ಮುದಗಲ್ಲ: ಸಮೀಪದ ತಲೇಖಾನ ಗ್ರಾಪಂ ವ್ಯಾಪ್ತಿಯ ಸೋಂಫುರ ತಾಂಡಾದಲ್ಲಿ ವಿಚಿತ್ರ ಸುಮಾರು 25ಕ್ಕೂ ಹೆಚ್ಚು ಜನ ಮೈಕೈ ನೋವು, ತಲೆ ಸುತ್ತುಬರುವುದು, ವಿಪರೀತ ಜ್ವರದಿಂದ ಬಳಲುತ್ತಿದ್ದು, ಯಾವ ಕಾಯಿಲೆ ಎಂಬುದು ತಿಳಿಯುತ್ತಿಲ್ಲ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಕಳೆದ 15 ದಿನಗಳ ಹಿಂದೆ ತಾಂಡಾದಲ್ಲಿ ಒಬ್ಬಿಬ್ಬರಿಗೆ ಈ ಕಾಯಿಲೆ ಕಾಣಿಸಿಕೊಂಡಿತ್ತು. ಈಗ ಸುಮಾರು 25ಕ್ಕೂ ಹೆಚ್ಚು ಜನ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸಾಂಕ್ರಾಮಿಕ ಕಾಯಿಲೆಯಂತೆ ದಿನೇದಿನೇ ಹೆಚ್ಚುತ್ತಿದೆ. ಆರಂಭದಲ್ಲಿ ಮೈ-ಕೈ, ಕಾಲು, ಬೆನ್ನು ನೋವು, ಚಕ್ರ ಬರುವುದು, ಜ್ವರ ಬರುತ್ತದೆ. ಎರಡ್ಮೂರು ದಿನದಲ್ಲಿ ವಿಪರೀತ ಜ್ವರದಿಂದ ರೋಗಿ ನಿಶ್ಯಕ್ತಿಯಾಗುತ್ತಿದ್ದಾನೆ ಎಂದು ತಾಂಡಾದ ಮೇಘಪ್ಪ, ಉಮಾಪತಿ, ಕಾಮಣ್ಣ, ಕೇಶಪ್ಪ, ಅಮರೇಶ ತಿಳಿಸಿದ್ದಾರೆ.
ಅಮರೇಶ ಅಂಗಡಿ, ಶಾರದಾ ಉಮಾಪತಿ, ಸತೀಶ ಬಾಳಪ್ಪ, ಲಕ್ಷ್ಮವ್ವ ಮೇಘಪ್ಪ, ಮಾನಮ್ಮ, ಲಚುಮವ್ವ ಶರಣಪ್ಪ, ನೀಲಮ್ಮ ದಾದಪ್ಪ, ಪಾರ್ವತಿ ಅಮರೇಶ, ಅಭಿ, ಶರಣಪ್ಪ, ಉಮ್ಮವ್ವ ಕಾಮಣ್ಣ, ಭೀಮಶಪ್ಪ, ಶಾಂತಮ್ಮ, ಶ್ರೀದೇವಿ ಸೇರಿ 20ಕ್ಕೂ ಹೆಚ್ಚು ರೋಗಿಗಳು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಂಡಾದಲ್ಲಿ ಏಕಾಏಕಿ ಕಾಯಿಲೆ ಕಾಣಿಸಿಕೊಂಡಿದ್ದು, ಇದಕ್ಕೆ ನಿಖರ ಕಾರಣ ತಿಳಿಯುತ್ತಿಲ್ಲ ಎಂದು ತಾಂಡಾದ ಮೇಘಪ್ಪ ತಿಳಿಸಿದ್ದಾರೆ.
ಪರದಾಟ: ಮಾಕಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸೋಂಪುರ ತಾಂಡಾದ ರೋಗಿಗಳು ಚಿಕಿತ್ಸೆಗೆ ಸಾವಿರಾರು ರೂ. ಖರ್ಚು ಮಾಡಿದರೂ ಕಾಯಿಲೆ ಹತೋಟಿಗೆ ಬರುತ್ತಿಲ್ಲ. ಮುದಗಲ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾದರೆ ವೈದ್ಯರು ಔಷಧಿಗಳನ್ನು ಖಾಸಗಿ ಅಂಗಡಿಯಿಂದ ತರಿಸಿ ಚಿಕಿತ್ಸೆ ನೀಡಿದರೂ ರೋಗಿಗಳು ಗುಣಮುಖರಾಗಿಲ್ಲ. ಹೀಗಾಗಿ ಕೆಲವರು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಯಿಲೆ ಉಲ್ಬಣಗೊಂಡಿದ್ದರೂ ಈವರೆಗೂ ತಾಂಡಾಕ್ಕೆ ಆರೋಗ್ಯ ಇಲಾಖೆ ವೈದ್ಯರು ಭೇಟಿ ನೀಡಿ ಪರಿಶೀಲನೆಗೆ ಮುಂದಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ತಾಂಡಾದಲ್ಲಿ ಉಲ್ಬಣಗೊಂಡಿರುವ ಕಾಯಿಲೆ ಕುರಿತು ಆರೋಗ್ಯ ಇಲಾಖೆ ಗಮನ ಹರಿಸಿ ಸೂಕ್ತ ಚಿಕಿತ್ಸೆ ನೀಡಬೇಕು. ಗ್ರಾಪಂ ಆಡಳಿತ ಶುದ್ಧ ನೀರು ಪೂರೈಕೆಗೆ ಹಾಗೂ ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್‌ಗೆ ವ್ಯವಸ್ಥೆ ಮಾಡಬೇಕು
•ಶಾರದಾ ದೇವಪ್ಪ ರಾಠೊಡ, ತಾಪಂ ಸದಸ್ಯೆ ಹಡಗಲಿ.
ಸೋಂಪುರ ತಾಂಡಾದಿಂದ ಬಂದ ರೋಗಿಗಳಲ್ಲಿ ಡೆಂಘೀ ಜ್ವರದ ಲಕ್ಷಣಗಳು ಕಾಣಿಸುತ್ತಿವೆ.
•ಡಾ| ರಮೇಶ ಮಟ್ಟೂರ, ಚಿಕಿತ್ಸೆ ನೀಡಿದ ವೈದ್ಯ
ಸೋಂಪುರ ತಾಂಡಾ ಜನತೆಗೆ ಬಾಧಿಸುತ್ತಿರುವ ಕಾಯಿಲೆ ಬಗ್ಗೆ ಮಾಹಿತಿ ಇಲ್ಲ. ತಾಂಡಾಕ್ಕೆ ವೈದ್ಯರ ತಂಡ ಕಳುಹಿಸಿ ರಕ್ತದ ಮಾದರಿ ಸಂಗ್ರಹಿಸುವ ಮೂಲಕ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು.
•ಡಾ| ನಜೀರಸಾಬ, ಜಿಲ್ಲಾ ಆರೋಗ್ಯಾಧಿಕಾರಿ ರಾಯಚೂರು.