ಬೆಳ್ಮಣ್: ಲಾಕ್ ಡೌನ್ ಹಿನ್ನೆಲೆಯಲ್ಲಿ ದಿನಬಳಕೆಯ ಸಾಮಗ್ರಿಗಳ ಅಂಗಡಿ, ಮೆಡಿಕಲ್ ಸ್ಟೋರ್ ಹಾಗೂ ಹಾಲಿನ ಅಂಗಡಿ ಮಾತ್ರ ತೆರೆದುಕೊಳ್ಳಲು ಅವಕಾಶವಿದ್ದರೂ ಬೆಳ್ಮಣ್‌ನಲ್ಲಿ ವಾಹನದಲ್ಲಿ ವ್ಯಾಪಾರ ನಡೆಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಜನ ಸಾಮಾಜಿಕ ಅಂತರ ಕಾಯುವಲ್ಲಿ ವಿಫಲರಾಗಿದ್ದಾರೆ.
ಇಲ್ಲಿನ ಬಸ್ಸು ನಿಲ್ದಾಣ ಬಸ್ಸುಗಳು ಇಲ್ಲದೆ ಬಿಕೋ ಎನ್ನುತ್ತಿದ್ದರೆ ಇದೀಗ ಬಸ್ಸು ನಿಲ್ದಾಣ ದಲ್ಲಿ ಮೀನು, ತರಕಾರಿ, ಹಣ್ಣು ಹಂಪಲುಗಳ ಮಾರಾಟದ ವಾಹನಗಳು ತುಂಬಿ ಹೋಗಿವೆ. ಬೆಳಗ್ಗೆ 11 ಗಂಟೆಯ ವರೆಗೆ ವಾಹನಗಳ ಮೂಲಕ ಜನ ವ್ಯಾಪಾರ ನಡೆಸುತ್ತಿದ್ದು ಜನ ಕಡಿಮೆ ಬೆಲೆಗೆ ಸಿಗುವ ಹಣ್ಣು ಹಂಪಲು ಖರೀದಿಸಲು ಮುಗಿಬೀಳುತ್ತಾ ಬಹಳಷ್ಟು ರಶ್ ಮಾಡುತ್ತಿದ್ದಾರೆ. ಈ ಕಾರಣದಿಂದ ಜನ ಮುಗಿ ಬಿದ್ದು ಸಾಮಾಜಿಕ ಅಂತರ ಎಂಬ ಪರಿಕಲ್ಪನೆಯೇ ಮಾಯ ವಾಗಿದೆ.
ಉಡುಪಿ ಜಿಲ್ಲಾಧಿಕಾರಿಗಳ ಸತತ ಪ್ರಯತ್ನ, ಇತರ ತಾಲೂಕುಗಳ ತಹಶೀಲ್ದಾರರು, ತಾ| ಪಂ. ಕಾರ್ಯ ನಿರ್ವ ಹಣಾಧಿಕಾರಿಗಳು,ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿ ಗಳು, ವೈದ್ಯರು, ಆಶಾ ಕಾರ್ಯ ಕರ್ತೆಯರ ಸತತ ಪರಿಶ್ರಮದ ಫಲವಾಗಿ ರಾಜ್ಯದಲ್ಲಿಯೇ ಉಡುಪಿ ಜಿಲ್ಲೆ ಕೊರೊನಾ ಮುಕ್ತ ಜಿಲ್ಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿ ದ್ದರೂ ಇಂತಹ ನಿರ್ಲಕ್ಷé ಇಲಾಖೆ ಹಾಗೂ ಜನರ ನೆಮ್ಮದಿ ಕೆಡಿಸಿದೆ. ಜಿಲ್ಲಾಡಳಿತ ಉಡುಪಿ ಜಿಲ್ಲೆಯ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಿದ್ದರೂ ಜಿಲ್ಲೆಯ ಒಳಗಡೆ ಇಂತಹ ಪ್ರಕರಣಗಳು ನಡೆಯುತ್ತಿರುವ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಬೇಕೆಂದು ಜನ ಆಗ್ರಹಿಸಿದ್ದಾರೆ.
ಬೆಳ್ಮಣ್ ಮಾತ್ರವಲ್ಲದೆ ಮುಂಡ್ಕೂರು, ನಿಟ್ಟೆಯಂತಹ ಪೇಟೆ ಪ್ರದೇಶಗಳಲ್ಲಿ ಇಂತಹದೇ ರೀತಿಯಲ್ಲಿ ತರಕಾರಿ, ಮೀನು, ಹಣ್ಣು ಹಂಪಲು ವ್ಯಾಪಾರ ನಡೆಯುತ್ತಿದೆ ಎಂಬ ದೂರು ಬಲವಾಗಿದೆ.