ಭಟ್ಕಳ: ಇಲ್ಲಿನ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ನವಾಯತ ಕಾಲೋನಿಯ ಉಸ್ಮಾನಿಯ
ಮಸೀದಿ ಹತ್ತಿರ ಹಾಗೂ ಕಾರಗದ್ದೆ ಮಜರೆಯಲ್ಲಿ ಕುಡಿಯುವ ನೀರಿನ ಪೈಪ್‌ನಲ್ಲಿ ಕೆಂಪು ನೀರು ಬರುತ್ತಿದ್ದು, ಸ್ನಾನಕ್ಕೂ ಅಯೋಗ್ಯವಾಗಿದೆ.
ವಾರದಲ್ಲಿ ಎರಡು ಮೂರು ಬಾರಿ ಕೆಸರು ಮಿಶ್ರಿತ ನೀರು ಸರಬರಾಜಾಗುತ್ತಿದೆ. ಇದರಿಂದ ನೀರಿನ ಟ್ಯಾಂಕ್‌ನಿಂದ ಹಿಡಿದು ನೀರು ಸರಬರಾಜಾಗುವ ಎಲ್ಲ ಪೈಪ್‌ಗಳು, ನಳ ಸಹಿತ ಕೆಸರಿನಿಂದ ತುಂಬಿಕೊಂಡು ಸ್ವಚ್ಛವಾಗಲು ಮತ್ತೆ 3-4 ದಿನಗಳು ಬೇಕಾಗುತ್ತವೆ.
ಪುರಸಭೆ ಸರಿಯಾಗಿ ನೀರಿನ ಶುಲ್ಕ ವಸೂಲಿ ಮಾಡುತ್ತಿದ್ದು, ಶುದ್ಧ ಕುಡಿಯುವ ನೀರು ಮಾತ್ರ ಸರಿಯಾಗಿ ಸರಬರಾಜು ಮಾಡುತ್ತಿಲ್ಲ. ವಾರದ ಎರಡು-ಮೂರು ದಿನ ಪುರಸಭೆ ನೀರು ಕೆಸರು ಹಾಗೂ ಪಾಚಿ ರೂಪದಲ್ಲಿ ಬರುತ್ತಿದೆ. ಇದಕ್ಕೆ ಕಾರಣ ಏನೆಂಬುದು ತಿಳಿಯುತ್ತಿಲ್ಲ ಎನ್ನುತಾರೆ ಸ್ಥಳೀಯ ನಿವಾಸಿ ಅಬ್ಬುಬಕ್ಕರ್ ಮಾಲಿಕಿ.
ನೀರು ಕುಡಿಯುವುದು ಬಿಡೀ, ಬಟ್ಟೆ ಒಗೆಯಲು, ಸ್ನಾನ್ಕಕೆ ಸಹ ಯೋಗ್ಯವಲ್ಲದ ರೂಪದಲ್ಲಿದ್ದು, ಕುಡಿಯುವ ನೀರಿಗಾಗಿ ಪರದಾಡಬೇಕಿದೆ ಎಂದು ದೂರುತ್ತಿದ್ದಾರೆ. ಜಾಲಿ ಪಪಂ ವ್ಯಾಪ್ತಿಯಲ್ಲಿಯ ಕಾರಗದ್ದೆ 2ನೇ ಕ್ರಾಸ್‌ನಲ್ಲಿರುವ ಹಲವು ಮನೆಗಳಿಗೆ ಕಳೆದ ಕೆಲ ದಿನದಿಂದ ಕೆಸರು ಮಿಶ್ರಿತ ಕುಡಿಯುವ ನೀರು ಸರಬರಾಜಾಗುತ್ತಿವೆ. ಈ ಕುರಿತು ನಿವಾಸಿಗರು ಪಪಂ ವಾರ್ಡ್ ಸದಸ್ಯರ ಹಾಗೂ ಪಪಂ ಗಮನಕ್ಕೆ ತಂದಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪುರಸಭೆ ವ್ಯಾಪ್ತಿಯ ನವಾಯತ ಕಾಲೋನಿಯ ಉಸ್ಮಾನಿಯ ಮಸೀದಿ ಹತ್ತಿರವೂ ಇದೇ ಸಮಸ್ಯೆ ಇದೆ. ಜಾಲಿ ಪಪಂ ಹಾಗೂ ಪುರಸಭೆ ವ್ಯಾಪ್ತಿಯ ಮನೆಗಳಿಗೆ ಬಿಡಲಾಗುವ ನೀರು ಕಡವಿನಕಟ್ಟೆ ಡ್ಯಾಂನಿಂದ ನೇರವಾಗಿ ಸರಬರಾಜಾಗುತ್ತಿದ್ದು, ನೀರನ್ನು ಶುದ್ಧಿಕರಿಸದೇ ನೇರ ಮನೆಗಳಿಗೆ ಬಿಡುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಶುದ್ಧ ನೀರು ಪೂರೈಸುವಂತೆ ಜನ ಒತ್ತಾಯಿಸಿದ್ದಾರೆ.
ಸದ್ಯ ನೀರಿನ ಪೈಪ್ ಕೆಲವೊಂದು ಕಡೆ ಒಡೆದಿದ್ದು, ರಿಪೇರಿ ಕಾರ್ಯ ನಡೆಯುತ್ತಿದೆ. ಈ ವೇಳೆ ಸರಿಪಡಿಸಿದ ಪೈಪ್‌ನಲ್ಲಿ ಮಣ್ಣು ಸೇರಿ ನೀರು ಬರುವ ಸಾಧ್ಯಗಳಿವೆ. ಮಳೆ ಜೋರಾಗಿರುವ ಹಿನ್ನೆಲೆಯಲ್ಲೂ ಮಳೆ ನೀರಿನ ಜೊತೆಗೆ ಕುಡಿಯುವ ನೀರು ಸೇರಿರಬಹುದು. ಕುಡಿಯುವ ನೀರಿನ ಶುದ್ಧೀಕರಣ ಕಾರ್ಯವೂ ಪ್ರಗತಿಯಲ್ಲಿದೆ. ಕೆಲ ದಿನದಲ್ಲಿ ಎಲ್ಲ ಸಮಸ್ಯೆ ಬಗೆಹರಿಯಲಿದೆ.
ಮುಹಮ್ಮದ್ ಸಾಧಿಕ್ ಮಟ್ಟಾ, ಭಟ್ಕಳ ಪುರಸಭಾ ಅಧ್ಯಕ್ಷ
ಪಪಂನಿಂದ ಸರಬರಾಜಾಗುತ್ತಿರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಪ್ರತಿನಿತ್ಯ ಕೆಸರು ಹಾಗೂ ಪಾಚಿ ಮಿಶ್ರಿತವಾಗಿ ಇರುತ್ತಿದೆ.
ಇರ್ಷಾದ್ ಹಸನ್ ಜುಪಾಪು
ಕಾರಗದ್ದೆ ನಿವಾಸಿ