Advertisement

Space Wonder: ಸೆ.27 ಸೂರ್ಯ, ಅ.12ಕ್ಕೆ ಭೂಮಿಗೆ ಸಮೀಪಿಸುವ ಧೂಮಕೇತು

01:47 AM Sep 18, 2024 | Team Udayavani |

ಉಡುಪಿ: ಅಪರೂಪದ ಅಟ್ಲಾಸ್‌-ಸುಚಿನ್ಸನ್‌ ಹೆಸರಿನ ಧೂಮಕೇತು ಈ ತಿಂಗಳಾಂತ್ಯ ಮತ್ತು ಅಕ್ಟೋಬರ್‌ ಮೊದಲ ವಾರದಲ್ಲಿ ಬರಿಗಣ್ಣಿಗೆ ಗೋಚರಿಸಲಿದೆ ಎಂದು ಖಗೋಳ ಶಾಸ್ತ್ರಜ್ಞ ಡಾ| ಎ. ಪಿ. ಭಟ್‌ ತಿಳಿಸಿದ್ದಾರೆ.

Advertisement

ಇದನ್ನು 2023ರ ಜನವರಿಯಲ್ಲಿ ದೂರದರ್ಶಕದಲ್ಲಿ ಸುಮಾರು 100 ಕೋಟಿ ಕಿ.ಮೀ. ದೂರದಲ್ಲಿ ಮೊದಲು ವೀಕ್ಷಿಸಲಾಗಿದ್ದು, ಶತಮಾನದ ಧೂಮಕೇತು ಎಂದು ಇದನ್ನು ಬಣ್ಣಿಸಲಾಗಿತ್ತು. ಇದು ಸೆಪ್ಟಂಬರ್‌ ಕೊನೆಯ ವಾರದಲ್ಲಿ ಸೂರ್ಯೋದಯಕ್ಕೆ ಮುನ್ನ ಬರಿಗಣ್ಣಿಗೆ ಕಾಣಲಿದೆ. ಸೌರವ್ಯೂಹದ ಹೊರವಲಯ ಊರ್ಸ್‌  ಕ್ಲೌಡ್‌ನಿಂದ ದೂರದಿಂದ ಹೊರಟ ಈ ಧೂಮಕೇತು ಸೆಕೆಂಡ್‌ಗೆ ಸುಮಾರು 80 ಕಿ.ಮೀ. ವೇಗದಲ್ಲಿ ಕ್ರಮಿಸುತ್ತಾ ಸೆ.27ರಂದು ಸೂರ್ಯನನ್ನು ಸಮೀಪಿಸುತ್ತಿದೆ. ಸೂರ್ಯೋದಯಕ್ಕಿಂತ ಮುನ್ನ ಇದು ಬರಿಗಣ್ಣಿಗೆ ಗೋಚರವಾಗಲಿದೆ.

80 ಸಾವಿರ ವರ್ಷಕ್ಕೊಮ್ಮೆ ಸೂರ್ಯನನ್ನು ಸುತ್ತುವ ಈ ಧೂಮಕೇತು ಸೂರ್ಯನಿಂದ ಹಿಂದಿರುಗುವಾಗ ಅಕ್ಟೋಬರ್‌ ಸಂಜೆಯ ಪಶ್ಚಿಮ ಆಕಾಶದಲ್ಲಿ ಬರಿಗಣ್ಣಿಗೆ ಕಾಣಿಸಿ, ಅ.12ರಂದು ಭೂಮಿಗೆ ಸಮೀಪಿಸಲಿದೆ. ಅಕ್ಟೋಬರ್‌ ಮೊದಲ ವಾರದಲ್ಲಿ ಪಶ್ಚಿಮ ಆಕಾಶದಲ್ಲಿ ಸೂರ್ಯಾಸ್ತದ ಬಳಿಕ ಬರಿಗಣ್ಣಿನಿಂದ ಮತ್ತಷ್ಟು ಸುಂದರವಾಗಿ ಕಾಣಬಹುದು.

ವಿಜ್ಞಾನಿಗಳು ಇದೊಂದು ಶತಮಾನದ ಧೂಮಕೇತುವಾಗಲಿದೆ ಎಂದು ಅಂದಾಜಿಸಿದ್ದರಾದರೂ, 2024ರ ಫೆಬ್ರವರಿಯ ಹೊತ್ತಿಗೆ ಇದು ಕಾಣೆಯಾದಾಗ ಸಿಡಿದು ಹೋಗಿದೆ ಎನ್ನಲಾಗಿತ್ತು. ಇದರ ತುಂಡೋ ಅಥವಾ ಮೂಲ ಧೂಮಕೇತುವಿನ ಒಂದು ರೂಪ ದೂರದರ್ಶಕಕ್ಕೆ ಪುನಃ ಗೋಚರಿಸಿದ್ದು, ಈ ಬಗ್ಗೆ ಅಧ್ಯಯನ ನಡೆಸಿದಾಗ ಬರಿಗಣ್ಣಿಗೆ ಕಾಣುವ ವರ್ಷದ ಧೂಮಕೇತುವಾಗಲಿದೆ ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next