ನಂಬಿಕೆ ವ್ಯಕ್ತಿಯೊಬ್ಬನ ಮೇಲೆ ಇರಿಸುವ ಯೋಗ್ಯ ಭರವಸೆಯಾಗಿದೆ. ನಂಬಿಕೆ ಯಾರ ಮೇಲೆಯೂ ಸುಮ್ಮನೆ ಮೂಡುವಂತದಲ್ಲ! ಬದಲಾಗಿ ಅವರ ನಡತೆಯಿಂದ ಹುಟ್ಟುವ ಭರವಸೆಯಿಂದ, ಗೌರವ- ಭಕ್ತಿಯ ಸಂಕೇತವಾಗಿ ನಂಬಿಕೆ, ವಿಶ್ವಾಸ ನಮ್ಮಲ್ಲಿ ಚಿಗುರೊಡೆಯುತ್ತದೆ.
ಆದರೆ ಈ ನಂಬಿಕೆಗೆ ಧಕ್ಕೆ ತರುವ ಕಾರ್ಯಗಳು ಕೆಲವೊಮ್ಮೆ ನಡೆಯುತ್ತವೆ. ನಂಬಿಕೆ ದ್ರೋಹಿ ಎಂದು ತಿಳಿದಾಗ ಆ ವ್ಯಕ್ತಿಯ ಮೇಲಿನ ವಿಶ್ವಾಸ, ಆಸಕ್ತಿ, ಸ್ನೇಹ ಎಲ್ಲವೂ ಕಳಚಿ ಬೀಳುತ್ತದೆ. ನಂಬಿದ ವ್ಯಕ್ತಿಯು ನಮ್ಮ ವಿಶ್ವಾಸಕ್ಕೆ ಮಣ್ಣು ಎರಚಿದಾಗ ಆಗುವಂತಹ ದುಃಖವು ಆಳವಾಗಿರುತ್ತದೆ. ಯಾವುದೇ ಔಷಧಿಗಳಿಂದಲೂ ವಾಸಿಯಾಗದ ಗಾಯವು ಅದಾಗಲೇ ಮನಸ್ಸಿಗಾಗಿರುತ್ತದೆ. ಒಮ್ಮೆ ಆ ವ್ಯಕ್ತಿಯ ಮೇಲೆ ನಂಬಿಕೆ ಲಯತಪ್ಪಿದ ಮೇಲೆ ಮತ್ತೆಂದೂ ಅದು ಮೂಡದು. ಒಂದೊಮ್ಮೆ ಮೂಡಿದರು ಹಿಂದಿನಷ್ಟು ಅಗಾಧವಾಗಿ ಬೇರೂರದು.
ನಮ್ಮನ್ನು ನಂಬಿದವರಿಗೆ ಅಥವಾ ನಮ್ಮ ಮೇಲೆ ಭರವಸೆ ಇಡುವವರಿಗೆ ಎಂದಿಗೂ ಮೋಸ ಮಾಡಬಾರದು. ಒಂದು ವೇಳೆ ನಮ್ಮ ವಿಶ್ವಾಸಕ್ಕೆ ಅರ್ಹರಾದವರು ಎರಡು ಬಗೆಯುತ್ತಿದ್ದಾರೆ ಎಂಬುದಾಗಿ ತಿಳಿದಾಗ ಅಂತವರಿಂದ ದೂರ ಉಳಿದುಬಿಡುವುದೇ ಒಳಿತು. ಅಂತವರ ಅಸಲಿ ಮುಖವಾಡವು ಸಮಯ ಕಳೆದಂತೆ ಕಾಲ ಉರುಳಿದಂತೆ ತಿಳಿಯುವುದು. ಈ ವಿಚಾರ ಮೊದಲೇ ಅರಿತಾಗ ಮನಸ್ಸಿಗೆ ಅಷ್ಟೊಂದು ಬೇಸರ ಮೂಡುವುದಿಲ್ಲ. ಆದರೆ ಈ ವಿಚಾರ ನಿಧಾನವಾಗಿ ತುಂಬಾ ಸಮಯ ಕ್ಷಣಗಳು ದಾಟಿ ತಿಳಿಯುವಾಗ ಮನಸ್ಸಿಗೆ ಆಘಾತವಾಗುವುದು ಖಂಡಿತ.
ಹಾಗಾಗಿ, ಯಾರ ನಂಬಿಕೆಯನ್ನೂ ಕೆಡಿಸಬೇಡಿ. ನಾವು ಮತ್ತೂಬ್ಬರ ಬಗ್ಗೆ ನಂಬುವ ಮೊದಲು ಒಂದೆರಡು ಬಾರಿ ಯೋಚಿಸಿದರೆ ಒಳಿತು. ನಂಬಿಕೆ ಎಂಬುದು ಆಟಿಕೆಯ ಗೊಂಬೆಯಲ್ಲ. ಅದು ಇಬ್ಬರ ನಡುವಿನ ಮಧುರ ಸ್ನೇಹಾನುಬಂಧವನ್ನು ಸುಗಮವಾಗಿ ನಡೆಯಲು, ಸುಖದಿಂದ ಸಾಗಲು ಇರುವ ಮಾರ್ಗವಾಗಿದೆ. ಈ ದಾರಿಯಲ್ಲಿ ಒಂದು ಚಿಕ್ಕ ಲೋಪವೂ ಕೂಡಾ ವೇದನೆ ಮತ್ತು ಅಪನಂಬಿಕೆಗೆ ಎಡೆ ಮಾಡಿಕೊಡುತ್ತದೆ.
ಸುಳ್ಳು ನಂಬಿಕೆಗೆ ಬಲಿಯಾಗದಿರಿ ಸ್ನೇಹಿತರೆ . ಈ ಕಪಟ ಜಗತ್ತಿನಲ್ಲಿ ಒಮ್ಮೆ ನಂಬುವ ಮುನ್ನ ಯೋಚಿಸಿ ಯೋಚಿಸಿ. ಗಿರೀಶ್ ಪಿ.ಎಂ. ವಿವಿ, ಮಂಗಳೂರು