ಮಾಗಡಿ: ಮಣ್ಣು ಅತ್ಯಂತ ಮಹತ್ವದ ನೈಸರ್ಗಿಕ ಸಂಪನ್ಮೂಲವಾಗಿದೆ. ಫಲವತ್ತಾದ ಮಣ್ಣು ಸಸ್ಯಗಳಿಗೆ ಎಲ್ಲ ಪೋಷಕಾಂಶ ಪೂರೈಸಬಲ್ಲದು. ಮಣ್ಣಿನ ಪರೀಕ್ಷೆ ಆಧರಿಸಿ, ರಸ ಗೊಬ್ಬರ ಬಳಸಿದಾಗ ಕೃಷಿ ಉತ್ಪಾದನೆ ಹೆಚ್ಚಿಸಬಹುದು ಎಂದು ಕೆವಿಕೆ ಕೇಂದ್ರದ ಮಣ್ಣು ವಿಜ್ಞಾನಿ ಪ್ರೀತು ತಿಳಿಸಿದರು.
ತಾಲೂಕಿನ ಚಂದುರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಿಂದ ಮಾಗಡಿ ತಾಲೂಕಿನ ಕಳಾರಿ ಗ್ರಾಮದಲ್ಲಿ ಮಣ್ಣಿನ ಆರೋಗ್ಯ ಮತ್ತು ಫಲವತ್ತತೆ ನಿರ್ವಹಣೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕೇಂದ್ರ ವಿಜ್ಞಾನಿ ಪ್ರೀತು ಡೀಸಿ ಮುಂದಾಳತ್ವದಲ್ಲಿ ಏರ್ಪಡಿಸಿದ್ದ ಮಣ್ಣು ಆರೋಗ್ಯ ಅಭಿಯಾನ ಕಾರ್ಯಕ್ರಮದಲ್ಲಿ ಮಣ್ಣಿನ ಪರೀಕ್ಷೆಯ ಉದ್ದೇಶ ಮತ್ತು ಮಹತ್ವದ ಬಗ್ಗೆ ತಿಳಿಸಿದರು.
ಕಾಳಾರಿ ಗ್ರಾಪಂ ಅಧ್ಯಕ್ಷ ಮೋಹನ್ ಕುಮಾರ, ತಾಕುವಿನಲ್ಲಿ ಮಣ್ಣು ಮಾದರಿ ಸಂಗ್ರಹಿಸುವ ಪ್ರಾತ್ಯಕ್ಷಿಕೆ ತೋರಿಸಿ ವಿವರಿಸಿದರು. ಪ್ರದೇಶ ಪ್ರತಿನಿಧಿಸುವ ಮಾದರಿ ಮಣ್ಣನ್ನು ಸಂಗ್ರಹಿಸಬೇಕಾಗುತ್ತದೆ. ಸಾಮಾನ್ಯವಾಗಿ ಮಣ್ಣು ಪರೀಕ್ಷೆಗೆ ಬೆಳೆಯನ್ನು ಬಿತ್ತುವ ಒಂದು ತಿಂಗಳು ಮೊದಲೇ ಮಣ್ಣು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಇದರಿಂದ ಮುಂದೆ ಬೆಳೆಯಬೇಕಾದ ಸೂಕ್ತ ಬೆಳೆ ಹಾಗೂ ಉಪಯೋಗಿಸಬೇಕಾದ ಸೂಕ್ತ ಗೊಬ್ಬರಗಳ ಪ್ರಮಾಣ ತಿಳಿಯಬಹುದು ಎಂದರು.
ಕಾಳಾರಿಯು ರೈತರಿಗೆ ಭಾರತಿಯ ತೋಟಗಾರಿಕೆ ಸಂಶೋಧನೆ ಸಂಸ್ಥೆ, ಹೆಸರಘಟ್ಟದಲ್ಲಿ ಬಿಡುಗಡೆಯಾದ ಚೀನಾ ಆ್ಯಸ್ಟರ್ ಹೂವಿನ ತಳಿ ಬೆಳೆಯುವಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಮಂಚೂಣಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲು ವಿತರಿಸಲಾಯಿತು. ಅಡಿಕೆ ಬೆಳೆಯುವ ರೈತರಿಗೆ ಅಡಿಕೆಯಲ್ಲಿ ಬೇವಿನ ಹಿಂಡಿ ಬಳಕೆ ಮಹತ್ವದ ಬಗ್ಗೆ ತಿಳಿಸಿ, ರೈತರಿಗೆ ಬೇವಿನ ಹಿಂಡಿ ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷ ಮೋಹನ್ ಕುಮಾರ್ ಮತ್ತು ಗ್ರಾಮದ ರೈತರು ಉಪಸ್ಥಿತರಿದ್ದರು.