Advertisement

ಸೋಣಂಗೇರಿ: ಸರ್ಕಲ್‌ ಇಲ್ಲದೆ ಸವಾರರ ಸರ್ಕಸ್‌

05:06 AM Feb 03, 2019 | Team Udayavani |

ಸೋಣಂಗೇರಿ: ನಾಲ್ಕು ದಿಕ್ಕುಗಳಿಂದ ವಾಹನ ಪ್ರವೇಶಿಸುವ ನಗರದ ಹೊರವಲಯದ ಸೋಣಂಗೇರಿ ಬಳಿ ಸಂಚಾರ ಸುರಕ್ಷತೆಗೆ ಸರ್ಕಲ್‌ ಇಲ್ಲದೆ ಸವಾರರು ಸಂಚಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ.

Advertisement

ಇಲ್ಲಿ ವಾಹನ ಸವಾರರು ಕೊಂಚ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ನಾಲ್ಕು ದಿಕ್ಕಿನಿಂದ ವಾಹನ ಪ್ರವೇಶಿಸುವ ಪ್ರದೇಶ ಇದಾಗಿದ್ದು, ಅವಘಡ ಮತ್ತು ವೇಗ ನಿಯಂತ್ರಣಕ್ಕೆ ಸರ್ಕಲ್‌ (ವೃತ್ತ) ಅಗತ್ಯವಿದೆ. ತಾತ್ಕಾಲಿಕವಾಗಿ ಬ್ಯಾರಿಕೇಡ್‌ ಹಾಕಿದ್ದರೂ, ಎರಡು ದಿಕ್ಕುಗಳಿಂದ‌ ವಾಹನಗಳು ಸಂಗಮಿಸುವ ಸ್ಥಳದಿಂದ ದೂರ ಇರುವ ಕಾರಣ ಹೆಚ್ಚು ಪ್ರಯೋಜನವಾಗದು ಎನ್ನುವುದು ಸವಾರರ ದೂರು.

ನಾಲ್ಕು ದಿಕ್ಕು
ಬೆಳ್ಳಾರೆ, ಸುಳ್ಯ ನಗರ, ಪ್ರಸಿದ್ಧ ಯಾತ್ರಾ ಸ್ಥಳ ಸುಬ್ರಹ್ಮಣ್ಯ, ಶಬರಿಮಲೆಗೆ ಸಂಪರ್ಕಿಸುವ ಪ್ರಯಾಣಿಕರು ಸಂಚರಿ ಸುವ ರಸ್ತೆ ಇದಾಗಿದೆ. ಸುಬ್ರಹ್ಮಣ್ಯ- ಗುತ್ತಿಗಾರು- ಸೋಣಂಗೇರಿ- ಜಾಲ್ಸೂರು, ಕಾಸರಗೋಡು, ಪುತ್ತೂರು- ಜಾಲ್ಸೂರು- ಸುಬ್ರಹ್ಮಣ್ಯರಸ್ತೆ, ಸೋಣಂಗೇರಿ- ಐವರ್ನಾಡು- ಬೆಳ್ಳಾರೆ, ಸೋಣಂಗೇರಿ- ಪೈಚಾರು- ಸುಳ್ಯ ನಡುವೆ ಹಾದು ಹೋಗಿರುವ ರಸ್ತೆ ಇದಾಗಿದೆ. ಶಬರಿಮಲೆಗೆ ತೆರಳುವ ಭಕ್ತರು ಸೋಣಂಗೇರಿ ಮೂಲಕ ಜಾಲ್ಸೂರು ಮಾರ್ಗವಾಗಿ ಸಂಚರಿಸುತ್ತಾರೆ.

ಮಂಗಳೂರು, ಪುತ್ತೂರು ಭಾಗದಿಂದ ಸುಬ್ರಹ್ಮಣ್ಯಕ್ಕೆ ತೆರಳುವ ಪ್ರಯಾಣಿಕರು ಕೂಡ ಇಲ್ಲಿಂದಲೇ ಸಂಚರಿಸುತ್ತಾರೆ. ಹೀಗಾಗಿ ದಿನವಿಡೀ ವಾಹನ ದಟ್ಟಣೆ ಇರುವ ಪ್ರದೇಶ ಇದಾಗಿದ್ದು, ಸಂಚಾರ ನಿಯಂತ್ರಣ ವ್ಯವಸ್ಥೆಗಳು ಇಲ್ಲದೆ ಅನೇಕ ಅವಘಡಗಳು ಸಂಭವಿಸಿವೆ. ಬೆಳ್ಳಾರೆ, ಸುಬ್ರಹ್ಮಣ್ಯ ಭಾಗದಿಂದ ಅಥವಾ ಜಾಲ್ಸೂರು, ಪೈಚಾರು ಭಾಗದಿಂದ ಏಕಕಾಲದಲ್ಲಿ ವಾಹನಗಳು ಸೋಣಂಗೇರಿ ಪ್ರವೇಶಿಸಿದರೆ ಆಗ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚು. ಇಲ್ಲಿ ವಾಹನ‌ಗಳಿಗೆ ಪಥ ಬದಲಾವಣೆಗೆ ಯಾವ ಸಿಗ್ನಲ್‌ ಇಲ್ಲ. ಸರ್ಕಲ್‌ ಇಲ್ಲ. ಅಂದಾಜಿನಲ್ಲಿ ತಿರುಗಿಸಬೇಕು. ಸ್ವಲ್ಪ ಎಡವಿದರೂ ಅಪಘಾತ ಸಂಭವಿಸಬಹುದು. ಈಗಾಗಲೇ ಹಲವು ವಾಹನ ಅಪ ಘಾತಗಳು ಸಂಭವಿಸಿವೆ. ಅದಾಗ್ಯೂ ಇಲಾಖೆ, ಸ್ಥಳೀಯ ಪಂ. ತತ್‌ಕ್ಷಣ ಕ್ರಮ ಕೈಗೊಂಡಿಲ್ಲ. ವೃತ್ತ ನಿರ್ಮಾಣಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅನುದಾನಕ್ಕಾಗಿ ಕಾಯಲಾಗುತ್ತಿದೆ.

ಪ್ರಸ್ತಾವನೆ ಸಲ್ಲಿಕೆ
ನಾಲ್ಕು ದಿಕ್ಕಿನಿಂದ ವಾಹನ ಪ್ರವೇಶಿಸುವ ಕಾರಣ ಅಲ್ಲಿ ವೃತ್ತ ನಿರ್ಮಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದ ತತ್‌ಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
-ಎಸ್‌. ಸಣ್ಣೇಗೌಡ,
ಎಇಇ, ಪಿಡಬ್ಲ್ಯೂಡಿ ಸುಳ್ಯ

Advertisement

ಚರ್ಚಿಸಲಾಗುವುದು
ಸುರಕ್ಷತೆಗೆ ಆದ್ಯತೆ ನೀಡಬೇಕು ಎನ್ನುವ ಬಗ್ಗೆ ಬೇಡಿಕೆ ಬಂದಿದೆ. ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು. ಲೋಕೋಪಯೋಗಿ ಇಲಾಖೆ ಗಮನಕ್ಕೆ ತರಲಾಗುವುದು.
-ಶೀನ ಎ.,
ಪಿಡಿಒ, ಜಾಲ್ಸೂರು ಗ್ರಾ.ಪಂ.

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next