ಕೊರೊನಾ ಸಮಯದಲ್ಲಿ ಪರೀಕ್ಷೆಗಿಂತ ವಿದ್ಯಾರ್ಥಿಗಳ ಜೀವ ಬಹಳ ಮುಖ್ಯವೆಂಬ ಕಾರಣದಿಂದ ರಾಜ್ಯ ಸರ್ಕಾರ 2020-21ರಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸದೆ, ಎಲ್ಲರನ್ನೂ ಪಾಸ್ ಮಾಡಿತ್ತು. ಆ ವರ್ಷಕ್ಕೆ ಸಂಬಂಧಿಸಿದಂತೆ ಸಿಇಟಿ ಅಂಕಗಳನ್ನು ಪರಿಗಣಿಸಿ ಫಲಿತಾಂಶ ನೀಡಿತ್ತು. ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ಕೈಗೊಂಡ ನಿರ್ಧಾರ ಸ್ವಾಗತಾರ್ಹವಾದುದು. ಇಂತಹ ದೃಢ ನಿರ್ಧಾರ ಸಾರ್ವಕಾಲೀಕವಾಗಬೇಕಿತ್ತು. ಆದರೆ, ಕಳೆದ ವರ್ಷದ ಸರ್ಕಾರದ ನಿರ್ಧಾರ, ಈ ವರ್ಷ ವಿದ್ಯಾರ್ಥಿಗಳಿಗೆ ಸಮಸ್ಯೆ ತಂದೊಡ್ಡಿದೆ. ಇದಕ್ಕೆ ಸರ್ಕಾರವೇ ಪರಿಹಾರ ಕಲ್ಪಿಸಬೇಕಿದೆ.
ಏಕೆಂದರೆ, ಕೊರೊನಾ ಕಾರಣದಿಂದ ಪರೀಕ್ಷೆ ನಡೆಸಲು ಸಾಧ್ಯವಿಲ್ಲವೆಂಬ ನಿರ್ಧಾರ ಕೈಗೊಂಡಿದ್ದು, ಸರ್ಕಾರವೇ ಹೊರತು ವಿದ್ಯಾರ್ಥಿಗಳಲ್ಲ. ಈಗ ಕಳೆದ ವರ್ಷದ ವಿದ್ಯಾರ್ಥಿಗಳಿಗೆ ಕೇವಲ ಸಿಇಟಿ ಅಂಕಗಳನ್ನು ಪರಿಗಣಿಸಿ ಫಲಿತಾಂಶ ನೀಡುತ್ತೇವೆ. ದ್ವಿತೀಯ ಪಿಯುಸಿ ಫಲಿತಾಂಶದ ಅಂಕ ಸೇರ್ಪಡೆ ಮಾಡುವುದಿಲ್ಲವೆಂದು ಹೇಳುತ್ತಿರುವುದು ಹಿಂದಿನ ವರ್ಷದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಕೊರೊನಾ ಸಮಯದಲ್ಲಿ ಆನ್‌ಲೈನ್ ತರಗತಿಗಳನ್ನೇ ನಂಬಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿದ್ದಾರೆ. ತಮ್ಮ ರ್‍ಯಾಂಕ್ ಸರಿಯಿಲ್ಲವೆಂದು ಭಾವಿಸಿದವರು ಮತ್ತು ಕಳೆದ ವರ್ಷ ಸರಿಯಾದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗ ದವರು ಈ ಶೈಕ್ಷಣಿಕ ವರ್ಷದಲ್ಲಿ ಮತ್ತೂಂದು ಬಾರಿ ಪ್ರಯತ್ನಿಸಿ ಸಿಇಟಿ ಬರೆದಿದ್ದಾರೆ. ಕಳೆದ ವರ್ಷದ ನಿಯಮವನ್ನು ಸರ್ಕಾರ ಈ ವರ್ಷಕ್ಕೆ ನಿಗದಿ ಮಾಡಿರುವುದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುವಂತಾಗಿದೆ.
ಅಲ್ಲದೆ, ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿ ಅಂಕಗಳ ಆಧಾರದಲ್ಲಿಯೇ ದ್ವಿತೀಯ ಪಿಯುಸಿ ಅಂಕಗಳನ್ನು ನೀಡಲಾಗಿದೆ. ಸರಾಸರಿ ಅಂಕಗಳನ್ನು ಪರಿಗಣಿಸಿರುವುದರಿಂದ ಕನಿಷ್ಠ ಅಂಕದ ಮೇಲೆ ಎಲ್ಲರನ್ನೂ ಪಾಸ್ ಮಾಡಲಾಗಿದೆ. ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಇರಲಿ ಅಥವಾ ಕನಿಷ್ಠ ಅಂಕದ ಆಧಾರದಲ್ಲಿ ಉತ್ತೀರ್ಣ ಮಾಡಿದ್ದರೂ ಅದಕ್ಕೆ ವಿದ್ಯಾರ್ಥಿಗಳ ಹಿಂದಿನ ವರ್ಷದ ಅಂಕವೇ ಅಂತಿಮವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈಗ ಹಿಂದಿನ ವರ್ಷದ ಅಂಕಗಳನ್ನು ಪರಿಗಣಿಸುವುದಿಲ್ಲವೆಂಬ ನಿರ್ಧಾರದಿಂದ ಸುಮಾರು 24 ಸಾವಿರ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ.
ಒಂದು ವೇಳೆ ಸರ್ಕಾರ ಪುನರಾವರ್ತಿತ ವಿದ್ಯಾರ್ಥಿಗಳ ವಿಚಾರದಲ್ಲಿ ನಿರ್ಲಕ್ಷ್ಯಧೋರಣೆ ಅನುಸರಿಸಿದರೆ, ಸಾವಿರಾರು ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಕೊಡಲಿಪೆಟ್ಟು ಬೀಳಬಹುದು. ಅವರ ವೃತ್ತಿಪರ ಶಿಕ್ಷಣದ ಕನಸು ಕಮರುವಂತಾಗುವುದು. ಅದರ, ಬದಲಾಗಿ ಸರ್ಕಾರ ಆಗಿರುವ ಲೋಪವನ್ನು ಸರಿಪಡಿಸಲು ಕೆಇಎ ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಣಯ ಕೈಗೊಂಡರೆ, ವಿದ್ಯಾರ್ಥಿಗಳ ಕನಸು ಕೈಗೂಡಲಿದೆ. ಒಂದು ವೇಳೆ ಸರ್ಕಾರ ಪುನರಾವರ್ತಿತ ವಿದ್ಯಾರ್ಥಿಗಳ ಬಗ್ಗೆ ಚಿಂತಸದಿದ್ದರೆ, ವಿದ್ಯಾರ್ಥಿಗಳು ಮಾಡದ ತಪ್ಪಿಗೆ ಸರ್ಕಾರವೇ ಅವರಿಗೆ ಶಿಕ್ಷೆ ನೀಡಿದಂತಾಗುತ್ತದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪುನರಾವರ್ತಿತ ವಿದ್ಯಾರ್ಥಿಗಳ ವಿಚಾರದಲ್ಲಿ ಸಿಇಟಿ ಪ್ರಕಟಣೆಯಲ್ಲಿ ನಿಖರವಾಗಿ ಮಾಹಿತಿ ನೀಡಿಲ್ಲವೆಂದು ತಿಳಿದು ಬಂದಿದೆ. ಇದೇ ಅಂಶವನ್ನಿಟ್ಟುಕೊಂಡು ವಿದ್ಯಾರ್ಥಿಗಳು ನ್ಯಾಯಾಲಯದ ಮೊರೆ ಹೋದರೂ ಪ್ರಕರಣ ಮತ್ತಷ್ಟು ಗೊಂದಲಕ್ಕೊಳಗಾಗುವ ಸಾಧ್ಯತೆ ಇದೆ. ಅದರ ಬದಲಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸರ್ಕಾರವೇ ಸೂಕ್ತ ನಿರ್ಧಾರ ಕೈಗೊಳ್ಳುವುದು ಉತ್ತಮ.