Advertisement
ಲಿಂಗ ನೋಡಿದ್ದೀರಲ್ಲ? ಅದರೊಳಗೆ ಪೀಠಕ ಅಂತ ಇನ್ನೊಂದು ಪುಟ್ಟಲಿಂಗ ಇರುತ್ತದೆ. ಲಿಂಗ ಧರಿಸುವ ಪ್ರತಿಯೊಬ್ಬರ ಕೊರಳಲ್ಲಿ ಇದು ಇರುತ್ತದೆ. ಈ ಪೀಠಕಗಳನ್ನು ತಯಾರು ಮಾಡುವುದು ಬೇರಾರೂ ಅಲ್ಲ; ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಪುಟ್ಟದಾದ ಕೊಪ್ಪ ಎಸ್‌ಕೆ ಗ್ರಾಮದ ಅಬ್ದುಲ್‌ರಜಾಕ ಖಾಸಿಂ ಸಾಬ ನೂರಪ್ಪನವರ ಕುಟುಂಬ. ದೇಶ, ವಿದೇಶಗಳಿಗೆ ಇವರಿಂದಲೇ ಪೀಠಕ ಲಿಂಗಗಳು ಸಪ್ಲೈ ಆಗುವುದು.
ಪೀಠಕ ಎಂದರೇನು ?
ಕೊರಳಲ್ಲಿ ಲಿಂಗಾಧಾರಣೆ ಮಾಡುವ ಲಿಂಗದೊಳಗೆ ಸಣ್ಣ ಗಾತ್ರದ ಶಿವಲಿಂಗ ಇರುತ್ತದೆ. ಕಂತಿ ಮಾಡಿದ ಲಿಂಗದೊಳಗಿನ ಚಿಕ್ಕ ಗಾತ್ರದ ಶಿವಲಿಂಗಕ್ಕೆ ಪೀಠಕ ಎಂದು ಹೆಸರು. ಪೀಠಕ ಇರದೇ ಲಿಂಗವಿಲ್ಲ. ಇದರಲ್ಲಿ ಮೂರು ವಿಧ. ಸಾದಾ ಲಿಂಗ, ಜ್ಯೋತಿರ್ಲಿಂಗ ಹಾಗೂ ಪಂಚಸೂತ್ರ ಲಿಂಗ. ಈ ಪಂಚಸೂತ್ರ ಶಿವಲಿಂಗಗಳನ್ನು ದೇಶದ ದೊಡ್ಡ ದೊಡ್ಡ ಮಠಗಳಲ್ಲಿ ನಡೆಯುವ ಹೋಮಗಳಲ್ಲಿ ಬಳಸುತ್ತಾರೆ. ಮಠಗಳಲ್ಲಿ ಲಿಂಗ ದೀಕ್ಷೆಗಳಲ್ಲಿ ಇದು ಪ್ರಾಮುಖ್ಯತೆ ಪಡೆದಿವೆ.
Related Articles
Advertisement
ಒಂದು ಪರಿಪೂರ್ಣ ಪೀಠಕ ತಯಾರಾಗಲು ಐದು ಬಾರಿ ಉಳಿ ಏಟು ಬೀಳಬೇಕು. ಹೀಗೆ ತಯಾರಾದ ಪೀಠಕಗಳಿಗೆ ಕಪ್ಪು ಬಣ್ಣದ ಕಂತಿ ಲೇಪನ ಮಾಡಿ ಲಿಂಗದ ರೂಪ ಕೊಡುತ್ತಾರೆ. ಲಿಂಗಗಳು ದೇಶದ ನಾನಾ ಮೂಲೆಗಳಲ್ಲಿಯೂ ತಯಾರಾಗುತ್ತವೆ. ಆದರೆ ಅವುಗಳಿಗೆ ಅವಶ್ಯವಿರುವ ಪೀಠಕಗಳು ಮಾತ್ರ ಈ ಎಸ್.ಕೆ. ಕೊಪ್ಪ ಗ್ರಾಮದಲ್ಲಿ ಮಾತ್ರ ದೊರೆಯುತ್ತವೆ ಎನ್ನುವುದೇ ವಿಶೇಷ.
ಅಬ್ದುಲ್ ರಜಾಕ ಕುಟುಂಬ ವರ್ಷಪೂರ್ತಿ ಈ ಪೀಠಕ ತಯಾರಿಕೆಯಲ್ಲಿ ತೊಡಗಿರುತ್ತದೆ. ಶಿವರಾತ್ರಿ ಸಂದರ್ಭದಲ್ಲಿ ಇವರಿಗೆ ಬಿಡುವೇ ಇರುವುದಿಲ್ಲ. ಕುಟುಂಬದಲ್ಲಿನ ಮಹಿಳೆಯರು ಸೇರಿದಂತೆ ಎಲ್ಲರೂ ಪೀಠಕಗಳ ತಯಾರಿಕೆಯಲ್ಲಿ ತೊಡಗುತ್ತಾರೆ. ತಿಂಗಳಿಗೆ ಅಂದಾಜು 20 ಸಾವಿರದಂತೆ, ವರ್ಷಕ್ಕೆ ಸುಮಾರು 2.50 ರಿಂದ 3 ಲಕ್ಷದವರೆಗೆ ಪೀಠಕಗಳನ್ನು ತಯಾರಿಸುವುದಿದೆ. ಸಾದಾ ಲಿಂಗಗಳಿಗೆ ಒಂದು ರೂ. ಒಂದು ಸಾವಿರ ಜ್ಯೋತಿರ್ಲಿಂಗ, ಪಂಚಸೂತ್ರ ಲಿಂಗಗಳಿಗೆ ತಲಾ ಮೂರು ರೂಪಾಯಿಯಂತೆ ಮಾರಾಟ ಮಾಡುತ್ತಾರೆ. ಈ ಪೀಠಕಗಳಿಂದ ಈ ಕುಟುಂಬದ ಪ್ರತಿಯೊಬ್ಬರ ಪ್ರತಿದಿನದ ದುಡಿಮೆ 600 ರೂಪಾಯಿ. ಒಂದು ವರ್ಷಕ್ಕೆ 1.50 ರಿಂದ 1.75 ಲಕ್ಷದವರೆಗೆ ದುಡಿಯುತ್ತಾರೆ.
ಕಾಶ್ಮೀರ ಟು ಕನ್ಯಾಕುಮಾರಿಅಬ್ದುಲ್ರಜಾಕರು ತಯಾರಿಸುವ ಪೀಠಕಗಳು ದೇಶಾದ್ಯಂತ ಪೂರೈಕೆಯಾಗುತ್ತಿವೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಇಲ್ಲಿನ ಪೀಠಕಗಳಿಗೆ ಬೇಡಿಕೆ ಇದೆ. ಪಂಚ ಜಗದ್ಗುರು ಪೀಠಗಳಾದ ಕಾಶಿ, ಉಜ್ಜಯಿನಿ, ರಂಭಾಪುರಿ, ಕೇದಾರ ಮತ್ತು ಶೀಶೈಲ ಸೇರಿದಂತೆ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳು, ಮಠ ಮಾನ್ಯಗಳಿಗೂ ಈ ಮುಸ್ಲಿಂ ಕುಟುಂಬದ ಪೀಠಕಗಳೇ ರವಾನೆಯಾಗುವುದು. ಅದಲ್ಲದೇ ಯಾವುದೇ ಕ್ಷೇತ್ರಗಳಲ್ಲಿ ಹೋಮ ಹವನ, ಲಿಂಗದೀಕ್ಷೆ ಕಾರ್ಯಕ್ರಮಗಳಿಗೂ ಇಲ್ಲಿನ ಪೀಠಕಗಳನ್ನೂ ಕೊಂಡೊಯ್ಯುತ್ತಾರೆ. ಅತಿಹೆಚ್ಚು ಪೀಠಕಗಳು ಮಹಾರಾಷ್ಟ್ರಕ್ಕೆ ರವಾನೆಯಾಗುತ್ತವೆ ಎನ್ನುತ್ತಾರೆ ರಜಾಕರು. — ರೇವಣ್ಣ ಅರಳಿ ; ಚಿತ್ರಗಳು: ವಿಠ್ಠಲ ಮೂಲಿಮನಿ