Advertisement

ಸರಕಾರಿ ಶಾಲೆ ಆವರಣದಲ್ಲಿ ಮೂಲಿಕಾ ವನ

02:20 AM Jun 20, 2018 | Karthik A |

ಬೆಳ್ತಂಗಡಿ: ದ.ಕ. ಜಿಲ್ಲೆಯ ವಿವಿಧ ಶಾಲೆಗಳ ಆವರಣದಲ್ಲಿ ಇನ್ನು ಔಷಧೀಯ ಸಸ್ಯಗಳ ಘಮ ಅರಳಲಿದೆ. ಗಿಡ ಮೂಲಿಕೆಗಳ ಕುರಿತು ಮಕ್ಕಳಿಗೆ ಸಮಗ್ರ ಮಾಹಿತಿ ಕಣ್ಣೋಟದಲ್ಲಿ ಲಭ್ಯವಾಗಲಿದೆ. ದ.ಕ. ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಮೂಲಿಕಾವನ (ಹರ್ಬಲ್‌ ಗಾರ್ಡನ್‌) ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದು, ಈಗಾಗಲೇ ಸಂಬಂಧಪಟ್ಟ ಗ್ರಾ.ಪಂ.ಗಳಿಗೆ ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಆದೇಶ ನೀಡಿದ್ದಾರೆ. ಗಿಡ ಮೂಲಿಕೆಗಳ ರಕ್ಷಣೆಗೆ ಇದು ವಿಶಿಷ್ಟ ಪ್ರಯತ್ನವಾಗಿದೆ. ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಗ್ರಾ.ಪಂ.ಗಳು ಈ ಕಾಮಗಾರಿಯನ್ನು ಅನುಷ್ಠಾನಗೊಳಿಸಬೇಕಿದೆ. ಹರ್ಬಲ್‌ ಗಾರ್ಡನ್‌ ಹೇಗೆ ರೂಪಿಸಬೇಕು ಎಂಬುದರ ರೂಪುರೇಷೆಯನ್ನು ವಿಶೇಷ ಗ್ರಾಮ ಸಭೆ ನಡೆಸಿ ಅನುಮೋದಿಸಿ ನಿರ್ಣಯವನ್ನು ಕೈಗೊಳ್ಳಬೇಕಾಗಿದೆ.

Advertisement

ಜಿಲ್ಲೆಯಲ್ಲಿ 45 ಶಾಲೆಗಳು
ದ. ಕ. ಜಿಲ್ಲೆಯಲ್ಲಿ ಒಟ್ಟು 45 ಶಾಲೆಗಳನ್ನು ಮೂಲಿಕಾ ವನ ನಿರ್ಮಾಣಕ್ಕಾಗಿ ಆಯ್ಕೆ ಮಾಡಲಾಗಿದೆ. ಇದರಲ್ಲಿ ಬಂಟ್ವಾಳ ತಾ|ಕಿನ 7, ಸುಳ್ಯ ತಾಲೂಕಿನ 5, ಪುತ್ತೂರಿನ 8 ಶಾಲೆಗಳು ಸೇರಿವೆ. ಸರಕಾರಿ ಶಾಲೆಗಳಲ್ಲಿ ಮೂಲಿಕಾವನ ಅಭಿವೃದ್ಧಿಪಡಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಪ್ರಸ್ತಾವನೆ ಸಲ್ಲಿಸಿದ್ದರು.


ಎಲ್ಲೆಲ್ಲಿ?

ಬೆಳ್ತಂಗಡಿ ತಾಲೂಕಿನ ಸರಕಾರಿ ಮಾ.ಹಿ.ಪ್ರಾ. ಶಾಲೆ ಪುಂಜಾಲಕಟ್ಟೆ, ಬಂಗಾಡಿ, ಬದನಾಜೆ, ಸರಳೀಕಟ್ಟೆ, ಚಾರ್ಮಾಡಿ, ಅಂಡಿಂಜೆ, ಕೊರಂಜ, ನಾರಾವಿ, ನಾವೂರು, ಬಜಿರೆ, ಬಡಗ ಕಾರಂದೂರು, ಕರಂಬಾರು, ಮುಂಡಾಜೆ, ಕಳೆಂಜ, ಕನ್ಯಾಡಿ-2, ಕೊಕ್ಕಡ, ತೋಟತ್ತಾಡಿ, ಮಚ್ಚಿನ, ಪಡಂಗಡಿ, ನಿಟ್ಟಡೆ, ಪಡ್ಡಂದಡ್ಕ, ಕುವೆಟ್ಟು, ಬಂದಾರು, ಪಿಲಿಚಂಡಿ ಕಲ್ಲು, ಪೆರಿಂಜೆ ಸರಕಾರಿ ಶಾಲೆ ಸೇರಿ ದಂತೆ ಒಟ್ಟು 25 ಶಾಲೆಗಳಲ್ಲಿ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮೂಲಿಕಾವನ ಅಭಿವೃದ್ಧಿಪಡಿಸಲು ನಿಗದಿಪಡಿಸಲಾಗಿದೆ.

ಯಾಕಾಗಿ?
ಸಾಮಾನ್ಯವಾಗಿ ಲಭ್ಯವಿರುವ ಮತ್ತು ಆಗಾಗ್ಗೆ ಬಳಸಲಾಗುವ ಗಿಡಮೂಲಿಕೆ ಸಸ್ಯಗಳ ಉಪಯೋಗಗಳನ್ನು ಜನಪ್ರಿಯಗೊಳಿಸಲು ಹಾಗೂ ಸಂಬಂಧಿಸಿದ ಸಾಂಪ್ರದಾಯಿಕ ಜ್ಞಾನವನ್ನು ಭವಿಷ್ಯದ ಪೀಳಿಗೆಯಲ್ಲಿ ಭದ್ರಗೊಳಿಸಲು ಇದು ಪೂರಕವಾಗಲಿದೆ. ಶಾಲೆಗಳ ಆವರಣದಲ್ಲಿ ಇರುವ ಖಾಲಿ ಸ್ಥಳಗಳಲ್ಲಿ ಈ ಮೂಲಿಕಾವನವನ್ನು ರಚಿಸಲಾಗುತ್ತದೆ.

ಉತ್ತಮ ಪ್ರಯೋಗ
ಶಾಲೆಯಲ್ಲಿ  ಸುಮಾರು ಒಂದು ಎಕರೆ ಜಾಗದಲ್ಲಿ ವಿವಿಧ ಜಾತಿಗಳ ಗಿಡಗಳನ್ನು ನಾಟಿ ಮಾಡಲಾಗುತ್ತಿದೆ. ಇದೊಂದು ಉತ್ತಮ ಪ್ರಯೋಗ. 
– ಶರ್ಮಿಳಾ ಬಿ. ಮುಖ್ಯ ಶಿಕ್ಷಕಿ

Advertisement

ಜು.7ರಂದು ಉದ್ಘಾಟನೆ
ಜು. 7ರಂದು ನಡ ಸರಕಾರಿ ಪ್ರೌಢಶಾಲೆಯಲ್ಲಿ ತಾಲೂಕಿನ ಪ್ರಥಮ ಮೂಲಿಕಾ ವನ ಉದ್ಘಾಟನೆಗೊಳ್ಳಲಿದೆ. ನಡ ಶಾಲೆಗೆ ಪಿಲಿಕುಳದಿಂದ ಹಲವು ಗಿಡಗಳನ್ನು ತಂದು ನಾಟಿ ಮಾಡಲಾಗಿದೆ. ಕ್ರಿಯಾ ಯೋಜನೆ ಸಲ್ಲಿಸುವಾಗ ಸ್ಥಳಾವಾಕಾಶ ಮತ್ತು ನೀರಿನ ವ್ಯವಸ್ಥೆ ಸರಿಯಾಗಿಬೇಕು. ಗ್ರಾ.ಪಂ.ನವರು ಜಾಬ್‌ ಕಾರ್ಡ್‌ ಹೊಂದಿರುವ ಕೂಲಿ ಕಾರ್ಮಿಕರನ್ನು ಒದಗಿಸಿದರೆ ಉತ್ತಮ. ಶಾಲಾ ಆಡಳಿತ ಮಂಡಳಿ ರಕ್ಷಣೆ ಹಾಗೂ ಆರೈಕೆಗೆ ಕಾಳಜಿ ವಹಿಸಬೇಕು. 
– ಗಣೇಶ್‌ ತಂತ್ರಿ,  ಸಾ.ಅ. ಇಲಾಖೆ ವಲಯ ಅರಣ್ಯಾಧಿಕಾರಿ, ಬೆಳ್ತಂಗಡಿ

— ಗುರು ಮುಂಡಾಜೆ

Advertisement

Udayavani is now on Telegram. Click here to join our channel and stay updated with the latest news.

Next