Advertisement

“ನೆಹರೂ’ನಿಮಗೇಕೆ ಬೇಡ? –ಕಾಂಗ್ರೆಸ್‌ ನಾಯಕರಿಗೆ ಪ್ರಧಾನಿ ಮೋದಿ ಪ್ರಶ್ನೆ

08:35 PM Feb 09, 2023 | Team Udayavani |

ಹೊಸದಿಲ್ಲಿ: ನಿಮಗೆ ನೆಹರೂ ಬಗ್ಗೆ ಅಷ್ಟೊಂದು ಗೌರವ ಇರುವುದೇ ಹೌದಾದರೆ ನೀವ್ಯಾರೂ ನಿಮ್ಮ ಹೆಸರಿಗೆ “ನೆಹರೂ’ ಎಂಬ ಉಪನಾಮ ಏಕೆ ಸೇರಿಸಿಕೊಂಡಿಲ್ಲ?

Advertisement

– ಇದು ನಿರ್ದಿಷ್ಟವಾಗಿ ಗಾಂಧಿ ಕುಟುಂಬ ಮತ್ತು ಒಟ್ಟಾರೆಯಾಗಿ ವಿಪಕ್ಷ ಕಾಂಗ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ ಹಾಕಿರುವ ನೇರ ಪ್ರಶ್ನೆ.

ಗುರುವಾರ ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಅದಾನಿ ಸಮೂಹದ ಮೇಲಿನ ಆರೋಪಗಳಿಗೆ ಸಂಬಂಧಿಸಿ ತಮ್ಮನ್ನು ಪ್ರಶ್ನಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ವಿಪಕ್ಷಗಳ ನಾಯಕರಿಗೆ ಸದನದಲ್ಲೇ ತಿರುಗೇಟು ನೀಡಿದರು.

ನಾಚಿಕೆಯೇಕೆ?:

ಕೆಲವರಿಗೆ ಸರಕಾರದ ಯೋಜನೆಗಳ ಹೆಸರು, ಅದರಲ್ಲಿ ಇರುವ ಸಂಸ್ಕೃತ ಪದಗಳನ್ನು ಕಂಡೊಡನೆ ಸಿಟ್ಟು ಬರುತ್ತದೆ. ನಾನು ಕೇಳಿರುವ ಪ್ರಕಾರ 600ರಷ್ಟು ಸರಕಾರಿ ಯೋಜನೆಗಳು ಗಾಂಧಿ-ನೆಹರೂ ಕುಟುಂಬದ ಹೆಸರಿನಲ್ಲೇ ಇವೆ. ನಾವು ಎಲ್ಲಾದರೂ ನೆಹರೂ ಹೆಸರನ್ನು ಉಲ್ಲೇಖೀಸಲು ಮರೆತುಬಿಟ್ಟರೆ ಅವರು (ಕಾಂಗ್ರೆಸ್‌) ಕೂಡಲೇ ಬೇಸರಿಸಿಕೊಳ್ಳುತ್ತಾರೆ. ಆದರೆ ನನ್ನದೊಂದು ಪ್ರಶ್ನೆಯಿದೆ. ನೆಹರೂ ಅಷ್ಟೊಂದು ಶ್ರೇಷ್ಠ ವ್ಯಕ್ತಿಯಾಗಿದ್ದರೆ, ನಿಮಗೆ ಅವರ ಬಗ್ಗೆ ಅಷ್ಟೊಂದು ಗೌರವ ಇರುವುದೇ ಹೌದಾದರೆ ನೀವೇಕೆ ನಿಮ್ಮ ಹೆಸರಿನೊಂದಿಗೆ ನೆಹರೂ ಉಪನಾಮ ಸೇರಿಸಿಕೊಂಡಿಲ್ಲ? ಅದರಲ್ಲಿ ಭಯ ಅಥವಾ ನಾಚಿಕೆಪಡುವ ವಿಷಯವೇನಿದೆ ಎಂದು ಪ್ರಶ್ನಿಸಿದ್ದಾರೆ.

Advertisement

ಘೋಷಣೆಗಳ ಸಮರ:

ಸದನದಲ್ಲಿ ಪ್ರಧಾನಿ ಮೋದಿ ಅವರು ಮಾತನಾಡುತ್ತಿದ್ದಾಗ ಮೇಜು ಕುಟ್ಟುವ ಮೂಲಕ ಹರ್ಷ ವ್ಯಕ್ತಪಡಿಸುತ್ತಿದ್ದ ಆಡಳಿತ ಪಕ್ಷದ ಸದಸ್ಯರು, “ಮೋದಿ, ಮೋದಿ, ಮೋದಿ’ ಎಂದು ಘೋಷಣೆ ಕೂಗುತ್ತಿದ್ದರು. ಇನ್ನೊಂದೆಡೆ ಮೋದಿ ಭಾಷಣದ ನಡುವೆಯೇ ವಿಪಕ್ಷಗಳ ನಾಯಕರೆಲ್ಲರೂ “ಮೋದಿ-ಅದಾನಿ ಭಾಯಿ ಭಾಯಿ, ಅದಾನಿ ಬಗ್ಗೆ ಏನಾದರೂ ಮಾತಾಡಿ, ಅದಾನಿಯ ಗುಲಾಮಿತನಕ್ಕೆ ಅಂತ್ಯ ಹಾಡಿ’ ಎಂದು ಘೋಷಣೆ ಕೂಗುತ್ತಿದ್ದರು. ಇದರಿಂದ ಆಕ್ರೋಶಗೊಂಡ ಮೋದಿ, ಈ ಸದನದಲ್ಲಿ ಏನೇನು ಹೇಳಲಾಗುತ್ತದೆಯೋ ಅದನ್ನು ಇಡೀ ದೇಶವೇ ಆಲಿಸುತ್ತದೆ. ಕೆಲವು ಸಂಸದರು ಸದನದ ಗೌರವಕ್ಕೆ ಚ್ಯುತಿ ತರುತ್ತಿದ್ದಾರೆ ಎಂದು ಕಿಡಿಕಾರಿದರು. ಜತೆಗೆ ನೀವು ನಮ್ಮತ್ತ ಕೆಸರನ್ನು ಎಸೆದಷ್ಟೂ ಕಮಲ ಅರಳುತ್ತಲೇ ಹೋಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next