ಹುಬ್ಬಳ್ಳಿ: ಸ್ಮಾರ್ಟ್‌ಸಿಟಿ ಯೋಜನೆಯ ಸೋಲಾರ್ ಯೋಜನೆಗಿದ್ದ ತೊಡಕು ನಿವಾರಣೆಯಾಗಿದೆ. ಐದನೇ ಬಾರಿಗೆ ಕರೆದಿರುವ ಟೆಂಡರ್ ಬಹುತೇಕ ಪೂರ್ಣಗೊಳ್ಳುವ ಭರವಸೆ ಮೂಡಿದ್ದು, ಮಹಾನಗರ ಪಾಲಿಕೆ ಒಡೆತನದ ಪ್ರಮುಖ ಕಟ್ಟಡಗಳ ಮೇಲೆ ಸೋಲಾರ್ ಪ್ಯಾನಲ್ ಅಳವಡಿಕೆ ಕಾರ್ಯ ಆರಂಭಗೊಳ್ಳುವ ವಿಶ್ವಾಸ ಮೂಡಿಸಿದೆ.
ಆಯ್ದ ಸರಕಾರಿ ಕಟ್ಟಡಗಳ ಮೇಲೆ ಸೋಲಾರ್ ಪ್ಯಾನಲ್ ಅಳವಡಿಕೆಗೆ ಯೋಜನೆ ರೂಪಿಸಲಾಗಿದೆ. ಖಾಸಗಿ ಸಹಭಾಗಿತ್ವದಡಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಒತ್ತು ನೀಡಲಾಗಿದೆ. ಆದರೆ ರಾಜ್ಯದ ಪ್ರತಿ ಯುನಿಟ್
ಖರೀದಿಯ ದರ ದೊಡ್ಡ ಕಗ್ಗಂಟಾಗಿ ಪರಿಣಿಮಿಸಿದ್ದರ ಪರಿಣಾಮ ಕಳೆದ ನಾಲ್ಕು ಬಾರಿ ಟೆಂಡರ್ ಕರೆದರೂ ಗುತ್ತಿಗೆದಾರರು ಮುಂದೆ ಬಂದಿರಲಿಲ್ಲ. ಕರ್ನಾಟಕ ಎಲೆಕ್ಟ್ರಿಕಲ್ ರೆಗ್ಯುಲೇಶನ್ ಕಾರ್ಪೊರೇಶನ್ ಪ್ರತಿ ಯುನಿಟ್ ಸೋಲಾರ್ ವಿದ್ಯುತ್‌ಗೆ 3.20 ರೂ. ನಿಗದಿ ಮಾಡಿದ್ದು, ಗುತ್ತಿಗೆದಾರರು ಕನಿಷ್ಠ 5-6 ರೂ. ನಿಗದಿಪಡಿಸಿದರೆ ಮಾತ್ರ ಸಾಧ್ಯ ಎಂದು ಪಟ್ಟು ಹಿಡಿದಿದ್ದರು.
ಕಂಪೆನಿಯಿಂದ ಭರಣ: ನಾಲ್ಕು ಬಾರಿ ಟೆಂಟರ್ ಕರೆದರೂ ಯಾವ ಗುತ್ತಿಗೆದಾರರು ಮನಸ್ಸು ಮಾಡಿರಲಿಲ್ಲ. ದರ ವ್ಯತ್ಯಾಸ ಸರಿದೂಗಿಸದಿದ್ದರೆ ಯೋಜನೆ ಸಾಕಾರಗೊಳ್ಳುವುದಿಲ್ಲ ಎಂಬುದರಿತು ರಾಜ್ಯಮಟ್ಟದಲ್ಲಿ ಕರ್ನಾಟಕ ಎಲೆಕ್ಟ್ರಿಕಲ್ ರೆಗ್ಯುಲೇಶನ್ ಕಾರ್ಪೊರೇಶನ್ ವಿಧಿಸಿರುವ ಪ್ರತಿ ಯುನಿಟ್ ದರ ಹಾಗೂ ಗುತ್ತಿದಾರರು ಬಯಸುವ ದರದಲ್ಲಿ ವ್ಯತ್ಯಾಸವನ್ನು ಸ್ಮಾರ್ಟ್‌ಸಿಟಿ ಕಂಪೆನಿ ಭರಿಸುವ ಆಧಾರದಲ್ಲಿ ಒಪ್ಪಿಗೆ ನೀಡಿದೆ. ನಿರ್ವಹಣಾ ಅವಧಿಯಲ್ಲಿ ಕೂಡ ಒಂದಿಷ್ಟು ಮಾರ್ಪಾಡು ಮಾಡಿ ಟೆಂಡರ್ ಮಾದರಿ ಬದಲಿಸಿ ಟೆಂಡರ್ ಕರೆದಿರುವುದರಿಂದ ಈ ಬಾರಿ ಗುತ್ತಿಗೆದಾರರು ಪಾಲ್ಗೊಳ್ಳುವ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಮೂರು ಪ್ರತಿಷ್ಠಿತ ಗುತ್ತಿಗೆದಾರರು ಈ ಕುರಿತು ವಿಚಾರಣೆ ಮಾಡಿದ್ದಾರೆ. ಜೂ.30 ರೊಳಗೆ ಟೆಂಡರ್ ಪ್ರಕ್ರಿಯೆ ಬಹುತೇಕ ಪೂರ್ಣಗೊಳ್ಳಲಿದ್ದು, ಪಾಲಿಕೆ ಕಟ್ಟಡಗಳ ಮೇಲೆ ಸೋಲಾರ್ ಪ್ಯಾನಲ್ ಅಳವಡಿಕೆ ಆರಂಭವಾಗಲಿದೆ ಎನ್ನುವ ವಿಶ್ವಾಸ ಸ್ಮಾರ್ಟ್‌ಸಿಟಿ ಯೋಜನೆ ಅಧಿಕಾರಿಗಳಲ್ಲಿದೆ.
ಟೆಂಡರ್ ಮಾದರಿಯಲ್ಲಿ ಮಾತ್ರ ಮಾರ್ಪಾಡಾಗಿದ್ದು, ಸೋಲಾರ್ ಪ್ಯಾನೆಲ್ ಅಳವಡಿಸಲು ಆಯ್ಕೆ ಮಾಡಿದ ಕಟ್ಟಡಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹಿಂದೆ ನಿರ್ಧರಿಸಿದಂತೆ ಪಾಲಿಕೆ ಒಡೆತನದಲ್ಲಿರುವ 180 ಕಟ್ಟಡಗಳ ಪೈಕಿ ಉತ್ತಮ ಹಾಗೂ ಹೆಚ್ಚು ವಿದ್ಯುತ್ ಬಳಸುವ 11 ಕಟ್ಟಡಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದೆ. ಮುಂದೆ ಎಲ್ಲಾ ಸರಕಾರಿ ಕಚೇರಿಗಳ ಕಟ್ಟಡಗಳ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸಿ ವಿದ್ಯುತ್ ಸ್ವಾವಲಂಬಿ ಕಚೇರಿಗಳನ್ನಾಗಿ ಮಾಡುವ ಉದ್ದೇಶವಿದೆ.
ಐದು ಕೋಟಿ ಯೋಜನೆ : 11 ಕಟ್ಟಡಗಳು ಸೋಲಾರ್ ವಿದ್ಯುತ್ ಹೊಂದಲಿದ್ದು, ಒಟ್ಟು 340 ಕಿಲೋವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ. ಇದೀಗ ಮಹಾನಗರ ಪಾಲಿಕೆ ವಾಣಿಜ್ಯ ದರದಲ್ಲಿ ಹೆಸ್ಕಾಂಗೆ ವಿದ್ಯುತ್ ಬಳಕೆ ಪಾವತಿ ಮಾಡುತ್ತಿದ್ದು, ಸೋಲಾರ್ ವಿದ್ಯುತ್ ಪಡೆಯುವುದರಿಂದ ಖರ್ಚು ಕೂಡ ಕಡಿಮೆ ಆಗಲಿದೆ ಎನ್ನುವ ಅಭಿ ಪ್ರಾಯ ಅಧಿಕಾರಿಗಳಲ್ಲಿದೆ. ಸೋಲಾರ್ ಪ್ಯಾನಲ್ ಅವಳಡಿಕೆಗೆ ನೆಹರು ಮೈದಾನದ ಕಟ್ಟಡದ ತಾರಸಿ ಅಷ್ಟೊಂದು ಸಾಮರ್ಥ್ಯ ಹೊಂದಿಲ್ಲ ಎನ್ನುವ ಕಾರಣಕ್ಕೆ ಇದನ್ನು ಕೈಬಿಡಲಾಗಿದೆ.
ಎಲ್ಲೆಲ್ಲಿ ಎಷ್ಟು ಉತ್ಪಾದನೆ? : ಕರ್ನಾಟಕ ಒನ್ ಕೇಂದ್ರ-3 ಕಿಲೋ ವ್ಯಾಟ್, ಹಳೇ ಹುಬ್ಬಳ್ಳಿ ವಾಣಿಜ್ಯ ಕಟ್ಟಡ-3 ಕಿವ್ಯಾ, ಟೌನ್ ಹಾಲ್ -4.21 ಕಿವ್ಯಾ, ಈಜುಕೊಳ ಧಾರವಾಡ-10 ಕಿವ್ಯಾ, 4ನೇ ವಲಯ ಕಚೇರಿ-10 ಕಿವ್ಯಾ, ಪಾಲಿಕೆ ಕೇಂದ್ರ ಕಚೇರಿ-25 ಕಿವ್ಯಾ, ಗಾಜಿನಮನೆ-25 ಕಿವ್ಯಾ, ಚಿಟಗುಪ್ಪಿ ಆಸ್ಪತ್ರೆ(ಹೊಸ ಕಟ್ಟಡ)-35 ಕಿವ್ಯಾ, ಕನ್ನಡ ಭವನ-45 ಕಿವ್ಯಾ, ಕಲಾಭವನ ಧಾರವಾಡ-80 ಕಿವ್ಯಾ, ಸಾಂಸ್ಕೃತಿಕ ಭವನ-100 ಕಿವ್ಯಾ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ. ಗುತ್ತಿಗೆದಾರರು ಇವುಗಳ ನಿರ್ವಹಣೆ ಹೊಣೆ ಹೊಂದಿದ್ದು, 10-25 ವರ್ಷಗಳ ಅವಧಿ ನಿಗದಿ ಮಾಡಲಾಗಿದೆ.
ಪ್ರತಿ ಯುನಿಟ್ ಸೋಲಾರ್ ವಿದ್ಯುತ್‌ಗೆ ನಿಗದಿಪಡಿಸಿದ ದರದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ಬಾರಿ ಟೆಂಡರ್ ಕರೆದರೂ ಗುತ್ತಿಗೆದಾರರು ಪಾಲ್ಗೊಂಡಿರಲಿಲ್ಲ. ಇದೀಗ ವ್ಯತ್ಯಾಸದ ಹಣವನ್ನು ಸ್ಮಾರ್ಟ್‌ಸಿಟಿ ಕಂಪನಿ ಪಾವತಿ ಮಾಡುವುದು ಸೇರಿದಂತೆ ಮಾದರಿ ಬದಲಿಸಿ ಟೆಂಡರ್ ಕರೆಯಲಾಗಿದೆ. ಈಗಾಗಲೇ ಮೂವರು ಗುತ್ತಿಗೆದಾರರು ವಿಚಾರಣೆ ಮಾಡಿದ್ದು, ಈ ಬಾರಿ ಯೋಜನೆ ಅನುಷ್ಠಾನಗೊಳ್ಳುವ ಭರವಸೆಯಿದೆ.
-ಎಸ್.ಎಚ್. ನರೇಗಲ್ಲ, ವಿಶೇಷಾಧಿಕಾರಿ, ಸ್ಮಾರ್ಟ್‌ಸಿಟಿ ಯೋಜನೆ
-ಹೇಮರಡ್ಡಿ ಸೈದಾಪುರ