ಮಾನ್ವಿ: ಇಲ್ಲಿನ ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ಪರಿಚಾರಕ (ಅಟೆಂಡರ್) ಬಿಟ್ಟರೆ ಉಳಿದ ಹುದ್ದೆಗಳೆಲ್ಲ ಖಾಲಿ ಇವೆ. ನಿಯೋಜನೆಗೊಂಡ ಪ್ರಭಾರ ಅಧಿಕಾರಿಗಳು ಬರುವುದು ಅಪರೂಪ. ಹೀಗಾಗಿ ಇಲಾಖೆ ವ್ಯಾಪ್ತಿಯಲ್ಲಿನ ವಸತಿ ನಿಲಯಗಳ ವಿದ್ಯಾರ್ಥಿಗಳ ಗೋಳು ಕೇಳ್ಳೋರಿಲ್ಲದಂತಾಗಿದೆ.
ಹುದ್ದೆ ಖಾಲಿ: ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಟೆಂಡರ್ ಒಬ್ಬರೇ ಇದ್ದಾರೆ. ತಾಲೂಕು ಅಧಿಕಾರಿ, ವ್ಯವಸ್ಥಾಪಕ ಎಸ್‌ಡಿಎ. ಎಫ್‌ಡಿಎ, ಬೆರಳಚ್ಚುಗಾರರು, ಕಂಪ್ಯೂಟರ್ ನಿರ್ವಾಹಕ ಹುದ್ದೆಗಳು ಖಾಲಿ ಇವೆ. ಇಲಾಖೆ ವ್ಯಾಪ್ತಿಯಲ್ಲಿ 11 ವಸತಿ ನಿಲಯಗಳಿದ್ದು, 1,359 ವಿದ್ಯಾರ್ಥಿಗಳಿದ್ದಾರೆ. ಬೇರೆ ತಾಲೂಕು ಅಧಿಕಾರಿಗಳನ್ನು ಇಲ್ಲಿಗೆ ಪ್ರಭಾರಿಯಾಗಿ ನೇಮಕ ಮಾಡಲಾಗಿದೆ. ಆದರೆ ಅಧಿಕಾರಿಗಳು ಕಚೇರಿಗೆ ಬರುವುದೇ ಅಪರೂಪ. ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಡಿ ಇಬ್ಬರೂ ಗಣಕಯಂತ್ರ ನಿರ್ವಾಹಕರನ್ನು ನೇಮಿಸಿಕೊಳ್ಳಲಾಗಿದೆ.
ವಸತಿ ನಿಲಯಗಳಲ್ಲಿಲ್ಲ ಸೌಕರ್ಯ: ತಾಲೂಕು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ 11 ವಸತಿ ನಿಲಯಗಳಿವೆ. ಇವುಗಳಲ್ಲಿ ನೂರಾರು ಸಮಸ್ಯೆಗಳ ಮಧ್ಯೆ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಂತಾಗಿದೆ. ಸರಿಯಾಗಿ ಊಟದ ವ್ಯವಸ್ಥೆ ಇಲ್ಲ. ಮೂಲ ಸೌಕರ್ಯಗಳ ಕೊರತೆ ಇದೆ. ಶೌಚಾಲಯ, ಸ್ನಾನದ ಕೋಣೆ, ಕುಡಿಯುವ ನೀರು, ಸಾಬೂನು, ಪೇಸ್ಟ್ ಮತ್ತು ವಸತಿ ನಿಲಯಗಳಲ್ಲಿ ಸ್ವಚ್ಛತೆ ಸೇರಿ ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ. ವಸತಿ ನಿಲಯಗಳಿಗೆ ವಾರ್ಡನ್‌ಗಳು ಬರುವುದೇ ಇಲ್ಲ, ಇಂತಹ ಸಮಸ್ಯೆಗಳಿಂದಾಗಿ ವಿದ್ಯಾರ್ಥಿಗಳು ನಿತ್ಯ ಪರದಾಡುವಂತಾಗಿದೆ. ಇಲ್ಲಿನ ಸಮಸ್ಯೆ ಹೇಳಿಕೊಳ್ಳಲು ತಾಲೂಕು ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ತೆರಳಿದರೆ ಒಬ್ಬ ಅಧಿಕಾರಿಯೂ ಸಿಗುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಗೋಳು ಕೇಳ್ಳೋರೆ ಇಲ್ಲದಂತಾಗಿದೆ.
ವಾರ್ಡನ್‌ಗಳು ನಾಪತ್ತೆ: ಕೆಲ ವಸತಿ ನಿಲಯಗಳಲ್ಲಿ ಇರುವ ಕೆಲ ವಾರ್ಡನ್‌ಗಳು ವಿದ್ಯಾರ್ಥಿಗಳಿಗೆ ಸಿಗುವುದೇ ಇಲ್ಲ. ಊಟದ ಸಮಯಕ್ಕೆ ವಾರ್ಡನ್‌ಗಳು ಹಾಜರಿರುವುದಿಲ್ಲ. ಫೋನ್‌ಗಳು ಸ್ವೀಚ್ ಆಫ್ ಆಗಿರುತ್ತವೆ. ದೂರವಾಣಿ ಕರೆಗಳನ್ನು ಸ್ವೀಕರಿಸುವುದಿಲ್ಲ. ಹಾಸ್ಟೇಲ್‌ಗಳಲ್ಲಿ ಸರ್ಕಾರ ನಿಗಪಡಿಸಿದ ಆಹಾರದ ಪಟ್ಟಿಯಂತೆ ಊಟ ತಯಾರಿಸುವುದಿಲ್ಲ. ಇದನ್ನು ಪ್ರಶ್ನಿಸಬೇಕೆಂದರೆ ವಾರ್ಡನ್‌ಗಳು ನಾಪತ್ತೆ ಆಗಿರುತ್ತಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಅಡುಗೆ ಸಿಬ್ಬಂದಿಯೇ ವಾರ್ಡನ್‌ಗಳೆಂಬಂತೆ ಅಧಿಕಾರ ಚಲಾಯಿಸುತ್ತಾರೆ.
ಅನುದಾನ ದುರ್ಬಳಕೆ: ವಸತಿ ನಿಲಯಗಳ ನಿರ್ವಹಣೆ, ಕಿರಾಣಿ, ತರಕಾರಿ, ಕುಡಿಯುವ ನೀರು ಸರಬರಾಜು, ಅಡುಗೆದಾರರಿಗೆ ಸಂಬಳ ಹಾಗೂ ಗ್ಯಾಸ್ ಮತ್ತು ಕಟ್ಟಿಗೆಗೆ ಎಂದು ತಾಲೂಕ ಪಂಚಾಯತಿಯಿಂದ ಅನುದಾನ ನೀಡಲಾಗುತ್ತದೆ. ವಾರ್ಡನ್‌ಗಳು ಬೋಗಸ್ ದಾಖಲೆಗಳನ್ನು ಸೃಷ್ಠಿಸಿ ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ತನಿಖೆಗೆ ಹಿಂದೇಟು: ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅವ್ಯವಸ್ಥೆಗೆ ಮೇಲಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಇಲಾಖೆ ಬಗ್ಗೆ ಅನೇಕರು ಮೌಖೀಕವಾಗಿ ಮತ್ತು ದಾಖಲೆಗಳ ಮೂಲಕ ದೂರು ನೀಡಿದ್ದರೂ ಕ್ರಮ ಜರುಗಿಸಲು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಅನುದಾನ ಬಳಕೆ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಕಚೇರಿಯಲ್ಲಿ ದಾಖಲೆಗಳೆ ಇಲ್ಲ. ನಾಲ್ಕು ಹಾಸ್ಟೇಲ್‌ಗಳಿಗೆ ಪ್ರಭಾರಿ ವಾರ್ಡನ್ ಆಗಿರುವ ಶರಣಬಸವ ವಿರುದ್ಧ ಇಲಾಖೆ ಜಿಲ್ಲಾಧಿಕಾರಿ ಪ್ರಶಾಂತ ಅವರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತಾಲೂಕಿನ ದಲಿತ ಹೋರಾಟಗಾರ ಬಸವರಾಜ ನಕ್ಕುಂದಿ ಆರೋಪಿಸಿದ್ದಾರೆ.
ಒಟ್ಟಾರೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಮಸ್ಯೆಗಳ ತಾಣವಾಗಿದೆ. ಸರ್ಕಾರ ಶೈಕ್ಷಣಿಕ ಅಭಿವೃದ್ಧಿಗೆ ಕೋಟ್ಯಂತರ ಹಣ ಖರ್ಚು ಮಾಡುತ್ತಿದ್ದರೂ ಅಧಿಕಾರಿಗಳ ಭ್ರಷ್ಟಾಚಾರ, ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳಿಗೆ ಸೌಲಭ್ಯ ದಕ್ಕುತ್ತಿಲ್ಲ. ಇನ್ನಾದರೂ ಮೇಲಾಧಿಕಾರಿಗಳು ವಸತಿ ನಿಲಯಗಳ ಕಡೆ ಗಮನ ಹರಿಸಬೇಕು. ಅನುದಾನ ದುರ್ಬಳಕೆ ಬಗ್ಗೆ ತನಿಖೆ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.