Advertisement

ಕದನ ಕಥನ : ಮನೆ ಬಾಗಿಲಿಗೇ ಬಂದಿದ್ದ MLA ಟಿಕೆಟ್‌ ಕೈತಪ್ಪಿದಾಗ…!

08:30 AM Apr 17, 2018 | Team Udayavani |

ಪಡುಬಿದ್ರಿ: ಅಂದು ಬಿಜೆಪಿಯ ಟಿಕೆಟ್‌ ಮನೆಬಾಗಿಲಿಗೇ ಬಂದಿತ್ತು. ಮರುದಿನ ಮಾತ್ರ ಚಿತ್ರಣವೇ ಬೇರೆಯಾಗಿತ್ತು. ಲಾಲಾಜಿ ಮೆಂಡನ್‌ ಅಭ್ಯರ್ಥಿಯಾಗಿದ್ದರು. ಹೀಗೆನ್ನುತ್ತಾರೆ ಪಕ್ಷದ ಹಿರಿಯ ನಾಯಕಿ ಶೀಲಾ ಕೆ. ಶೆಟ್ಟಿ ಎರ್ಮಾಳು.

Advertisement

1994ರ ಅವಧಿ, ಆಗಿನ ದ.ಕ. ಜಿಲ್ಲೆಯ ಉತ್ತರ ಭಾಗದಲ್ಲಿ ಬಿಜೆಪಿಯಲ್ಲಿ ಶೀಲಾ ಶೆಟ್ಟಿ ಹೆಸರಾಗಿದ್ದರೆ; ದಕ್ಷಿಣ ಭಾಗದಲ್ಲಿ ಶಕುಂತಳಾ ಶೆಟ್ಟಿ ಹೆಸರಿದ್ದ ಕಾಲವದು. ಒಂದು ದಿನ ಪಕ್ಷದ ಹಿರಿಯರಾದ ಡಾ| ವಿ.ಎಸ್‌. ಆಚಾರ್ಯ ಮತ್ತು ಗುಜ್ಜಾಡಿ ಪ್ರಭಾಕರ ನಾಯಕ್‌ ಅವರು ಬಿ ಫಾರ್ಮ್ ಹಿಡಿದುಕೊಂಡು ನನ್ನ ಮನೆಗೆ ಆಗಮಿಸಿದ್ದರು. ಪತಿ ಕುಟ್ಟಿ ಶೆಟ್ಟಿ ಅವರನ್ನು ಅದಾಗಲೇ ಒಪ್ಪಿಸಿದ್ದ ಡಾ| ಆಚಾರ್ಯರು ನನ್ನಲ್ಲಿ ಚುನಾವಣೆಗೆ ತಯಾರಾಗುವಂತೆ ತಿಳಿಸಿ ಹೋಗಿದ್ದರು. ಆದರೆ ಮರುದಿನವೇ ವಾತಾವರಣ ಬದಲಾಯಿತು. ಲಾಲಾಜಿ ಮೆಂಡನ್‌ ಅಭ್ಯರ್ಥಿಯಾಗಿದ್ದರು. ಕಾರಣವೇನೋ ಗೊತ್ತಿಲ್ಲ. ಆದರೆ ನಾನೇನೂ ಕಸರತ್ತು ಮಾಡಲು ಹೋಗಲಿಲ್ಲ. ಚುನಾವಣಾ ಕಣಕ್ಕಿಳಿದು ಬಿಜೆಪಿಗಾಗಿ ದುಡಿದೆ. ಆದರೂ ಬಿಜೆಪಿಗೆ ಸೋಲಾಯ್ತು ಎನ್ನುತ್ತಾರೆ ಶೀಲಾ ಶೆಟ್ಟಿ.

80ರ ದಶಕದಲ್ಲಿ ಮನೆಯವರ ಕ್ಷಮೆ ಕೋರಿ ರಾಜಕೀಯ ರಂಗಕ್ಕಿಳಿದವಳು ನಾನು. ರಾಜಕೀಯ ಎಂದರೆ ಮಹಿಳೆಯರು ಮಾರು ದೂರ ಓಡಿ ಹೋಗುತ್ತಿದ್ದ ಕಾಲವದು. ಐದು ಬಾರಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿ ಜಿಲ್ಲೆಯಲ್ಲಿ ಸಕ್ರಿಯವಾಗಿದ್ದ ಕಾಲದಲ್ಲಿ ನಾನೂ ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದೇನೆ. ಮಹಿಳಾ ಹೋರಾಟಗಾರ್ತಿಯಾಗಿ ರಾಜಕೀಯದ ಮೊದಲ ದಿನದಿಂದಲೂ ಮಹಿಳೆಯರಿಗೆ ರಾಜಕೀಯದಲ್ಲಿ ಸಮಾನ ಸ್ಥಾನಮಾನ ನೀಡಿಕೆ, ಉದ್ಯೋಗ ಕ್ಷೇತ್ರದಲ್ಲೂ ಮಹಿಳೆಗೆ ಹೆಚ್ಚಿನ ಸಮಪಾಲಿನ ಆದ್ಯತೆ, ಮಹಿಳಾ ದೌರ್ಜನ್ಯ, ಅತ್ಯಾಚಾರಗಳ ನಿಗ್ರಹಕ್ಕೂ ಸೂಕ್ತ ಕಾನೂನಿನ ಮಾರ್ಪಾಟುಗಳನ್ನು ಬಯಸಿದ್ದೆ. ಮಹಿಳಾ ಸ್ವ ಉದ್ಯೋಗಕ್ಕೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದೆ. ಅದಕ್ಕಾಗಿ ಹೆಣ್ಮಕ್ಕಳ ಶಿಕ್ಷಣವನ್ನು ಬೆಂಬಲಿಸುವ ಪ್ರಯತ್ನ ನಡೆಸುತ್ತಿದ್ದೆ. ಗಂಡು, ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ಭೇದ ಸಲ್ಲದು. ಹಾಗೆಂದು ಹೆಣ್ಣು ಮನೆ ಬಿಟ್ಟು ಸಮಾಜ ಸೇವೆಗೆ ಬರುವುದಲ್ಲ. ಇಂದು ಮನೆ ಮತ್ತು ಸಮಾಜ ಸೇವೆಗಳು ತುಲನಾತ್ಮಕವಾಗಿ ನಿಭಾಯಿಸುತ್ತಿರುವವಳು ಹೆಣ್ಣು ಎಂಬುದನ್ನು ನಿರ್ಭೀತಿಯಿಂದ ನಾನು ಹೇಳಬಲ್ಲೆ ಎನ್ನುತ್ತಾರೆ ಶೀಲಾ ಶೆಟ್ಟಿ.

ಈ ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಮಾತೆಯರ ಕೊಡುಗೆ ಅಪಾರ. ಶಿಕ್ಷಣ ವಂಚಿತರಾಗಿದ್ದ ಕಾಲದಲ್ಲೂ ಹೆಣ್ಣುಮಕ್ಕಳು ಈ ದೇಶದ ಜ್ಞಾನ ಸಂಪತ್ತಿನ ಹರಿಕಾರರಾಗಿದ್ದರು. ಸಂಸ್ಕೃತಿಯನ್ನು ಬೆಳೆಸುತ್ತಾ ಬಂದಿದ್ದರು. ಶಿಕ್ಷಣದಿಂದಲೇ ನಾವು ಎಲ್ಲವನ್ನೂ ಸಾಧಿಸುತ್ತೇವೆ ಎಂಬುದು ಭ್ರಮೆ. ಹಿಂದಿನ ಕಾಲದ ಶಿಕ್ಷಣ ವಂಚಿತ ಹೆಣ್ಮಕ್ಕಳು ಬಹಳಷ್ಟು ಅನುಭವಿಗಳೂ ಜ್ಞಾನಸಂಪತ್ತು ಇದ್ದವರೂ ಸಂಸ್ಕೃತಿವಂತರೂ ಆಗಿದ್ದರು. ದೊಡ್ಡ ಕೂಡು ಕುಟುಂಬವನ್ನು ತೂಗಿಸಿಕೊಂಡು ಹೋಗುವ ಚಾಕಚಕ್ಯತೆ ಅವರಲ್ಲಿತ್ತು. ಭಾರತ ದೇಶದಲ್ಲಿ ಮಹಿಳೆಯರನ್ನು ಇನ್ನಷ್ಟು ಗೌರವದಿಂದ ಕಾಣುವಂತಾಗಬೇಕು ಎನ್ನುವುದು ಶೀಲಾ ಶೆಟ್ಟಿ ಅವರ ಅಭಿಪ್ರಾಯ.

ಪಕ್ಷದ ಸಂಘಟನೆಗಾಗಿ ಮಹಿಳಾ ಮೋರ್ಚಾ ನಾಯಕಿಯಾಗಿ ಬೈಂದೂರುವರೆಗೆ ಪಕ್ಷ ಸಂಘಟನೆಗಾಗಿ ಓಡಾಡುತ್ತಿರುವೆ. ವಯಸ್ಸಾಗುತ್ತಿದ್ದರೂ 25ರ ಹರೆಯದ ಯುವತಿಯರೂ ನಾಚುವಂತೆ ಕೆಲಸ ಕಾರ್ಯ ಮಾಡುತ್ತಿದ್ದೇನೆ. ಎಂ.ಎಲ್‌.ಎ. ಸ್ಥಾನಮಾನವಲ್ಲದಿದ್ದರೂ ಕಲೆ, ಸಾಹಿತ್ಯ ಮತ್ತು ಸಮಾಜ ಸೇವೆಯನ್ನು ಗಮನಿಸಿ ವಿಧಾನ ಪರಿಷತ್‌ ಸದಸ್ಯೆ ಸ್ಥಾನವನ್ನಾದರೂ ಪಕ್ಷವು ಕೊಡಬಹುದಿತ್ತು ಎಂದು ಶೀಲಾ ಶೆಟ್ಟಿ ಹೇಳಿದ್ದಾರೆ.

Advertisement

— ಆರಾಮ

Advertisement

Udayavani is now on Telegram. Click here to join our channel and stay updated with the latest news.

Next