Advertisement

‘ಪ್ರೇಮದ ಹೂಗಾರ ಈ ಹಾಡುಗಾರ… ಹೂ ನೀಡುತಾನೆ.. ಮುಳು ಬೇಡುತಾನೆ..’: ಹೋಗಿ ಬನ್ನಿ SPB

03:45 PM Sep 25, 2020 | Hari Prasad |

ಮಣಿಪಾಲ: ರವಿಚಂದ್ರನ್ ಅಭಿನಯದ ‘ಚಿಕ್ಕೆಜಮಾನ್ರು’ ಚಿತ್ರದಲ್ಲಿ ಒಂದು ಸೊಗಸಾದ ಹಾಡಿದೆ. ಸಂಗೀತ ನಿಧಿ ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತದಲ್ಲಿ ಮೂಡಿಬಂದಿರುವ ಆ ಸೊಗಸಾದ ಗೀತೆಗೆ ಬಾಲಸುಬ್ರಹ್ಮಣ್ಯಂ ಅವರು ಅದೆಷ್ಟು ಭಾವಪೂರ್ಣವಾಗಿ ಧ್ವನಿಯಾಗಿದ್ದಾರೆಂದರೆ ಅದನ್ನು ಕೇಳಿಯೇ ಅನುಭವಿಸಬೇಕು.

Advertisement

ಆ ಹಾಡಿನ ಪಲ್ಲವಿ ಹೀಗಿದೆ:

‘ಪ್ರೇಮದ ಹೂಗಾರ ಈ ಹಾಡುಗಾರ

ಹೂ ನೀಡುತಾನೆ ಮುಳು ಬೇಡುತಾನೆ

ಬೆಲ್ಲದ ಬಣಗಾರ ಈ ಹಾಡುಗಾರ

Advertisement

ಸಿಹಿ ನೀಡುತಾನೆ ಕಹಿ ಕೇಳುತಾನೆ

ಮಣ್ಣಿನ ಮಮಕಾರ ಕಂಪಿರುವ

ಮಾನದ ಮಣಿಹಾರ ಹೊಂದಿರುವ

ಈ ಭಾವ ಜೀವ…’

ಇದನ್ನೂ ಓದಿ: ಫಲಿಸದ ಅಭಿಮಾನಿಗಳ ಹಾರೈಕೆ ; ಗಾನ ನಿಧಿ ಎಸ್.ಪಿ. ಬಾಲಸುಬ್ರಮಣ್ಯಂ ಸ್ವರ ಲೀನ

ಈ ಹಾಡಿನಲ್ಲಿ ಸ್ವಲ್ಪ ಕ್ಲಿಷ್ಟವೆಣಿಸುವ ಕನ್ನಡ ಪದಗಳನ್ನೇ ಹಂಸಲೇಖ ಬಳಸಿದ್ದಾರೆ, ಅದಕ್ಕೆ ಧ್ವನಿಯಾಗಿರುವ ಎಸ್.ಪಿ.ಬಿ. ಅವರು ಎಲ್ಲೂ ಆ ಸಾಲುಗಳು ಶೋತೃಗಳಿಗೆ ಕನ್ನಡ ಮಣ್ಣಿನ ಸೊಗಡಿನಿಂದ ಹೊರತಾದ ಕಂಠದಿಂದ ಮೂಡಿಬಂದ ಹಾಡೆಂಬ ಕಲ್ಪನೆಯೂ ಸುಳಿಯದಂತೆ ಅಷ್ಟು ಭಾವಪೂರ್ಣವಾಗಿ ಹಾಡಿದ್ದಾರೆ.

ಹೌದು, ಆ ಒಂದು ಕಂಠ ದೇಶಾದ್ಯಂತ ಕೋಟ್ಯಂತರ ಕಿವಿಗಳಿಗೆ ಚಿರಪರಿಚಿತವಾಗಿತ್ತು. ಅದರಿಂದ ಹೊರಡುವ ಒಂದೊಂದು ಹಾಡೂ ಚಿತ್ರ ಸಂಗೀತ ಪ್ರೇಮಿಗಳ ಎದೆಯೊಳಗೆ ಸಪ್ತ ಸ್ವರದ ಮಿಡಿತವನ್ನುಂಟುಮಾಡುತ್ತಿತ್ತು. ಪ್ರೇಮಿಗಳ ಹೃದಯೊದಳಗೆ ಬೆಚ್ಚನೆಯ ಹಿತವನ್ನುಂಟುಮಾಡುವ ಪ್ರೇಮ ಗೀತೆಗಳು, ವಿರಹಿಗಳ ವಿರಹದ ನಿಟ್ಟುಸಿರಿಗೆ ಸಹಿ ಹಾಕುವಂತಿದ್ದ ವಿರಹ ಗೀತೆಗಳು, ತಂದೆಯೊಬ್ಬನ ನೋವಿಗೆ ಕನ್ನಡಿ ಹಿಡಿಯುವಂತಿದ್ದ ಭಾವುಕ ಗೀತೆಗಳು, ನಾಡು-ನುಡಿಯ ಹಿರಿಮೆಯನ್ನು ಬಾನೆತ್ತರಕ್ಕೆ ಮುಟ್ಟಿಸಬಲ್ಲ ಗರಿಮೆಯ ಹಾಡುಗಳು… ಒಂದೇ ಎರಡೇ?

ಕನ್ನಡ ಮಾತ್ರವಲ್ಲದೆ ದೇಶದ 16 ಭಾಷೆಗಳಲ್ಲಿ 40 ಸಾವಿರ ಗೀತೆಗಳಿಗೆ ಧ್ವನಿಯಾದ ಆ ಕಂಠ ಇಂದು ಮೌನವಾಗಿದೆ… ಅಲ್ಲೆಲ್ಲೋ, ‘ಕೇಳದೆ ನಿಮಗೀಗ ದೂರದಲ್ಲಿ ಯಾರೋ ಹಾಡು ಹೇಳಿದಂತೆ..’ ಎಂಬ ಹಾಡು ಕೇಳಿಸುತ್ತಿದ್ದರೆ ಅದು ಅದೇ ಕಂಠ.. ದೇಶದ ಮನೆ-ಮನಗಳಲ್ಲಿ ಅಚ್ಚೊತ್ತಿದ್ದ ಮಧುರ ಕಂಠ, ಎಸ್.ಪಿ. ಬಾಲಸುಬ್ರಮಣ್ಯಂ ಎಂಬ ಸ್ವರ ಮಾಂತ್ರಿಕನ ಮಾಂತ್ರಿಕ ಸ್ವರದ ಕಂಠ..!

1946ರ ಜೂನ್ 6ರಂದು ನೆರೆಯ ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಜನಿಸಿದ ಶ್ರೀಪತಿ ಪಂಡಿತಾರಾಧ್ಯಲು ಬಾಲಸುಬ್ರಮಣ್ಯಂ ಎಂಬ ಬಾಲಕ ಭಾರತೀಯ ಚಿತ್ರರಂಗದಲ್ಲಿ ಎಸ್.ಪಿ. ಬಾಲಸುಬ್ರಮಣ್ಯಂ ಆಗಿ, ಅಭಿಮಾನಿಗಳ ಹೃದಯದಲ್ಲಿ ಎಸ್.ಪಿ.ಬಿ.ಯಾಗಿ ಶಾಶ್ವತ ಸ್ಥಾನವನ್ನು ಸಂಪಾದಿಸುವ ಗಾಯಕರಾಗುತ್ತಾರೆಂದು ಸ್ವತಃ ಅವರ ಹೆತ್ತವರಿಗೂ ಊಹೆ ಇದ್ದಿರಲಾರದು.

ಇದನ್ನೂ ಓದಿ: ಎಸ್‍ಪಿಬಿ ಎಂಬ ಸ್ವರ ಮಾಣಿಕ್ಯ: ಹರಿಕಥೆ ದಾಸರ ಮಗ ಗಾನ ಸರಸ್ವತಿಯ ದಾಸನಾದ ಹಿನ್ನಲೆ

ದಕ್ಷಿಣ ಭಾರತ ಚಿತ್ರರಂಗದಲ್ಲಿ ಧಿಗ್ಗಜ ಸಂಗೀತ ನಿರ್ದೇಶಕರು, ಚಿತ್ರ ನಿರ್ದೇಶಕರು ಮತ್ತು ನಾಯಕ ನಟರಿದ್ದ ಸುವರ್ಣ ಯುಗದಲ್ಲಿ ಚಿತ್ರಪ್ರೇಮಿಗಳಿಗೆ ವರದಾನವೆಂಬಂತೆ ದಕ್ಕಿದ್ದು ಎಸ್.ಪಿ.ಬಿ. ಧ್ವನಿ.

ಕನ್ನಡದಲ್ಲೇ ನೋಡಿ, ಆ ಕಾಲದ ಧಿಗ್ಗಜರಾಗಿದ್ದ ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರವಿಚಂದ್ರನ್ ಅವರೆಲ್ಲರ ಮ್ಯೂಸಿಕಲ್ ಹಿಟ್ ಚಿತ್ರಗಳಲ್ಲಿ ಇರುವುದು ಬಹುತೇಕ ಬಾಲು ಅವರ ಧ್ವನಿಯೇ.

ಬಳಿಕದ ತಲೆಮಾರಿನ ನಟರಾದ ಶಿವರಾಜ್ ಕುಮಾರ್, ಸುನಿಲ್, ರಾಘವೇಂದ್ರ ರಾಜ್ ಕುಮಾರ್, ರಮೇಶ್ ಅವರವಿಂದ್ ನಟಿಸಿರುವ ಚಿತ್ರಗಳಿಗೂ ಹಾಡಿನ ಧ್ವನಿಯಾಗಿರುವ ಖ್ಯಾತಿ ಎಸ್.ಪಿ.ಬಿ. ಅವರದ್ದು.

ಒಂದೆರಡು ಹಿಟ್ ಹಾಡುಗಳೇ…?, ಹೇಳುತ್ತಾ ಹೋದರೇ ಅದೇ ಒಂದು ಸುದೀರ್ಘ ಲೇಖನವಾಗಬಹುದು. ಕನ್ನಡದಲ್ಲಿ ಅವರು ಹಾಡಿರುವುದು ಬರೋಬ್ಬರಿ 19 ಸಾವಿರ ಹಾಡುಗಳನ್ನು. ಅವುಗಳಲ್ಲಿ ಇಂದು ಕನ್ನಡಿಗರ ಹೃದಯದಲ್ಲಿ ಅಚ್ಚಳಿಯದೆ ಉಳಿದಿರುವುದು ಅಸಂಖ್ಯ ಹಾಡುಗಳು.

ಇದನ್ನೂ ಓದಿ: ಸಂಗೀತ ಮೂಲಕ ಹಿಮೋಫಿಲಿಯಾ ಪೀಡಿತರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಎಸ್ ಪಿಬಿ

‘ನೂರೊಂದು ನೆನಪು ಎದೆಯಾಳದಿಂದ…’, ‘ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ…’, ‘ಎಲ್ಲಿರುವೇ ಮನವ ಕಾಡುವ ರೂಪಸಿಯೇ..’, ‘ಒಲವಿನ ಉಡುಗೊರೆ ಕೊಡಲೇನು, ರಕುತದಿ ಬರೆದನು ಇದ ನಾನು…’ ‘ಬಂದಾಳೋ ಬಂದಾಳೋ ಬಿಂಕದ ಸಿಂಗಾರಿ…’, ‘ಕರ್ನಾಟಕದ ಇತಿಹಾಸದಲಿ…’, ‘ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ…’, ‘ಪವಡಿಸು ಪರಮಾತ್ಮ ಶ್ರೀ ವೆಂಕಟೇಶ’, ‘ಕನ್ನಡ ನಾಡಿನ ಜೀವನದಿ ಈ ಕಾವೇರಿ’, ‘ತಾಳಿ ಕಟ್ಟುವ ಶುಭವೇಳೆ ಕೈಯಲ್ಲಿ ಹೂವಿನ ಮಾಲೆ’, ‘ಗೀತಾಂಜಲೀ…’, ‘ನನ್ನವರು ಯಾರೂ ಇಲ್ಲ, ಯಾರಿಗೆ ಯಾರೂ ಇಲ್ಲ…’, ಸೇವಂತಿಯೇ ಸೇವಂತಿಯೇ ನನ್ನಾಸೆ ಅಲೆಯಲ್ಲಿ ಗಮ್ ಅಂತಿಯೇ…, ಗಗನದಲಿ ಮಳೆಯ ದಿನ ಗುಡುಗಿನ ತನನ ಆ ತನನ ದಿನ ಧರಣಿಯಲಿ ಹಸುರಿನ ಜನನ…,ಈ ಭೂಮಿ ಬಣ್ಣದ ಬುಗುರಿ…, ಅಮೃತವರ್ಷಿಣಿ ಚಿತ್ರದ ಸುಮಧುರ ಗೀತೆಗಳು, ನಮ್ಮೂರ ಮಂದಾರ ಹೂವೇ ಚಿತ್ರದ ಸಮ್ಮೋಹಿನಿ ಹಾಡುಗಳು… ಹೀಗೆ ನೂರಾರು ಗೀತೆಗಳು ಚಿತ್ರ ಸಂಗೀತ ಪ್ರೇಮಿಗಳ ಹೃದಯದಲ್ಲಿ ಸದಾ ಬೆಚ್ಚಗಿರುತ್ತವೆ.

ಎಸ್.ಪಿ.ಬಿ. ಜೀ ನಿಮ್ಮ ಅಗಲಿಕೆ ಒಂದು ಬಹು ದೊಡ್ಡ ನಷ್ಟ ಎನ್ನಲು ಮನಸ್ಸಾಗುತ್ತಿಲ್ಲ, ನೀವು ನಮಗೆ ಕೊಟ್ಟು ಹೋಗಿರುವ ಮುತ್ತಿನಂಥಾ ಗೀತೆಗಳು ನಮ್ಮ ಪಾಲಿಗೆ ಬೆಲೆ ಕಟ್ಟಲಾಗದ ಆಸ್ತಿಯಾಗಿವೆ.

ಆದರೂ ಭಾರವಾದ ಹೃದಯದಿಂದ ಹೇಳಲೇಬೇಕಾಗಿದೆ, ‘ಕಥೆಯು ಮುಗಿದೇ ಹೋದರೂ ಮುಗಿಯದಿರಲೀ ಬಂಧನ…!’

ಹೋಗಿ ಬನ್ನಿ ಬಾಲು ಸರ್…!

– ಹರಿ

Advertisement

Udayavani is now on Telegram. Click here to join our channel and stay updated with the latest news.

Next