ತಾಯಿಯ ಗರ್ಭದಿಂದ ಹೊರ ಜಗತ್ತಿಗೆ ಬಂದ ಕಂದಮ್ಮನಿಗೆ ಎಲ್ಲವೂ ಕೌತುಕವೆನಿಸುವುದು. ಕಲಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಮಗು ಯಾವಾಗಲೂ ದೊಡ್ಡವರನ್ನು ಪೀಡಿಸುತ್ತಲೇ ಇರುತ್ತದೆ. ಮೂರು ವರುಷದೊಳಗಿನ ಮಕ್ಕಳಂತೂ ವಿಪರೀತ ತಂಟೆ ಮಾಡುವುದನ್ನು ನಾವು ನೋಡಬಹುದು.
ಆ ಸಮಯವನ್ನು ನಾವು ಸದುಪಯೋಗಪಡಿಸಿಕೊಂಡು ಮಕ್ಕಳಿಗೆ ಆಕಾರ, ಗಾತ್ರ, ಬಣ್ಣಗಳ ಬಗ್ಗೆ ಮಾಹಿತಿ, ಚಿತ್ರ ನೋಡಿ ಹೆಸರಿಸುವುದು, ದೇಹದ ಭಾಗಗಳ ಬಗ್ಗೆ ಅರಿವು ಮೂಡಿಸುವುದು, ಹೂವು, ಹಣ್ಣುಗಳು, ತರಕಾರಿ, ಪ್ರಾಣಿಗಳು ಕೀಟಗಳ ಬಗ್ಗೆ ಕೂಡ ಮಾಹಿತಿ ನೀಡಿದರೆ ಒಳಿತು. ಇದನ್ನೆಲ್ಲ ಅರಿತುಕೊಳ್ಳಲು ಮಕ್ಕಳ ಮೆದುಳು ಚುರುಕಾಗುತ್ತದೆ. ಅಲ್ಲದೆ ಅವರ ಅನೇಕ ಗೊಂದಲಗಳಿಗೆ ಪ್ರತಿಕ್ರಿಯಿಸಲು ಸಹನೆಯೇ ಇಲ್ಲದೆ ಹೋದರೆ ಮಕ್ಕಳ ಕುತೂಹಲ ಹಾಗೆಯೇ ಇಂಗಿಹೋಗುತ್ತದೆ. ಹಟ ಮಾಡುತ್ತವೆ, ರಚ್ಚೆ ಹಿಡಿಯುತ್ತವೆ. ಮಗುವಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ಪ್ರಯತ್ನಿಸಬೇಕು. ಅದಕ್ಕೆ ತಾಳ್ಮೆ ಅಗತ್ಯ.
ಮಕ್ಕಳ ಸಾಹಿತ್ಯ ನೀತಿಕತೆ, ಸಣ್ಣ ಸಣ್ಣ ರೈಮ್ಸ್, ಶಿಶುಪ್ರಾಸಗಳು, ನೃತ್ಯ ಮಾಡಿಸುವುದು, ಪದ್ಯಗಳು, ಗಾದೆಮಾತುಗಳ ವಿವರಣೆ ಒಗಟು ಬಿಡಿಸುವ ಕಲೆ, ಗಣಿತ, ಪರಿಸರ ವಿಜ್ಞಾನ, ಖಗೋಳ ವಿಜ್ಞಾನ, ವಿವಿಧ ರೀತಿಯ ಆಟಗಳೇ ಮಕ್ಕಳ ಕಲಿಕಾ ಮೂಲಗಳು. ಭ್ರಮೆಯ ಸೃಷ್ಟಿಸದೇ ಕಲ್ಪನೆಗೆ ಜೀವ ನೀಡಿ ಎಲ್ಲವನ್ನು ಪ್ರಾಯೋಗಿಕವಾಗಿಯೂ ಅನುಭವಿಸಲು ಅವಕಾಶ ನೀಡಿ ಮಕ್ಕಳ ಬೌದ್ಧಿಕ ಮಟ್ಟವನ್ನು ಬೆಳೆಸಬೇಕು.
ನಾವು ಕಳೆದ ಬಾಲ್ಯವನ್ನು ಹಿಂತಿರುಗಿ ನೋಡಿದಾಗ ನಮ್ಮ ಹೆತ್ತವರು ಹೇಳುತ್ತಿದ್ದುದು ಎಲ್ಲವೂ ಸರಿಯಾಗಿಯೇ ಇತ್ತು ಅನಿಸುತ್ತದೆ. ನಮಗೆಲ್ಲವೂ ಗೊತ್ತಿದೆ ಎಂದು ಬೀಗುತ್ತ ಮೇಲೆ ನೋಡಿ ಹೆಜ್ಜೆ ಹಾಕುತ್ತಿದ್ದಾಗ ಹೊಂಡಕ್ಕೆ ಬಿದ್ದು ಕಾಲು ಮುರಿದುಕೊಂಡಿದ್ದೂ ಇದೆ. ಮಕ್ಕಳಾಗಿದ್ದಾಗಿನ ಅತಿಯಾದ ಆತ್ಮವಿಶ್ವಾಸ, ಜೀವನ ಕಲಿಸುವ ಪಾಠ ದೊರೆಯುವ ಅನುಭವಗಳ ನಡುವೆ ಸಿಕ್ಕಿ ಹೆದರಿಹೋಗುತ್ತದೆ. ಅನಂತರದಲ್ಲಿ ಪಕ್ವವಾಗುತ್ತದೆ. ಮನದಲ್ಲಿ ದೃಢತೆ ಮೂಡುತ್ತದೆ. ಬದುಕು ಎಲ್ಲವನ್ನೂ ಕಲಿಸುತ್ತದೆ.
ಎಂತಹ ಶ್ರೀಮಂತ ಮನೆಯಲ್ಲಿ ಜನಿಸಿದ ಮಗುವೂ ಕೂಡ ಎ.ಸಿ ಕಾರಿನಲ್ಲಿ ಹೋಗುವಾಗ ರಸ್ತೆಯಲ್ಲಿ ಮಾರುವ ಬಣ್ಣಬಣ್ಣದ ಬಲೂನಿಗೆ ಮನಸೋಲದೆ ಇರದು. ತನ್ನ ಗೆಳೆಯನ ಬುತ್ತಿಯಲ್ಲಿ ತಂದ ತಿಂಡಿಯನ್ನು ಹಂಚಿಕೊಂಡು ತಿನ್ನುವುದು, ಬಿದ್ದಾಗ ಓಡೋಡಿ ಬಂದು ಕೈಕೊಟ್ಟು ಮೇಲಕ್ಕೆತ್ತುವುದು, ಕೈ ಕೈ ಹಿಡಿದು ಕುಣಿಯುತ್ತ ಒಟ್ಟಿಗೆ ತಿರುಗಾಡುವುದು, ಆಟವಾಡುವುದು ನಾವು ಕಾಣಬಹುದಾಗಿದೆ. ಅದರ ಅರ್ಥ ಮಗುವಿನ ಮುಗ್ಧ ಮನಸ್ಸಿಗೆ ಯಾವ ಜಾತಿ, ಮತ, ಊರು, ದೇಶ-ವಿದೇಶವೆಂಬ ವ್ಯತ್ಯಯ ಕಂಡುಬರುವುದಿಲ್ಲ. ಬೆಳೆದಂತೆ ಈ ಸಮಾಜದ ಆಗುಹೋಗುಗಳು ಬುದ್ಧಿ, ಮನಸ್ಸನ್ನು ಕೆಡಿಸುತ್ತದೆ. ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೇ ಅದಕ್ಕಿಂತಲೂ ವೇಗವಾಗಿ ಈಗಿನ ಮೊಬೈಲ್ ಕಾಲ ಆ ಮುಗ್ಧತೆಯನ್ನು ಕಿತ್ತುಕೊಳ್ಳುತ್ತಿದೆ ಎಂಬುದೇ ಬೇಸರ.
ಮಕ್ಕಳ ಸಾಹಿತ್ಯ ಇರುವುದು ಮಕ್ಕಳಿಗಾಗಿಯೇ. ದೊಡ್ಡವರು ಓದಿ ಅಭಿಪ್ರಾಯ ಹೇಳಿದರೂ ಅದು ಮಕ್ಕಳಿಗೆ ಹಿಡಿಸಿದರೆ ಮಾತ್ರವೇ ಬರಹಗಾರರಿಗೆ ಸಾರ್ಥಕವೆನಿಸುತ್ತದೆ. ಕಲಿಕೆಗೆ, ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಕತೆ, ಪದ್ಯಗಳು ಇರಬೇಕು. ಕಾರಣ, ಮಕ್ಕಳ ಕಂಗಳಲ್ಲಿ ಜಗತ್ತನ್ನು ನೋಡುವುದು ಅಷ್ಟು ಸುಲಭವಲ್ಲ. ಮುಗ್ಧತೆಯ ಒಂದು ಎಳೆ ಹಿಡಿದು ಕತೆಯನ್ನು ಜೋಡಿಸಬೇಕು. ಕೇವಲ ಕತೆ ಹೇಳಿದರೆ ಸಾಕೇ? ಇಲ್ಲ. ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರಾಯೋಗಿಕವಾಗಿ ಅನುಭವ ಪಡೆಯಲು ಅನುವು ಮಾಡಿಕೊಡಬೇಕು. ಪ್ರಶ್ನೆ ಕೇಳಲು ಅವಕಾಶ ಕೊಡಬೇಕು. ಅವರ ಗೊಂದಲಗಳ ಸಮಾಧಾನದಿಂದ ಪರಿಹರಿಸಬೇಕು.
-ಸಿಂಧು ಭಾರ್ಗವ,
ಬೆಂಗಳೂರು