Advertisement

Bidar; ಗುತ್ತಿಗೆದಾರ ಸಚಿನ್‌ ಮನೆಗೆ ಭೇಟಿ ನೀಡಿದ ಸಚಿವ ಈಶ್ವರ ಖಂಡ್ರೆ

02:54 PM Dec 29, 2024 | Team Udayavani |

ಬೀದರ್: ಟೆಂಡರ್ ವಂಚನೆ‌ ಮತ್ತು ಕೊಲೆ ಬೆದರಿಕೆಯಿಂದ‌ ಮನನೊಂದು‌ ಆತ್ಮಹತ್ಯೆ ಮಾಡಿಕೊಂಡಿರುವ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಅವರ ಭಾಲ್ಕಿ ತಾಲೂಕಿನ ಕಟ್ಟಿತುಗಾಂವ್ ಗ್ರಾಮದ ಮನೆಗೆ ರವಿವಾರ (ಡಿ.29) ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿ ಸಾಂತ್ವನ ಹೇಳಿದರು.

Advertisement

ಟೆಂಡರ್ ಕೊಡಿಸುವುದಾಗಿ ಕಲ್ಬುರ್ಗಿಯ ಕಾಂಗ್ರೆಸ್ ಮುಖಂಡ, ಸಚಿವ ಪ್ರಿಯಾಂಕ್ ಖರ್ಗೆ ಅಪ್ತ ರಾಜು ಕಪನೂರ್ ಮತ್ತು ಗ್ಯಾಂಗ್ ಲಕ್ಷಾಂತರ ರೂಪಾಯಿ ವಂಚಿಸಿದ್ದಲ್ಲದೇ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪತ್ರ ಬರೆದಿಟ್ಟು ಆರೋಪಿಸಿ ಇತ್ತಿಚೆಗೆ ರೈಲ್ವೆ ಹಳಿಗೆ‌ ಕೊರಳೊಡ್ಡಿ ಅತ್ಯಹತ್ಯೆ ಮಾಡಿಕೊಂಡಿದ್ದರು.

ರವಿವಾರ ಜಿಲ್ಲಾಡಳಿತದ‌ ಜತೆಗೆ ಸಚಿನ್‌ ಸ್ವಗ್ರಾಮದ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು.‌ ಸಚಿನ್ ಪಾಂಚಾಳ ಅಸಹಜ ಸಾವಿನ ಬಗ್ಗೆ ಸಂತಾಪ ಸೂಚಿಸಿ, ಈ ನೋವಿನ ಸಂದರ್ಭದಲ್ಲಿ ಮೃತರ ಕುಟುಂಬದೊಂದಿಗೆ ತಾವೂ ಹಾಗೂ ಸರ್ಕಾರ ನಿಲ್ಲುತ್ತದೆ ಎಂದು ಹೇಳಿದರು

ಸಚಿನ್‌ ಆತ್ಮಹತ್ಯೆ ಪ್ರಕರಣದ‌ ಉನ್ನತ ಮಟ್ಟದ ತನಿಖೆ ಆಗಬೇಕೆಂದು ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಒತ್ತಾಯಿಸಲಾಗುವುದು ಎಂದು ಹೇಳಿದ ಸಚಿವ ಖಂಡ್ರೆ, ಸಚಿನ್ ನಾಪತ್ತೆ ಕುರಿತು‌ ಪ್ರಕರಣ ದಾಖಲಿಸದೆ ನಿರ್ಲಕ್ಷ, ಕರ್ತವ್ಯ ಲೋಪ ತೋರಿದ ಇಬ್ಬರು ಪೊಲೀಸ್ ಪೇದೆಗಳನ್ನು ಈಗಾಗಲೇ ಅಮಾನತ್ ಮಾಡಲಾಗಿದೆ ಎಂದು ಹೇಳಿದರು.

Advertisement

ಸಚಿನ್‌ ಕುಟುಂಬಕ್ಕೆ ಸರ್ಕಾರ ಮತ್ತು ವೈಯಕ್ತಿಕವಾಗಿ 10 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಘೋಷಿಸಿದರು.

ಉಸ್ತುವಾರಿ ಸಚಿವರ ಜತೆಗೆ ಆಗಮಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಮತ್ತು ಅಧಿಕಾರಿಗಳನ್ನು ಮನೆ ಒಳಗೆ ಪ್ರವೇಶಿಸದಂತೆ ಸಚಿನ್ ಕುಟುಂಬಸ್ಥರು ಅಕ್ರೋಶ್ ವ್ಯಕ್ತಪಡಿಸಿದರು.‌ ಒಂದು ವೇಳೆ‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರೆ, ನಮ್ಮ ಸಹೋದರನ ಪ್ರಾಣ ಉಳಿಯುತ್ತಿತ್ತು ಎಂದು ಕಿಡಿಕಾರಿದರು. ಹೀಗಾಗಿ ಸಚಿವರು ಪೊಲೀಸ್ ಅಧಿಕಾರಿಗಳನ್ನು ಹೊರಗೆ ಹೋಗುವಂತೆ ತಿಳಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next