ಹುಬ್ಬಳ್ಳಿ: ನಾವೆಲ್ಲರೂ ಕೊರೊನಾದಿಂದ ಕೆಲಸ ಕಳೆದುಕೊಂಡಿದ್ದು, ಇದೀಗ ನಮ್ಮ ಧಾರ್ಮಿಕ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಿದ್ದಾರೆ. ಅದು ನಮ್ಮ ಹಕ್ಕು ಅದನ್ನು ಬಿಡಲು ಸಾಧ್ಯವಿಲ್ಲ ಎಂದು ಅಂಜುಮನ್ ಇಸ್ಲಾಂ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಕಳೆದ ಕೆಲವು ದಿನಗಳಿಂದ ರಾಜ್ಯದ ಕೆಲವು ಭಾಗದಲ್ಲಿ ಹಿಜಾಬ್ ಧಾರಣೆ ಖಂಡಿಸುತ್ತಿದ್ದು, ಜೊತೆಗೆ ಮಕ್ಕಳಿಗೆ ಶಾಲೆಗೆ ಅವಕಾಶ ನೀಡದೇ ಇರುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಶಾಲೆ-ಕಾಲೇಜುಗಳಲ್ಲಿ ಈ ಹಿಂದೆ ಎಲ್ಲಾ ವಿದ್ಯಾರ್ಥಿಗಳು ಸಾಮರಸ್ಯದಿಂದ ಜಾತ್ಯತೀತವಾಗಿ ಸಹೋದರತ್ವ ಬೆಳೆಸಿಕೊಂಡು ವಿದ್ಯಾಭ್ಯಾಸ ನಡೆಸುತ್ತಿದ್ದರು.
ಶಿಕ್ಷಣ ಸಂಸ್ಥೆಗಳಲ್ಲಿ ಇಲ್ಲಿಯವರೆಗೆ ಧಾರ್ಮಿಕ ವೈಷಮ್ಯ ಮತ್ತು ಶಾಂತಿ ಕದಡುವ, ವಿದ್ಯಾರ್ಥಿಗಳ ಮನಸ್ಸುಗಳನ್ನು ಒಡೆಯುವ, ದ್ವೇಷ ಬೀಜ ಬಿತ್ತುವ ವಿಷಯಗಳು ಕೇಳಿ ಬಂದಿರಲಿಲ್ಲ. ಇದೀಗ ಉಡುಪಿ ಜಿಲ್ಲೆ ಮತ್ತು ಕುಂದಾಪುರ ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಹಿಜಾಬ್ ಕುರಿತು ಸಮಸ್ಯೆ ಎದುರಾಗಿದ್ದು ನಮ್ಮ ಹಕ್ಕನ್ನು ಕಸಿಯುವ ಕುತಂತ್ರಗಳು ನಡೆದಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಅಂಜುಮನ್ ಇಸ್ಲಾಂ ಸಂಸ್ಥೆ ಹುಬ್ಬಳ್ಳಿಯ ಪದಾಧಿಕಾರಿಗಳು, ಶಿಕ್ಷಣ ಮಂಡಳಿ ಸದ್ಯಸರು, ಅಂಜುಮನ್ ಆಸ್ಪತ್ರೆ ಮಂಡಳಿಯ ಸದಸ್ಯರು, ಹುಬ್ಬಳ್ಳಿಯ ಎಲ್ಲಾ ಮಸೀದಿಗಳ ಮುತವಲ್ಲಿಯವರು, ಹುಬ್ಬಳ್ಳಿಯ ಅಲ್ಪಸಂಖ್ಯಾತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಎಲ್ಲರೂ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಪ್ರತಿಭಟನಾಕಾರರು ಹೇಳಿದರು.
ರಾಜ್ಯ ಸರಕಾರ ಕಾಲೇಜುಗಳಲ್ಲಿ ಸಮವಸ್ತ್ರದ ಆದೇಶ ಹೊರಸಿ ಹಿಜಾಬ್ ನಿಷೇಧಿಸಿದೆ. ಎಲ್ಲೋ ಒಂದು ಕಡೆ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ವಿದ್ಯಾಭ್ಯಾಸದಿಂದ ವಂಚಿತರನ್ನಾಗಿಸುವ ಹುನ್ನಾರ ಇದೆ ಎನ್ನಿಸುತ್ತಿದೆ. ಸರಕಾರ ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳುವ ಮೂಲಕ ನಮ್ಮ ಸಂಪ್ರದಾಯಕ್ಕೆ ಬೆಲೆ ನೀಡಬೇಕೆಂದು ಒತ್ತಾಯಿಸಿದರು.ಅಂಜುಮನ್ ಅಧ್ಯಕ್ಷ ಯೂಸುಫ್ ಸವಣೂರು, ಅಲ್ತಾಫ್ ಕಿತ್ತೂರ, ಅಲ್ತಾಫ್ ಹಳ್ಳೂರ, ಬಸೀರಅಹ್ಮದ್ ಹಳ್ಳೂರ, ಅಬ್ದುಲ್‌ವುುನಾಫ್ ಕಾಠಿಗರ, ಮಾಜಿ ಸಂಸದ ಪ್ರೊ| ಐ.ಜಿ.ಸನದಿ ಮೊದಲಾದವರಿದ್ದರು.