಲೇಜುಗಳಲ್ಲಿ ಕ್ರೀಡಾಕೂಟಕ್ಕೆ ಬೇಕಾಗುವ ಮೂಲಭೂತ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತಿದೆ ಎಂದರು.
ತೋಟಗಾರಿಕೆ ವಿವಿಯ ದೈಹಿಕ ಶಿಕ್ಷಣ ಉಪ ನಿರ್ದೇಶಕ ಡಾ| ರಾಜಶೇಖರ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತೋವಿವಿಯ ಡೀನ್‌ಗಳಾದ ರಾಮಚಂದ್ರ ನಾಯಕ್, ಬಾಲಾಜಿ ಕುಲಕರ್ಣಿ, ಪ್ರಾದ್ಯಾಪಕ ಡಾ| ಪ್ರಭುಲಿಂಗ ಜಿ., ಶಿಕ್ಷಣ ನಿರ್ದೇಶಕ ಡಾ| ಎನ್.ಕೆ. ಹೆಗಡೆ, ಹಣಕಾಸು ನಿಯಂತ್ರಣಾಧಿಕಾರಿ ಶಾಂತಾ ಖಡಿ, ವಿಸ್ತರಣಾ ನಿರ್ದೇಶಕ ಎಸ್.ಐ.ಅಥಣಿ, ಸಂಶೋಧನಾ ನಿರ್ದೇಶಕ ಮಹೇಶ್ವರಪ್ಪ ಎಚ್.ಪಿ., ಆಸ್ತಿ ಅಧಿಕಾರಿ
ವಿ.ಎಂ.ಭಜಂತ್ರಿ, ಆಡಳಿತಾ ಧಿಕಾರಿ ಪಿ.ಬಿ.ಹಳೆಮನಿ ಮುಂತಾದವರು ಉಪಸ್ಥಿತರಿದ್ದರು.