ಮೈಸೂರು: ಸರ್ಕಾರದ ಆದೇಶವನ್ನು ಪಾಲಿಸದೆ ರೈತರನ್ನು ವಂಚಿಸುತ್ತಿರುವ ಜಿಲ್ಲೆಯ ಬಣ್ಣಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿರುವ ಅವರು, ಜಿಲ್ಲೆಯ ಬಣ್ಣಾರಿ ಸಕ್ಕರೆ ಕಾರ್ಖಾನೆ ರೈತರ ಕಬ್ಬು ಕಟಾವು ಮಾಡದೆ ವಿಳಂಬ ಮಾಡುತ್ತಿದೆ. ಮಂಡ್ಯ ಜಿಲ್ಲೆಯ ಹೊರಭಾಗದಿಂದ ಕಬ್ಬು ಸರಬರಾಜು ಮಾಡಿಕೊಳ್ಳುತ್ತಿರುವುದರಿಂದ ಸ್ಥಳೀಯ ರೈತರಿಗೆ ಕಬ್ಬು ಕಟಾವು ವಿಳಂಬವಾಗುತ್ತಿದೆ.ಇದರಿಂದ ಕಬ್ಬು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.
ರಾಜ್ಯ ಸರ್ಕಾರ ಸ್ಥಳೀಯ ರೈತರ ಕಬ್ಬನ್ನು ಪ್ರಥಮ ಆದ್ಯತೆಯಲ್ಲಿ ಕಟಾವು ಮಾಡಿ ಸಾಗಾಣಿಕೆ ಮಾಡಿಕೊಳ್ಳಬೇಕೆಂದು ಆದೇಶ ಹೊರಡಿಸಿದ್ದರೂ ಬಣ್ಣಾರಿ ಕಾರ್ಖಾನೆ ಈ ಆದೇಶವನ್ನು ಪಾಲಿಸುತ್ತಿಲ್ಲ. 2017-18ನೇ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ಎಫ್ಆರ್‌ಪಿ ಹಣ ಮಾತ್ರ ಪಾವತಿಸಿದ್ದು, ಎಸ್‌ಎಪಿ ದರದ ಬಾಬ್ತು ಅಂತಿಮ ಕಂತಿನ ಹಣ ಪಾವತಿಸಿಲ್ಲ. ಕೂಡಲೇ ಅಂತಿಮ ಕಂತಿನ ಹಣ ಕೊಡಿಸಲು ಕ್ರಮಕೈಗೊಳ್ಳಬೇಕು.
ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ನಡುವೆ ಕಾನೂನು ಬದ್ಧ ದ್ವಿಪಕ್ಷೀಯ ಒಪ್ಪಂದ ಪತ್ರ ಜಾರಿ ಮಾಡಿ ಆದೇಶ ಹೊರಡಿಸಿದ್ದರೂ ಬಣ್ಣಾರಿ ಕಾರ್ಖಾನೆಯವರು ತಮ್ಮಿಷ್ಟದಂತೆ ಏಕಪಕ್ಷೀಯವಾಗಿ ಒಪ್ಪಂದ ಪತ್ರ ಮುದ್ರಿಸಿಕೊಂಡು ರೈತರಿಂದ ಸಹಿ ಪಡೆಯುತ್ತಿದ್ದಾರೆ.
ಜೊತೆಗೆ ರಾಜ್ಯದಲ್ಲಿ ಎಸ್‌ಎಪಿ ಕಾಯ್ದೆ ಜಾರಿಗೆ ಬಂದ ಮೇಲೆ ಬಣ್ಣಾರಿ ಕಾರ್ಖಾನೆಯವರು ಸಕ್ಕರೆ ಇಳುವರಿಯನ್ನು ಕಡಿಮೆ ತೋರಿಸುತ್ತಿದ್ದಾರೆ. ಇದರಿಂದ ರೈತರಿಗೆ ಎಫ್ಆರ್‌ಪಿ ಬೆಲೆಯಲ್ಲಿ ನಷ್ಟವಾಗುತ್ತಿದೆ. ಹಿಂದಿನ ಹತ್ತು ವರ್ಷಗಳ ಇಳುವರಿ ಸರಾಸರಿಯನ್ನು ಪರಿಗಣಿಸಿ ಪ್ರಸಕ್ತ ಸಾಲಿಗೆ ಸಕ್ಕರೆ ಇಳುವರಿಗೆ ಪಾವತಿಸಬೇಕು ಅಥವಾ ಪ್ರತಿ ರೈತನ ಜಮೀನಿನ ಇಳುವರಿಯನ್ನು ಪರಿಗಣಿಸಿ ಎಫ್ಆರ್‌ಪಿ ಹಣ ಪಾವತಿಸುವಂತಾಗಬೇಕು.
ಕೆಲ ರಾಷ್ಟ್ರೀಕೃತ ಬ್ಯಾಂಕುಗಳವರು ಕೃಷಿ ಸಾಲ ಪಡೆದಿರುವ ರೈತರ ಮೇಲೆ ಅನಾವಶ್ಯಕವಾಗಿ ನ್ಯಾಯಾಲಯದಲ್ಲಿ ದಾವೆ ದಾಖಲಿಸುತ್ತಿದ್ದಾರೆ. ರಾಜ್ಯ ಸರ್ಕಾರ ಸಾಲಮನ್ನಾ ಘೋಷಣೆ ಮಾಡಿದ್ದರೂ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ.
ಕಾವೇರಿ ಗ್ರಾಮೀಣ ಬ್ಯಾಂಕ್‌ನವರು ರೈತರ ಚಿನ್ನಾಭರಣಗಳನ್ನು ಗಿರವಿ ಇರಿಸಿಕೊಂಡು ಕೃಷಿ ಸಾಲ ನೀಡುವಾಗ ಹೆಚ್ಚಿನ ಬಡ್ಡಿ ವಿಧಿಸುತ್ತಿದ್ದು, ಸರ್ಕಾರದ ಸಹಾಯಧನ, ಬೆಳೆ ವಿಮೆಗಳ ಹಣವನ್ನು ಬೆಳೆಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿದ್ದಾರೆ. ಕೂಡಲೇ ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.