Advertisement

ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮನವಿ

06:01 PM Mar 15, 2022 | Vishnudas Patil |

ಶಿವಮೊಗ್ಗ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ತಕ್ಷಣವೇ ನಿವಾರಿಸಬೇಕೆಂದು ಆಗ್ರಹಿಸಿ ಮಾಜಿ ಮೇಯರ್‌ ನಾಗರಾಜ್‌ ಕಂಕಾರಿ ಅವರ ನೇತೃತ್ವದಲ್ಲಿ ಪಾಲಿಕೆ ಎದುರು ಜೆಡಿಎಸ್‌ ವತಿಯಿಂದ ಪ್ರತಿಭಟನೆ ನಡೆಸಿ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

Advertisement

ತುಂಗಾ ನದಿ ದಂಡೆಯಲ್ಲಿಯೇ ಶಿವಮೊಗ್ಗ ನಗರವಿದೆ. ನದಿಯಲ್ಲಿ ನೀರಿದ್ದರೂ, ನಲ್ಲಿಯಲ್ಲಿ ನೀರಿಲ್ಲ. ಕುಡಿಯುವ ನೀರಿಗೆ ಎಲ್ಲಾ ಕಡೆ ಹಾಹಾಕಾರ ಎದ್ದಿದೆ. ಸಾರ್ವಜನಿಕರಿಗೆ ನೀರು ಕೊಡುವಲ್ಲಿ ಪಾಲಿಕೆ ಸಂಪೂರ್ಣ ವಿಫಲವಾಗಿದೆ. ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ. ಅವರ ಬೇಜವಬ್ಧರಿಯಿಂದಲೇ ಕುಡಿಯುವ ನೀರಿನ ಸಮಸ್ಯೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬೇಸಿಗೆ ಹತ್ತಿರವಾಗಿದೆ. ಈಗಲೇ ಇಂತಹ ಸ್ಥಿತಿ ಇದೆ. ಮುಂದಿನ ದಿನಗಳಲ್ಲಿ ಇನ್ನೆಷ್ಟು ಪರದಾಡಬೇಕೋ ಗೊತ್ತಿಲ್ಲ. ಆದ್ದರಿಂದ ಪಾಲಿಕೆ ಆಯುಕ್ತರು ವಾಟರ್‌ ಬೋರ್ಡ್‌ ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಕಳೆದ ಮೂರು ವರ್ಷಗಳಿಂದ ಕುಡಿಯುವ ನೀರನ್ನು ನಿರಂತರವಾಗಿ ಬಿಡುತ್ತೇವೆ ಎಂದು ಸುಳ್ಳು ಭರವಸೆಯನ್ನು ನೀಡುತ್ತಾ ಬಂದಿದೆ ಈಗಿನ ಪಾಲಿಕೆ ಆಡಳಿತ. ಈಗಲಾದರೂ ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಸಬೇಕು. ಇಲ್ಲದಿದ್ದರೆ ಪಕ್ಷದ ವತಿಯಿಂದ ಬೃಹತ್‌ ಪಾದಯಾತ್ರೆ ಮೂಲಕ ಖಾಲಿ ಕೊಡದೊಂದಿಗೆ ಪಾಲಿಕೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಲಾಯಿತು.

ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಎಚ್‌. ಪಾಲಾಕ್ಷಿ, ನರಸಿಂಹ ಗಂಧದಮನೆ, ಶ್ಯಾಮ್‌, ಪುರುಷೋತ್ತಮ್‌, ಸೈಯದ್‌ ನೂರುಲ್ಲಾ, ವಿನಯ್‌ ಪರಶುರಾಮ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next