Advertisement
ಎರಡು ಬಾರಿ ಇದೇ ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿ ಶಾಸಕ ಬಿ.ಎನ್.ವಿಜಯಕುಮಾರ್ ಅವರು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದು, ಬಿರುಸಿನ ಪ್ರಚಾರ ನಡೆಸಿದ್ದಾರೆ. ಸಾಕಷ್ಟು ಹೋಯ್ದಾಟಗಳ ನಡುವೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಸೌಮ್ಯಾ ರೆಡ್ಡಿ, ಕ್ಷೇತ್ರದಾದ್ಯಂತ ಮತ ಯಾಚನೆಯಲ್ಲಿ ತೊಡಗಿದ್ದಾರೆ.
Related Articles
Advertisement
ಕ್ಷೇತ್ರದ ಭೈರಸಂದ್ರ, ಪಟ್ಟಾಭಿರಾಮನಗರ, ಜಯನಗರ ಪೂರ್ವ, ಜೆ.ಪಿ.ನಗರ, ಸಾರಕ್ಕಿ, ಶಾಕಾಂಬರಿನಗರ ವಾರ್ಡ್‌ಗಳಲ್ಲಿ ಬಿಜೆಪಿ ಸದಸ್ಯರಿದ್ದರೆ, ಗುರಪ್ಪನಪಾಳ್ಯ ವಾರ್ಡ್‌ನಲ್ಲಷ್ಟೇ ಕಾಂಗ್ರೆಸ್ ಸದಸ್ಯರಿದ್ದಾರೆ. ಹಾಗಾಗಿ ಸದ್ಯ ಬಿಜೆಪಿಯ ಸಂಘಟನೆ ಉತ್ತಮವಾಗಿದೆ.
ರಾಮಲಿಂಗಾರೆಡ್ಡಿ ಹಳೆಯ ನಂಟು: ಜಯನಗರ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದ ರಾಮಲಿಂಗಾರೆಡ್ಡಿ 2008ರ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಬಿಟಿಎಂ ಲೇಔಟ್ ಕ್ಷೇತ್ರದಿಂದ ಸ್ಪರ್ಧಿಸಲಾರಂಭಿಸಿದರು. ಹಳೆಯ ಭೈರಸಂದ್ರ, ಗುರಪ್ಪನಪಾಳ್ಯ, ಪಟ್ಟಾಭಿರಾಮನಗರ ವಾರ್ಡ್ ಹಾಗೂ ಶಾಕಂಬರಿನಗರ, ಜಯನಗರ ಪೂರ್ವ ವಾರ್ಡ್‌ನ ಕೆಲ ಪ್ರದೇಶ ಇಂದಿಗೂ ಜಯನಗರ ಕ್ಷೇತ್ರದಲ್ಲೇ ಉಳಿದಿವೆ. ಈ ಪ್ರದೇಶಗಳಲ್ಲಿನ ಕಾಂಗ್ರೆಸ್ ನಂಟನ್ನು ಗಟ್ಟಿಕೊಳ್ಳುವ ಕಾರ್ಯದಲ್ಲಿ ರಾಮಲಿಂಗಾರೆಡ್ಡಿ ತೊಡಗಿಸಿಕೊಂಡಿದ್ದಾರೆ.
ಕಳೆದ ಬಾರಿ 12,097 ಮತ ಗಳಿಸಿ ಮೂರನೇ ಸ್ಥಾನದಲ್ಲಿದ್ದ ಕೆ.ಎಸ್.ಸಮೀವುಲ್ಲಾ ಸದ್ಯ ಕಾಂಗ್ರೆಸ್‌ನಲ್ಲಿದ್ದಾರೆ. ಕಾಂಗ್ರೆಸ್‌ನಿಂದ ದೂರವಾಗಿದ್ದ ಮಾಜಿ ಕಾರ್ಪೋರೇಟರ್ ಮುನಿಸಂಜೀವಯ್ಯ ಪಕ್ಷಕ್ಕೆ ವಾಪಸಾಗಿದ್ದಾರೆ. ಟಿಕೆಟ್ ಕೈತಪ್ಪಿದ್ದರೂ ಎಂ.ಸಿ.ವೇಣುಗೋಪಾಲ್ ಪ್ರತಿರೋಧ ತೋರದ ಕಾರಣ ಬಂಡಾಯದ ಬಿಸಿಯೂ ಕಾಂಗ್ರೆಸ್‌ಗೆ ಇಲ್ಲ.
ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಸರಳ ವ್ಯಕ್ತಿತ್ವದ ಬಿ.ಎನ್.ವಿಜಯಕುಮಾರ್ ಅವರಿಗೆ ನೌಕರ ವರ್ಗ, ಮಧ್ಯಮ ವರ್ಗದವರ ಬೆಂಬಲವಿದ್ದಂತಿದೆ. ಜತೆಗೆ ಇತರೆ ವರ್ಗದವರನ್ನು ಸೆಳೆಯಲು ವಿಜಯಕುಮಾರ್ ಪ್ರಯತ್ನಿಸಿದ್ದಾರೆ. ಜಯನಗರ ಕ್ಷೇತ್ರದಿಂದ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಿರುವ ಸೌಮ್ಯಾರೆಡ್ಡಿ ಯುವಜನತೆ, ವೃತ್ತಿಪರ, ಉದ್ಯೋಗಿಗಳು ಸೇರಿದಂತೆ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳ ಮೇಲೆ ಗಮನ ಹರಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಕಾಳೇಗೌಡ ಇನ್ನಷ್ಟೇ ಪ್ರಚಾರ ಚುರುಕುಗೊಳಿಸಬೇಕಿದೆ. ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾರೆಡ್ಡಿ ಹಲವು ಸುತ್ತಿನ ಪ್ರಚಾರ ಮುಗಿಸಿದ್ದು, ಮತದಾರರನ್ನು ಸೆಳೆಯುವಲ್ಲಿ ನಿರತರಾಗಿದ್ದಾರೆ. ಎಂಇಪಿಯಿಂದ ಸೈಯದ್ ಜಬಿ ಸೇರಿದಂತೆ ಒಟ್ಟು 19 ಮಂದಿ ಕಣದಲ್ಲಿದ್ದಾರೆ. ಒಟ್ಟಾರೆ ಬಿಜೆಪಿ ಗೆಲುವಿನ ಓಟ ಮುಂದುವರಿಸುವ ಉತ್ಸಾಹದಲ್ಲಿದ್ದರೆ, ಕಾಂಗ್ರೆಸ್ ಕ್ಷೇತ್ರವನ್ನು ಕೈವಶಮಾಡಿಕೊಳ್ಳುವ ಪ್ರಯತ್ನದಲ್ಲಿದ್ದು ಎರಡೂ ಪಕ್ಷಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
* ಕೀರ್ತಿಪ್ರಸಾದ್ ಎಂ.