ಸೆಂಚೂರಿಯನ್, ದಕ್ಷಿಣ ಆಫ್ರಿಕ : ಪ್ರವಾಸಿ ಭಾರತ ಕ್ರಿಕೆಟ್ ತಂಡದ ವಿರುದ್ದದ ಎರಡನೇ ಟೆಸ್ಟ್ ಪಂದ್ಯವನ್ನು ಆತಿಥೇಯ ದಕ್ಷಿಣ ಆಫ್ರಿಕ 135 ರನ್ನುಗಳಿಂದ ಗೆದ್ದುಕೊಂಡಿದೆ. ಅಂತೆಯೇ ಮೂರು ಟೆಸ್ಟ್ ಪಂದ್ಯಗಳ ಈ ಸರಣಿಯನ್ನು ಅದು 2-0 ಅಂತರದಲ್ಲಿ ಜಯಿಸಿದೆ.
ದಕ್ಷಿಣ ಆಫ್ರಿಕ ಮೊದಲ ಇನ್ನಿಂಗ್ಸ್‌ನಲ್ಲಿ 335 ರನ್ ಬಾರಿಸಿತ್ತು. ಭಾರತ 307 ರನ್ ಗಳಿಸಿತ್ತು.
ಎರಡನೇ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕ 258 ರನ್ ಗಳಿಸಿತ್ತು. ಭಾರತ ಕೇವಲ 50.2 ಓವರ್‌ಗಳ ಆಟದಲ್ಲಿ ಜುಜುಬಿ 151 ರನ್‌ಗಳಿಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.
ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ಗರಿಷ್ಠ ರನ್ ತೆಗೆದವರೆಂದರೆ ರೋಹಿತ್ ಶರ್ಮಾ (47). ಇವರ ನಂತರದಲ್ಲಿ ಅತೀ ಹಚ್ಚು ರನ್ ತೆಗೆದವರು ಮೊಹಮ್ಮದ್ ಶಮಿ (28).
ದಕ್ಷಿಣ ಆಫ್ರಿಕದ ಎಸೆಗಾರ ಲುಂಜಿ ಎನ್‌ಜಿಡಿ 12.2 ಓವರ್ ಎಸೆದು 39 ರನ್ ವೆಚ್ಚಕ್ಕೆ 6 ವಿಕೆಟ್ ಕಿತ್ತು ಭಾರತದ ಸೋಲಿಗೆ ಮುಖ್ಯ ಕಾರಣರಾದರು. ರಬಾಡ 3 ವಿಕೆಟ್ ಕಿತ್ತರು. ಚೇತೇಶ್ವರ ಪೂಜಾರ (19) ರನೌಟ್ ಆಗಿದ್ದರು.