Advertisement
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲಿ ಪೂರ್ವಶಿಷ್ಟ ಸಂಪ್ರದಾಯದಂತೆ ಪ್ರತಿವರ್ಷ ನವಾನ್ನ ನೈವೇದ್ಯ ಹಾಗೂ ಹೊಸ ಅಕ್ಕಿ ಭೋಜನ ಕಾರ್ಯಕ್ರಮ ನಡೆಯುತ್ತದೆ. ಇದಕ್ಕೆ ಮುಖ್ಯವಾಗಿ ಭತ್ತದ ಕದಿರಿನ ಆವಶ್ಯಕತೆ ಇದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಭತ್ತದ ನಾಟಿ ಮರೆಗೆ ಸರಿದಿದೆ. ಹೀಗಾಗಿ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ನವಾನ್ನ ಭೋಜನಕ್ಕೆ ಭತ್ತದ ಕದಿರಿನ ಅಭಾವ ಕಂಡು ಬರುತ್ತಿತ್ತು. ಕದಿರು ಹೊರಗಿನಿಂದ ತರುವ ಅನಿವಾರ್ಯತೆ ಇತ್ತು. ಈ ಕೊರತೆ ನಿವಾರಿಸಲು ಈ ಭಾರಿ ವಿಶೇಷವಾಗಿ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆಡಳಿತ ಮಂಡಳಿ ದೇವರಗದ್ದೆಯಲ್ಲಿ ಭತ್ತದ ನಾಟಿ ಸಸಿ ನೆಡುವ ಕಾರ್ಯಕ್ರಮ ಬುಧವಾರ ಹಮ್ಮಿಕೊಂಡಿತ್ತು. ದೇವರಗದ್ದೆಯಲ್ಲಿ ಭತ್ತದ ನಾಟಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಇದನ್ನು ಮೊದಲ ಬಾರಿಗೆ ವಿಶಿಷ್ಟವಾಗಿ ನಡೆಸಿದ್ದು ಇನ್ನೊಂದು ವಿಶೇಷ.
ದೇಗುಲದ ಆಡಳಿತ ಮಂಡಳಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಆಸಕ್ತಿಯಿಂದ ಈ ಕಾರ್ಯಕ್ರಮ ನಡೆಯಿತು. ಭತ್ತದ ಕೃಷಿ ನಾಟಿ ಕಾರ್ಯಕ್ರಮದಲ್ಲಿ ಸ್ಥಳಿಯ KSS ಕಾಲೇಜು, ಪದವಿಪೂರ್ವ ಕಾಲೇಜು, ಶ್ರೀ ಕುಮಾರಸ್ವಾಮಿ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆ ಹಾಗೂ ಸ.ಮಾ.ಹಿ.ಪ್ರಾ. ಶಾಲೆಯ ಒಟ್ಟು 250ಕ್ಕೂ ಮಿಕ್ಕಿದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಉತ್ಸಾಹದಿಂದ ಪಾಲ್ಗೊಂಡರು. ಮಕ್ಕಳೆಲ್ಲರು ಹೊಲಕ್ಕೆ ಇಳಿದರು. ಮಕ್ಕಳ ಜತೆ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರವೀಂದ್ರ ಎಂ ಎಚ್., ವ್ಯವಸ್ಥಾಪನ ಸಮಿತಿ ಸದಸ್ಯರು, ದೇಗುಲದ ಸಿಬಂದಿ, ಶಿಕ್ಷಣ ಸಂಸ್ಥೆಗಳ ಮುಖ್ಯಶಿಕ್ಷಕರು, ಸಹಶಿಕ್ಷಕರು ಸ್ಥಳಿಯರು ಹೊಲಕ್ಕೆ ಇಳಿದರು. ಆರಂಭದಲ್ಲಿ ಹೊಲಕ್ಕೆ ಪೂಜೆ. ಗೋಮಯದ ಮೂಲಕ ಗದ್ದೆಯನ್ನು ಶುದ್ಧಗೊಳಿಸಲಾಯಿತು. ಬಳಿಕ ಕೆಸರು ತುಂಬಿದ ಗದ್ದೆಯ ಸುತ್ತಲೂ ಕಟ್ಟ ಕಟ್ಟಿ ಹಂತಹಂತವಾಗಿ ನೀರನ್ನು ಹೊರಕ್ಕೆ ಬಿಡಲಾಯಿತು. ಸಾಂಪ್ರದಾಯಿಕ ಗೊಬ್ಬರ ಹರಡಿದ ಬಳಿಕ ಹೊಲ ಹದಗೊಳಿಸುವ ಕೆಲಸ ನಡೆಸಲಾಯಿತು. ಯಂತ್ರದ ಮೂಲಕ ಉಳುಮೆ ಮಾಡಿ ಹೊಲ ಹದಗೊಳಿಸಿದ ಬಳಿಕ ಹಲಗೆ ಬಳಸಿ ಸಮತಟ್ಟುಗೊಳಿಸಿ, ಆರಂಭದಲ್ಲಿ ಸಾಂಪ್ರದಾಯಿಕವಾಗಿ ಭತ್ತದ ಸಸಿಗಳನ್ನು ನಾಟಿ ಮಾಡಲಾಯಿತು. ಮಕ್ಕಳು, ಸ್ಥಳೀಯರು ಓಬೇಲೆ ಹಾಡುಗಳನ್ನು ಹಾಡುತ್ತ ನಾಟಿ ಮಾಡಿದರು. ವ್ಯವಸ್ಥಾಪನ ಸಮಿತಿ ಸದಸ್ಯರಾದ ಬಾಲಕೃಷ್ಣ ಬಳ್ಳೇರಿ, ಕೃಷ್ಣಮೂರ್ತಿ ಭಟ್, ರಾಜೀವ್ ರೈ ಆರ್., ಮಾಧವ ಡಿ., ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ, ಕೆಎಸ್‌ಎಸ್ ಕಾಲೇಜು ಪ್ರಾಂಶುಪಾಲ ಪ್ರೊ| ರಂಗಯ್ಯ ಶೆಟ್ಟಿಗಾರ್, ಎಸ್‌ಎಸ್‌ಪಿಯು ಕಾಲೇಜು ಪ್ರಾಂಶುಪಾಲೆ ಎಸ್.ಎಸ್. ಸಾವಿತ್ರಿ, ಪ್ರೌ.ಶಾಲಾ ವಿಭಾಗ ಮುಖ್ಯ ಶಿಕ್ಷಕ ಯಶವಂತ ರೈ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಶಿವರಾಮ ರೈ, ಪ್ರಮುಖರಾದ ರವೀಂದ್ರ ರುದ್ರಪಾದ, ಮೋಹನದಾಸ್ ರೈ, ದೇಗುಲದ ಕಚೇರಿ ಮುಖ್ಯಸ್ಥರಾದ ಪದ್ಮನಾಭ ಶೆಟ್ಟಿಗಾರ್, ಬಾಲಸುಬ್ರಹ್ಮಣ್ಯ ಮಾರರ್, ಸುಬ್ರಹ್ಮಣ್ಯ ಶಬರಾಯ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಿಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Related Articles
ಆಟದ ಜತೆ ಕೃಷಿ ಪಾಠ
ಮಕ್ಕಳ ಜತೆ ಹಿರಿಯರೂ ಕೂಡ ಗದ್ದೆಗೆ ಇಳಿದು ಕೆಸರಿನಲ್ಲಿ ಹೊಲ ಹದ ಮಾಡುವ ಸಸಿ ನಡೆಸುವ ಕಾರ್ಯದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಸುರಿವ ಮಳೆಯಲ್ಲೆ ನೆನೆದು ಸಂಭ್ರಮಿಸಿದರು. ಭತ್ತದ ನಾಟಿ ಮಾಡುವ ಮೂಲಕ ಹೊಸ ಅನುಭವ ಪಡೆದರು. ನಮ್ಮ ಹಿರಿಯರು ಗದ್ದೆಯಲ್ಲಿ ಎಷ್ಟು ಕಷ್ಟ ಪಡುತ್ತಿದ್ದರು ಎಂಬುದು ಪ್ರಾತ್ಯಕ್ಷಿಕೆ ಮೂಲಕ ಮಕ್ಕಳು ಅರಿತುಕೊಂಡರು. ಭತ್ತದ ಕೃಷಿಕರು ಪಡುವ ಕಷ್ಟದ ಕುರಿತು ಪತ್ರಿಕೆಗಳಲ್ಲಿ, ಟಿ.ವಿ.ಗಳಲ್ಲಿ ನೋಡಿ ತಿಳಿದುಕೊಂಡಿದ್ದ ನಮಗೆ ಅದರ ಪ್ರತ್ಯಕ್ಷ ಅನುಭವ ಆಯಿತು ಎಂದು ಮಕ್ಕಳು ಅನುಭವ ಹಂಚಿಕೊಂಡರು.
Advertisement
ಕೃಷಿ ಸಂಸ್ಕೃತಿಯ ಪರಿಚಯಕೃಷಿ ಸಂಸ್ಕೃತಿ ಮರೆತು ಹೋಗುತ್ತಿರುವ ಕಾಲದಲ್ಲಿ ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ನಡೆಸಿದ್ದೇವೆ. ದೇಗುಲಕ್ಕೆ ಧಾರ್ಮಿಕವಾಗಿಯೂ ಮಹತ್ವವಾಗಿ ಭತ್ತದ ಕದಿರು ಆವಶ್ಯಕತೆಯಿಂದ ಎರಡನ್ನೂ ಇಲ್ಲಿ ಏಕಕಾಲದಲ್ಲಿ ನಡೆಸಲಾಗಿದೆ.
– ನಿತ್ಯಾನಂದ ಮುಂಡೋಡಿ. ವ್ಯವಸ್ಥಾಪನ ಸಮಿತಿ ಅಧ್ಯಕ್ಷರು — ಬಾಲಕೃಷ್ಣ ಭೀಮಗುಳಿ