ಮೂಡುಬಿದಿರೆ: ಮಂಗಳೂರು ವಿವಿ ಅಂತರ್ ಕಾಲೇಜು ಆ್ಯತ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಕಾಲೇಜಿನ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆಗೈದಿದ್ದಾರೆ.
ಪುರುಷರ ಹಾಗೂ ಮಹಿಳೆಯರ ಎರಡೂ ವಿಭಾಗಗಳಲ್ಲಿ ಸತತ 22ನೇ ಬಾರಿ ಸಮಗ್ರ ತಂಡ ಪ್ರಶಸ್ತಿ ಜಯಿಸಿದ್ದಾರೆ. ದ್ವಿತೀಯ ಸ್ಥಾನ ಪಡೆದ ತಂಡಕ್ಕಿಂತ 460 ಹೆಚ್ಚು ಅಂಕ ಸಂಪಾದಿಸುವುದರ ಜತೆಗೆ 11 ನೂತನ ಕೂಟ ದಾಖಲೆಯನ್ನು ನಿರ್ಮಿಸಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ತಿಳಿಸಿದರು.
ಈ ಸಾಧನೆಯೊಂದಿಗೆ ಮಂಗಳೂರು ವಿವಿಯ ಆ್ಯತ್ಲೆಟಿಕ್ಸ್‌ನ 46 ವಿಭಾಗಗಳಲ್ಲಿ ಈಗಾಗಲೇ ಆಳ್ವಾಸ್ ವಿದ್ಯಾರ್ಥಿಗಳು ನೂತನ ಕೂಟದಾಖಲೆ ನಿರ್ಮಿಸಿದ್ದರೆ, ಬಾಕಿ ಉಳಿದಿದ್ದ ಹೆಪಾrತ್ಲಾನ್ ವಿಭಾಗದಲ್ಲೂ ಈ ಬಾರಿ ಕೂಟದಾಖಲೆ ನಿರ್ಮಿಸಿದರು. ಇದರೊಂದಿಗೆ 47 ವಿಭಾಗಗಳಲ್ಲೂ ದಾಖಲೆ ನಿರ್ಮಿಸಿದ ದೇಶದ ಏಕೈಕ ಕಾಲೇಜು ಎಂಬ ಹಿರಿಮೆಗೆ ಪಾತ್ರವಾಯಿತು.
ಕೂಟ ದಾಖಲೆಗೈದ 11 ಮಂದಿ ಕ್ರೀಡಾಪಟುಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ತಲಾ 10,000 ರೂ. ನಗದು ಬಹುಮಾನವನ್ನು ನೀಡಲಾಯಿತು.
ಅಂತರ್ ವಿವಿ ಕ್ರೀಡಾಕೂಟ ಡಿ. 26ರಿಂದ 31ರ ವರೆಗೆ ಒಡಿಶಾದ ಕಳಿಂಗ ವಿವಿ ಯಲ್ಲಿ ಜರಗಲಿರುವ ರಾಷ್ಟ್ರ ಮಟ್ಟದ ಅಂತರ್ ವಿವಿ ಆ್ಯತ್ಲೆಟಿಕ್ಸ್‌ನಲ್ಲಿ ಆಳ್ವಾಸ್ ಕಾಲೇಜಿನ 75 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.