ತರಗತಿ ಕೊಠಡಿ ಬರೀ ಡೆಸ್ಕಾ, ಬೆಂಚು, ಬೋರ್ಡ್, ಕಿಟಕಿ ಬಾಗಿಲುಗಳಿರುವ ಜಾಗವಲ್ಲ. ಇದು ವಿದ್ಯಾರ್ಥಿ, ಶಿಕ್ಷಕರಲ್ಲಿ ಸಾವಿರಾರು ಸವಿಸವಿ ನೆನಪುಗಳನ್ನು ಸೃಷ್ಟಿಸುವ, ಹೊಸ ಹುರುಪನ್ನು ಬಿತ್ತುವ ಜಾಗ. ಕಲಿಕೆಗೆ ಜೀವ ತುಂಬುವ ಮಾಂತ್ರಿಕ ಸ್ಥಳವೇ ಈ ತರಗತಿ ಕೊಠಡಿಗಳು.
ವಿದ್ಯಾರ್ಥಿ ಜೀವನದಲ್ಲಿ ನನ್ನ ಅತ್ಯುತ್ತಮ ಭಾಗವೆಂದರೆ ಅದು ಪ್ರೌಢ ಶಿಕ್ಷಣದ ಸಮಯ. ಮುಂದಿನ ಬೆಂಚಿನಲ್ಲಿ ಕುಳಿತು ಶಿಕ್ಷಕರಿಗೆ ಸ್ಪಷ್ಟವಾಗಿ ಕಾಣಬಾರದೆಂದು ನಾನು ಹಾಗೂ ಸಹಪಾಠಿಗಳು ಅವರಿಂದ ಆದಷ್ಟು ದೂರವಿದ್ದು, ಗೋಡೆಯ ಹತ್ತಿರವಿರುವ ಕೊನೆಯ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದೆವು. ಇದು ನಮ್ಮ ರಹಸ್ಯ ಅಡುಗೆ ಸ್ಥಳವೂ ಆಗಿತ್ತು. ಹೌದು. ನಾನು ಹಾಗೂ ನನ್ನ ಸಹಪಾಠಿಗಳು ಇಲ್ಲಿ ಕುಳಿತು ಒಂದು ಚಿಕ್ಕ ಸ್ಟೋರ್ ರೂಮನ್ನೇ ತೆರೆದಿದ್ದೆವು. ಇಲ್ಲಿ ಉಪ್ಪು, ಮೆಣಸಿನ ಹುಡಿ, ಚಾಕು… ಹೀಗೆ ನಮ್ಮ ತರಗತಿಯಲ್ಲಿ ಯಾರಿಗೆ ಬೇಕಾದರೂ ನಮ್ಮಲ್ಲಿ ಲಭ್ಯವಿರುತ್ತಿತ್ತು.
ನಮ್ಮ ತರಗತಿಯ ಹುಡುಗರು ಊಟದ ವಿರಾಮದ ಬಳಿಕ ಶಾಲೆಯ ಬದಿಯಲ್ಲಿರುವ ಮಾವಿನ ಮರಕ್ಕೆ ಕಲ್ಲು ಬಿಸಾಡಿ ಸುಮಾರು 4ರಿಂದ 5 ಮಾವಿನ ಕಾಯಿಗಳನ್ನು ತಂದು ಕೊಡುತ್ತಿದ್ದರು. ಊಟದ ಅನಂತರದ ಮೊದಲ ತರಗತಿಯಲ್ಲಿ ನಮ್ಮದೇ ಕ್ಯಾಟರಿಂಗ್ ವ್ಯವಸ್ಥೆಯಂತೆ ಈ ಕಾಯಿಗಳನ್ನು ಸಮವಾಗಿ ಚಿಕ್ಕ ಚಿಕ್ಕ ತುಂಡುಗಳಂತೆ ಕತ್ತರಿಸಿ, ಉಪ್ಪು ಮತ್ತು ಮೆಣಸಿನ ಹುಡಿಯನ್ನು ಸಮಪ್ರಮಾಣದಲ್ಲಿ ಸಿಂಪಡಿಸಿ ಇಡೀ ತರಗತಿಗೆ ಒಂದೊಂದು ತುಂಡುಗಳನ್ನು ಕೊಡುತ್ತಿದ್ದೆವು. ಇಂದು ಮಾವಿನ ಕಾಯಿಯಾದರೆ ಮರುದಿನ ಪೇರಳೆ, ಬಿಂಬುಳಿ, ಹುಣಸೇ ಹಣ್ಣು, ಹಣವಿದ್ದರೆ ಅನಾನಸು ಹೀಗೆ ಒಂದಲ್ಲಾ ಒಂದು ರೀತಿಯ ತಿಂಡಿ ತಿನಿಸುಗಳನ್ನು ಹಂಚಿ ತಿನ್ನುತ್ತಿದ್ದೆವು.
ಕೆಲವೊಮ್ಮೆ ಉಪ್ಪು – ಮೆಣಸಿನ ಹುಡಿ ಸಿಂಪಡಿಸುವಾಗ ಹೆಚ್ಚುಕಮ್ಮಿಯಾಗಿ ನಮ್ಮ ಬಾಯಲ್ಲಿ ಖಾರ ಸ್ಫೋಟವಾದ್ದೂ ಇದೆ. ಇವೆಲ್ಲಾ ನಮಗೆ ತರಗತಿಯ ಮಧ್ಯೆ ನಮ್ಮದೇ ರೀತಿಯ ಪಾರ್ಟಿಯಂತಿತ್ತು. ಕೆಲವೊಮ್ಮೆ ಶಿಕ್ಷಕರು ಇಲ್ಲಿ ಯಾರೋ ಉಪ್ಪು ಖಾರ ಹಾಕಿ ಏನೋ ತಿನ್ನುತ್ತಿತ್ತಾರೆ ಎಂದು ಹೇಳಿದ್ದೂ ಇದೆ. ನಾವು ನಮ್ಮ ತಪ್ಪನ್ನು ಮುಚ್ಚಿ ಹಾಕಲು, ಮೇಡಂ ಬಹುಶಃ ಅದು ಪಕ್ಕದ ತರಗತಿಯಲ್ಲಿರಬಹುದೋ ಏನೋ ಎಂದು ಇನ್ನೊಂದು ತರಗತಿಯವರನ್ನು ದೂರಿದ್ದೂ ಇದೆ.
ಹೀಗೆ ತರಗತಿಗಳು ಕೇವಲ ಪಾಠಕ್ಕೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ವಿದ್ಯಾರ್ಥಿಗಳ ಸಾವಿರಾರು ಕೀಟಲೆ, ಮೋಜು ಮಸ್ತಿಯ ನೆನಪುಗಳಿವೆ. ಮೊದಲ ದಿನ ಅಪರಿಚಿತರಾಗಿದ್ದ ನಾವುಗಳು ದಿನ ಕಳೆದಂತೆ ಪರಿಚಿತರಾಗಿ ಅನಂತರ ಗೆಳೆಯರಾಗುತ್ತೇವೆ ಹಾಗೂ ಸ್ನೇಹ ಸಂಬಂಧಗಳು ಬೆಳೆಯುತ್ತದೆ. ಗುಂಪು ಚರ್ಚೆಗಳಿಂದ ಮೋಜಿನ ಚಟುವಟಿಕೆಗಳವರೆಗೆ ತರಗತಿಗಳು ಶೈಕ್ಷಣಿಕ ವಾತಾವರಣಕ್ಕೆ ಪರಿಪೂರ್ಣ ಸ್ಥಳವಾಗಿದೆ.
-ಸನ ಶೇಕ್ ಮುಬಿನ್
ಸಂತ ಅಲೋಶಿಯಸ್‌ಕಾಲೇಜು ಮಂಗಳೂರು