ಬೆಂಗಳೂರು: ವಿಧಾನ ಮಂಡಲ ಎಂದರೆ ಪ್ರಜಾಪ್ರಭುತ್ವದ ದೇಗುಲ. ಕೊನೆಯ ಅಧಿವೇಶನ ಎಂಬ ಕಾರಣಕ್ಕೆ ಉದಾಸೀನ ಮಾಡದೇ ಕಡ್ಡಾಯವಾಗಿ ಸದನಕ್ಕೆ ಹಾಜರಾಗುವಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸಕರಿಗೆ ಮನವಿ ಮಾಡಿದ್ದಾರೆ.
ವಿಧಾನಮಂಡಲದ ಜಂಟಿ ಹಾಗೂ ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಿಂದ ಆಯ್ಕೆಯಾದ ನಮಗೆ ಸಾಕಷ್ಟು ಜವಾಬ್ದಾರಿಗಳಿವೆ. ಇದು ಚುನಾವಣ ವರ್ಷವಾದ್ದರಿಂದ ಕ್ಷೇತ್ರಗಳಲ್ಲಿ ಒತ್ತಡ ಇರುತ್ತದೆ ಎಂಬುದು ನಿಜವಾದರೂ ಕಲಾಪವನ್ನು ನಿರ್ಲಕ್ಷಿಸದೆ ಕಡ್ಡಾಯವಾಗಿ ಭಾಗಿಯಾಗಬೇಕು. ಮೊದಲೇ ಕಾರ್ಯಕ್ರಮ ಜೋಡಿಸಿಕೊಂಡಿದ್ದರೆ ಅದನ್ನು ರದ್ದುಪಡಿಸಿ ಸದನಕ್ಕೆ ಬರುವಂತೆ ಮನವಿ ಮಾಡಿದರು.
ಇದು 15ನೇ ವಿಧಾನಸಭೆಯ 15ನೇ ಅಧಿವೇಶನ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ರಾಜ್ಯಪಾಲರು ವಿಧಾನಸೌಧದ ಮೆಟ್ಟಿಲ ಮೂಲಕ ಆಗಮಿಸಿ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುತ್ತಾರೆ. ಆ ಬಳಿಕ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗುತ್ತದೆ. ಸೋಮವಾರದಿಂದ ಗುರುವಾರದ ವರೆಗೂ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯುತ್ತದೆ. 17ರಂದು ಮುಖ್ಯಮಂತ್ರಿ ಬಜೆಟ್ ಮಂಡಿಸಲಿದ್ದಾರೆ. ಫೆ 20ರಿಂದ 24ರ ವರೆಗೂ ಬಜೆಟ್ ಮೇಲಿನ ಚರ್ಚೆ ಮತ್ತು ಅಂಗೀಕಾರ ನಡೆಯಲಿದೆ. ಸೋಮವಾರ ಕಲಾಪ ಸಲಹಾ ಸಮಿತಿ ಸಭೆ ಕರೆಯಲಾಗಿದೆ ಎಂದು ವಿವರಿಸಿದರು.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ ಸಹಿತ ಆರು ಖಾಸಗಿ ವಿಶ್ವವಿದ್ಯಾನಿಲಯ ಮಸೂದೆಗಳು ಮಂಡನೆಯಾಗಲಿವೆ. 9 ದಿನಗಳ ಕಾಲ ನಿಯಮದಂತೆ ಪ್ರಶ್ನೋತ್ತರ, ಶೂನ್ಯ ವೇಳೆ, ಚರ್ಚೆ ನಡೆಯಲಿದೆ. 1,300 ಪ್ರಶ್ನೆಗಳು ಬಂದಿವೆ. ಒಟ್ಟು 11 ದಿನ ಅಧಿವೇಶನ ನಡೆಯಲಿದೆ ಎಂದು ಹೇಳಿದರು.
ವರದಿ ಸಲ್ಲಿಸಲಾಗಿದೆ:
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ನನ್ನ ಅಧ್ಯಕ್ಷತೆಯಲ್ಲಿ ಉತ್ತಮ ಸದನ ಪ್ರಶಸ್ತಿ ಆಯ್ಕೆಗೆ ಮಾನದಂಡ ರಚಿಸಲು ದಿಲ್ಲಿ, ಅಸ್ಸಾಂ, ತಮಿಳುನಾಡು ಸ್ಪೀಕರ್ ಅವರನ್ನು ಒಳಗೊಂಡ ಸಮಿತಿ ರಚನೆ ಮಾಡಿದ್ದರು. ಸಾಕಷ್ಟು ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿ ಫೆ.6ರಂದು ವರದಿ ಸಲ್ಲಿಸಿದ್ದೇವೆ. ಈ ವರ್ಷದಿಂದಲೇ ಜಾರಿಗೆ ಬರುವಂತೆ ಪ್ರಶಸ್ತಿ ಪ್ರದಾನ ಮಾಡುವಂತೆ ಮನವಿ ಮಾಡಿದ್ದೇವೆ ಎಂದರು.