ಕಾಲೇಜು ಎಂಬುದು ಎಲ್ಲರ ಬದುಕಿನಲ್ಲಿ ಒಂದು ನೆನಪುಗಳ ಪುಟವಿದ್ದ ಹಾಗೆ. ಅದು ತಿರುವಿ ಹೋದರೂ, ಕಳೆದು ಹೋದರೂ ಬದುಕಿಗೆ ಹೊತ್ತು ಕೊಟ್ಟ ನೆನಪುಗಳು ಎಂದಿಗೂ ಮರೆಯಾಗುವುದಿಲ್ಲ. ಸ್ನೇಹಿತರನ್ನು ಭೇಟಿಯಾದಾಗ ಸಿಗುವ ಖುಷಿ, ಕಾಲೇಜಿನ ಕಾರ್ಯಕ್ರಮಗಳಲ್ಲಿದ್ದ ಉತ್ಸಾಹ, ಕುತೂಹಲ, ಒಂದೇ ಎರಡೇ ಕಾಲೇಜಿನ ಅನುಭವಗಳು. ಮೌನವಾಗಿ ಕುಳಿತ ಕಾಲೇಜಿನ ಗೇಟಿನಿಂದ ಹಿಡಿದು ಗಿಜಿ ಗಿಜಿ ಶಬ್ದ ಗುನುಗುವ ತರಗತಿಯ ಗೋಡೆಗಳ ವರೆಗೂ ಎಲ್ಲವೂ ಯಾರದೋ ಬದುಕಿನ ಸುಂದರ ಕ್ಷಣಗಳು.
ಹರೆಯದ ಹೊಸ್ತಿಲಿನಲ್ಲಿ ಕಾಲೇಜಿನಲ್ಲಿ ಹೊಸ ಕನಸುಗಳ ಬೀಜ ಬಿತ್ತುವಾಗ ಅವುಗಳಿಗೆ ಮೂಕಸಾಕ್ಷಿಯಾಗುವುದೇ ಈ ಕಾರಿಡಾರ್‌ಗಳು. ಸದ್ದಿಲ್ಲದೇ ಹುದುಗಿ ಹೋದ ಸಾವಿರ ಲಕ್ಷ ಕಥೆಗಳನ್ನು ಇದು ಕೇಳುತ್ತದೆ. ತನ್ನಲ್ಲೇ ಅಡಗಿಸಿಟ್ಟುಕೊಳ್ಳುತ್ತದೆ. ಯಾರದೋ ಮೌನಕ್ಕೆ, ಮತ್ಯಾರಧ್ದೋ ಸಂಭ್ರಮಕ್ಕೆ, ಮಗದೊಬ್ಬರ ಪ್ರೇಮಕ್ಕೆ ಇದು ಜತೆಯಾಗುತ್ತದೆ. ತನ್ನಲ್ಲೇ ನವಿರಾದ ಲಕ್ಷ ಲಕ್ಷ ಭಾವಗಳನ್ನು ಬಚ್ಚಿಟ್ಟುಕೊಳ್ಳುತ್ತಾ, ಹಳಬರನ್ನು ಬೀಳ್ಕೊಡುತ್ತಾ ಹೊಸಬರ ಸ್ವಾಗತಕ್ಕೆ ನಿಲ್ಲುತ್ತದೆ. ನಾವು ನಡೆದ ಪ್ರತೀ ಹೆಜ್ಜೆ ಗುರುತಿಗೂ ಲೆಕ್ಕ ತಪ್ಪದಂತೆ ಸುಂದರ ಕ್ಷಣಗಳನ್ನು ಕಟ್ಟಿ ಕೊಡುತ್ತಾ ಹೋಗುತ್ತದೆ.
ಸೂಕ್ಷ್ಮವಾಗಿ ಕಾಲೇಜಿನ ಕಾರಿಡಾರ್ ಗಮನಿಸಿದರೂ ಸಾಕು ಅಲ್ಲಿ ಲಕ್ಷ ಲಕ್ಷ ಭಾವಗಳು, ಸಾವಿರಾರು ಕಥೆಗಳು, ನೂರಾರು ಸನ್ನೆಗಳು, ಕನಿಷ್ಠ ಪಕ್ಷ ಹತ್ತಾದರೂ ಶತ್ರು ನೋಟಗಳ ಬೆಂಕಿ ಉಂಡೆಗಳು ಕಾಣಸಿಗುತ್ತದೆ. ಸ್ನೇಹಿತರ ಗುಂಪಿನಲ್ಲಾಗುವ ಮನಸ್ತಾಪಗಳಿಗೆ ಇದೇ ಮೂಕಪ್ರೇಕ್ಷಕ. ಅಪರಿಚಿತರಲ್ಲಿ ಪರಿಚಯದ ನಗು ಸೂಸಲು ಇದೇ ವೇದಿಕೆ, ಹರಟೆ ಹೊಡೆಯಲು ವಿದ್ಯಾರ್ಥಿಗಳಿಗೆ ಇದೇ ಕಟ್ಟೆ ಪಂಚಾಯ್ತಿ, ಅಷ್ಟೇ ಏಕೆ ಒಮ್ಮೆ ನೆನಪು ಮಾಡಿಕೊಳ್ಳಿ ಅದೆಷ್ಟು ಬಾರಿ ತರಗತಿಯನ್ನು ಮುಗಿಸಿ ಇಲ್ಲಿ ನಿಟ್ಟುಸಿರು ಚೆಲ್ಲಿಲ್ಲ? ಅದೆಷ್ಟು ಬಾರಿ ಶಿಕ್ಷಕರ ಪಾಠವನ್ನು ಇಲ್ಲಿ ವಿಮರ್ಶಿಸಿಲ್ಲ? ಪರೀಕ್ಷೆಯ ದಿನ ಪಾಠಗಳನ್ನು ಸ್ನೇಹಿತರಿಗೆ ಹೇಳಿಕೊಟ್ಟಿಲ್ಲ? ಪ್ರಿನ್ಸಿಪಾಲರ ಭಯವಿದ್ದರೂ ಕದ್ದು ಮುಚ್ಚಿ ಇದೇ ಜಾಗದಲ್ಲಿ ಅದೆಷ್ಟು ಬಾರಿ ಮೊಬೈಲ್ ಬಳಸಿಲ್ಲ?
ಆ ಸರ್ ಅಂತೂ ಕ್ಲಾಸ್ ಬಿಡೋದೇ ಇಲ್ಲ ಕಣೇ, ಆ ಮ್ಯಾಮ್ ಯಾವಾಗ್ಲೂ ಬೈತಾನೇ ಇರ್ತಾರೆ, ಮಗಾ ಇವತ್ತು ಒಂದಿನ ಕ್ಲಾಸ್ ಬಂಕ್ ಮಾಡೋಣ, ನಿನ್ನೆ ಮ್ಯಾಚ್ ನೋಡಿದ್ಯಾ?, ನಂಗೊತ್ತಿತ್ತು ಹೀಗೆ ಆಗತ್ತೆ ಅಂತ… ಹೀಗೆ ಹತ್ತು ಹಲವು ವಾಕ್ಯಗಳ ಪ್ರಯೋಗಗಳನ್ನು ಒಂದೇ ಸೂರಿನಡಿಯಲ್ಲಿ ಕೇಳ ಸಿಗುವುದೆಂದರೆ ಅದು ಕಾರಿಡಾರ್‌ನಲ್ಲಿ ಮಾತ್ರ. ಇಲ್ಲಿ ಹುಡುಗಿಯರ ಹರಟೆ, ಹುಡುಗರ ಚಿತ್ರ ವಿಚಿತ್ರ ತುಂಟಾಟ ಎಲ್ಲವೂ ನಡೆಯುತ್ತವೆ. ಎಷ್ಟೋ ಬಾರಿ ತರಗತಿಯನ್ನೇ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಶಿಕ್ಷಕರು ಕೂಡ ಕಾರಿಡಾರ್‌ನಲ್ಲಿ ನಡೆಯುವ ಗಲಾಟೆಗಳಿಗೆ, ಅವಾಂತರಗಳಿಗೆ ತಲೆ ಮೇಲೆ ಕೈ ಹೊತ್ತು ಕುಳಿತುಬಿಡುತ್ತಾರೆ. ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತ ಅಲ್ಪ ಖುಷಿ ಕಾಣುತ್ತಾರೆ, ಆದರೆ ಏನೂ ಬದಲಾಗುವುದಿಲ್ಲ. ಕಾರಿಡಾರ್‌ನ ಶಬ್ದ ಎಂದಿಗೂ ಶಾಂತವಾಗುವುದಿಲ್ಲ.
ನಮ್ಮಲ್ಲಿ ಹೊಸ ಬಂಧಗಳನ್ನು ಬೆಸೆಯುವುದೇ ಈ ಕಾರಿಡಾರ್‌ಗಳು. ಹಾಗೇ ನಡೆದು ಹೋಗುವಾಗ ಎದುರಿಗೆ ಬರುವ ಖಾಯಂ ಮುಖ ನೀಡುವ ಮುಗುಳುನಗೆ ಹೊಸ ಬಾಂಧವ್ಯಕ್ಕೆ ಬುನಾದಿಯಾಗುತ್ತದೆ. ರಕ್ತ ಸಂಬಂಧವೇ ಇಲ್ಲದ ಯಾರೋ ಸಹೋದರನಾಗುತ್ತಾನೆ, ಸಹೋದರಿಯಾಗುತ್ತಾಳೆ, ಬೆಂಚಿನ ಮೇಲೆ ಒಟ್ಟಿಗೆ ಕೂರದವರು ಇಲ್ಲಿ ಸ್ನೇಹಿತರಾಗುತ್ತಾರೆ. ಕದ್ದು ಕೇಳಿದ ಕಿವಿಗಳು ಗುಟ್ಟು ಬಿಟ್ಟುಕೊಡದ ಆಪ್ತರಾಗುತ್ತಾರೆ. ಸದ್ದೇ ಇಲ್ಲದ ಮುಗ್ಧ ಹೃದಯಗಳಲ್ಲಿ ಜಿನುಗಿದ ಸಾಕಷ್ಟು ಪಿಸುದನಿಗಳು ಕಾರಿಡಾರ್‌ನ ಅಂಚಿನಲ್ಲಿ ಮರೆಯಾಗಿ ಹೋಗಿ ಬಿಡುತ್ತದೆ. ಪರೀಕ್ಷೆ ನಡೆಯುವಾಗ ಕಾರಿಡಾರ್ ಶಾಂತವಾಗಿದ್ದರೂ ಮುಗಿದ ಮರುಗಳಿಗೆಯಲ್ಲೇ ಮತ್ತೆ ಸದ್ದು ಮಾಡುತ್ತದೆ. ನಮಗೆ ತಿಳಿದೋ ತಿಳಿಯದೆಯೋ ಕಾರಿಡಾರ್‌ನ ಮೌನವನ್ನು ನಾವು ಸಹಿಸುವುದಿಲ್ಲ. ಒಂದು ದಿನ ಕಾರಿಡಾರ್‌ನಲ್ಲಿ ಜನರ ಸಂಖ್ಯೆ ಕಡಿಮೆ ಇದ್ದರೂ ಸಾಕು ಅದೇನೋ ಒಂದು ಖಾಲಿತನ.
ವಾಸ್ತವಕ್ಕೆ ಕಾರಿಡಾರ್‌ನಲ್ಲಿ ಏನೂ ಇಲ್ಲ. ಆದರೆ ಎಲ್ಲೂ ಸಿಗದ ಒಂದು ಸುಂದರ ನೆಮ್ಮದಿ ಅಲ್ಲೇ ಸಿಗುವುದು. ಅಲ್ಲೊಂದು ಜೀವಂತಿಕೆಯ ಸೆಲೆಯಿದೆ. ಲೆಕ್ಕಾಚಾರವಿಲ್ಲದೇ ಆಡಿದ ಮಾತುಗಳ ನೆನಪುಗಳಿವೆ. ಮುಖವಾಡವೇ ಇಲ್ಲದೇ ಬದುಕಿದ ಬದುಕಿನ ಒಂದಿಷ್ಟು ಗಳಿಗೆಗಳಿವೆ. ಕಾಲೇಜಿನ ಅಂತಿಮ ವರ್ಷ ಮುಗಿದ ತತ್‌ಕ್ಷಣ ಕಾರಿಡಾರ್ ಖಾಲಿ ಅನಿಸಲು ಶುರುವಾಗುತ್ತದೆ. ಅಲ್ಲಿ ಮೊದಲಿದ್ದ ಗಿಜಿ ಗಿಜಿ ಇರುವುದಿಲ್ಲ. ಇದ್ದರೂ ಅದರಲ್ಲಿ ನಾವು ಇರುವುದಿಲ್ಲ. ಅಲ್ಲಿ ನಿಂತು ಕಿರುಚಾಡಿದ ಗಳಿಗೆಗಳೆಲ್ಲಾ ಕೇವಲ ಚಿತ್ರಪಟಗಳಾಗಿರುತ್ತದೆ. ಅಲ್ಲಿ ಜಗಳವಾಡಿದ ಶತ್ರುವೂ ಇರುವುದಿಲ್ಲ, ಕೈ ಹಿಡಿದು ನಡೆಸಿದ ಮಿತ್ರನೂ ಇರುವುದಿಲ್ಲ. ಬದುಕ ರಂಗದಲ್ಲಿ ಮುದ್ದಾದ ನೆನಪುಗಳನ್ನು ಕೊಟ್ಟ ಕಾರಿಡಾರ್ ಮಾತ್ರ ಮೌನವಾಗಿ ನಿಂತಿರುತ್ತದೆ.
–
ಶಿಲ್ಪಾ ಪೂಜಾರಿ
ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಶಿರಸಿ