Advertisement

ಉಕ್ಕಿನ ಸೇತುವೆ ಹೋಯ್ತು, ಬೇರೇನಿದೆ ಮಾರ್ಗ?

12:38 PM Mar 04, 2017 | |

ತೀವ್ರ ವಿರೋಧ, ನ್ಯಾಯಾಂಗ ಹೋರಾಟ ನಡೆಯುತ್ತಿದ್ದರೂ, ಸರ್ಕಾರ ತನ್ನ ಮೇಲೆ ಬಂದ ಭ್ರಷ್ಟಾಚಾರದ ಆರೋಪಗಳಿಗೆ ಹೆದರಿ ಉಕ್ಕಿನ ಸೇತುವೆಯನ್ನು ಡಿಢೀರನೆ ಗುರುವಾರ ಕೈಬಿಟ್ಟಿದೆ. ಈ ಬೆನ್ನಲ್ಲೇ ಬಸವೇಶ್ವರ ವೃತ್ತದಿಂದ ಹೆಬ್ಟಾಳದ ವರೆಗಿನ ಟ್ರಾಫಿಕ್‌ ಸಮಸ್ಯೆಗೆ ಪರ್ಯಾಯ ಮಾರ್ಗವೇನು ಎಂಬ ಜಿಜ್ಞಾಸೆ ಸಾರ್ವಜನಿಕ ವಲಯದಲ್ಲಿ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಉಕ್ಕಿನ ಸೇತುವೆಗೆ ಪರ್ಯಾಯದ ಕುರಿತು “ಉದಯವಾಣಿ’ ಜನಪ್ರತಿನಿಧಿಗಳು, ತಜ್ಞರು ಹಾಗೂ ಸಾರ್ವಜನಿಕರನ್ನು ಮಾತನಾಡಿಸಿ ಅಭಿಪ್ರಾಯ ಕಲೆ ಹಾಕಿದೆ.  ಈ ಸರಣಿ ಇಂದಿನಿಂದ ಆರಂಭವಾಗುತ್ತಿದೆ. 

Advertisement

ಏರ್‌ ಶೋ ಸಂದರ್ಭದಲ್ಲಿ ಕೈಗೊಂಡ ಕ್ರಮಗಳನ್ನೇ ಪಾಲಿಸಬಹುದಲ್ಲವೇ?
ಬೆಂಗಳೂರು:
ವಿವಾದಾತ್ಮಕ ಉಕ್ಕಿನ ಸೇತುವೆ ಯೋಜನೆಯನ್ನು ಸರ್ಕಾರ ಕೈಬಿಡುವಂತೆ ಒತ್ತಡ ಹೇರುವಲ್ಲಿ ಯಶಸ್ವಿಯಾಗುವ ಮೂಲಕ ಬೆಂಗಳೂರಿನ ಜನತೆ ಶ್ರೇಷ್ಠ ನಗರದ ಸಮರ್ಥ ನಾಗರಿಕರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ ಎಂದು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

1,791 ಕೋಟಿ ರೂ. ವೆಚ್ಚದ ಉಕ್ಕಿನ ಸೇತುವೆ ಯೋಜನೆ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ರಾಜೀವ್‌ ಚಂದ್ರಶೇಖರ್‌ “ಉದಯವಾಣಿ’ಗೆ ನೀಡಿರುವ ಸಂದರ್ಶನ ನೀಡಿದ್ದಾರೆ. ಬಸವೇಶ್ವರ ವೃತ್ತದಿಂದ ಹೆಬ್ಟಾಳ ವರೆಗಿನ ಟ್ರಾಫಿಕ್‌ ಸಮಸ್ಯೆಗೆ ನಿವಾರಣೆಗೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಆದರೆ, ನಿರ್ದಿಷ್ಟ ಪರಿಹಾರೋಪಾಯ ನೀಡಲು ಅವರು ನಿರಾಕರಿಸಿದ್ದಾರೆ. 

* ರಾಜ್ಯ ಸರ್ಕಾರ ಉಕ್ಕಿನ ಸೇತುವೆ ಯೋಜನೆ ಕೈಬಿಟ್ಟಿರುವ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?
ಉಕ್ಕಿನ ಸೇತುವೆ ಯೋಜನೆಯನ್ನು ಸರ್ಕಾರ ಕೈಬಿಟ್ಟಿರುವುದು ಸ್ವಾಗತಾರ್ಹ. ಪ್ರಜಾಪ್ರಭುತ್ವ ಹಾಗೂ ನಗರ ಆಡಳಿತ ವ್ಯವಸ್ಥೆ ಯಲ್ಲಿ ಇದು ಜನರ ಅತಿದೊಡ್ಡ ಯಶಸ್ಸು. ಸಾರ್ವಜನಿಕರ ಅಭಿಪ್ರಾಯ ಪಡೆಯದೆ, ಪರಿಸರದ ಮೇಲಿನ ಪರಿಣಾಮ ಗಳನ್ನು ಲೆಕ್ಕಿಸದೆ, ದುಬಾರಿ ವೆಚ್ಚದ ಯೋಜನೆಯನ್ನು ತರಾತುರಿಯಲ್ಲಿ ಕೈಗೊಳ್ಳಲು ಸರ್ಕಾರ ಮುಂದಾಗಿದ್ದು ಸರಿಯಲ್ಲ. ಯೋಜನೆ ವಿರುದ್ಧ ಹೋರಾಡುವ ಮೂಲಕ ಬೆಂಗಳೂರಿನ ಜನ ತಾವು ಶ್ರೇಷ್ಠ ನಗರದ ಸಮರ್ಥ ನಾಗರಿಕರು ಎಂಬುದನ್ನು ಸಾಬೀತುಪಡಿಸಿದ್ದಾರೆ.

* ಬಸವೇಶ್ವರ ವೃತ್ತದಿಂದ ಹೆಬ್ಟಾಳ ನಡುವೆ ನಿತ್ಯ ತೀವ್ರ ದಟ್ಟಣೆ ಉಂಟಾಗುತ್ತಿದ್ದು ಇದರ ನಿಯಂತ್ರಣಕ್ಕೆ ಕ್ರಮಗಳೇನು?
ಇತ್ತೀಚೆಗೆ ಏರ್‌ ಶೋ ಸಂದರ್ಭದಲ್ಲಿ ಕಲ್ಪಿಸಲಾಗಿದ್ದ ಪರ್ಯಾಯ ರಸ್ತೆ ಮಾರ್ಗವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬಹುದು. ಹಾಗೆಯೇ ಈ ರಸ್ತೆಯಲ್ಲಿ ದಟ್ಟಣೆ ತಪ್ಪಿಸಲು ಸರ್ಕಾರ ಈಗಾಗಲೇ ಘೋಷಿಸಿರುವ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ನಗರತಜ್ಞರು, ಸಂಚಾರತಜ್ಞರೊಂದಿಗೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸುಗಮ ಸಂಚಾರಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಬೇಕು.

Advertisement

* ಒಂದೊಮ್ಮೆ ಇಂತಹ ಸಂದರ್ಭದಲ್ಲಿ ತಾವು ಅಧಿಕಾರದಲ್ಲಿದ್ದಿದ್ದರೆ ಸಂಚಾರ ದಟ್ಟಣೆ ತಪ್ಪಿಸಲು ಯಾವ ಕ್ರಮ ಕೈಗೊಳ್ಳುತ್ತಿದ್ದಿರಿ?
ನಾನು ಅಧಿಕಾರದಲ್ಲಿದ್ದರೇ ಎಂಬುದು ಚರ್ಚೆಯ ವಿಚಾರವಲ್ಲ. ಜನರಿಂದ ಆಯ್ಕೆಯಾದ ಸರ್ಕಾರ ಜನರ ಅಗತ್ಯವನ್ನು ಸರಿಯಾಗಿ ಅರಿಯಬೇಕು ಎಂಬುದು ಮುಖ್ಯ ವಿಚಾರ. ಹಾಗೆಯೇ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸುಸ್ಥಿರ ನಗರ ಯೋಜನೆಯನ್ನು ರೂಪಿಸಿ ಜಾರಿಗೊಳಿಸಬೇಕಾಗುತ್ತದೆ. ಸದ್ಯದ ರಾಜ್ಯ ಸರ್ಕಾರದಲ್ಲಿ ಇದು ಕಾಣದಾಗಿದೆ.

* ಉಕ್ಕಿನ ಸೇತುವೆ ಯೋಜನೆ ರದ್ದಾಗಿರುವ ಹಿನ್ನೆಲೆಯಲ್ಲಿ ಪರಿಸರಸ್ನೇಹಿ ಹಾಗೂ ಆರ್ಥಿಕವಾಗಿ ಮಿತವ್ಯಯಕಾರಿಯಾದ ನಿರ್ದಿಷ್ಟ ಪರ್ಯಾಯ ಯೋಜನೆಗಳ ಬಗ್ಗೆ ಸಲಹೆ ನೀಡುತ್ತೀರಾ?
ನೋ ಕಮೆಂಟ್ಸ್‌…

* ನಮ್ಮ ಬೆಂಗಳೂರು ಪ್ರತಿಷ್ಠಾನವು ಬೆಂಗಳೂರು ಅಭಿವೃದ್ಧಿಗೆ ವಿರುದ್ಧವಾಗಿದೆ. ಪ್ರತಿಷ್ಠಾನವು ನಿರಂತರವಾಗಿ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಗಾಲು ಹಾಕುತ್ತಿದೆ ಎಂಬ ಸಚಿವ ಕೆ.ಜೆ.ಜಾರ್ಜ್‌ ಆರೋಪಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ಈ ರೀತಿ ಆರೋಪಿಸುವ ಯಾರೊಬ್ಬರಿಗೂ ನಾನು ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ನನ್ನ ಈವರೆಗಿನ ಕಾರ್ಯ ನಿರ್ವಹಣೆ ಹಾಗೂ ಬೆಂಗಳೂರಿನ ಅಭಿವೃದ್ಧಿ ಬಗೆಗಿನ ನನ್ನ ನಿಲುವು ಏನು ಎಂಬುದಕ್ಕೆ ಜನರು ಸಾಕ್ಷಿಯಾಗಿದ್ದಾರೆ. ಸ್ಟೀಲ್‌ ಬ್ರಿಡ್‌ ವಿರೋಧಿಸಿದ್ದಕ್ಕಾಗಿ ನಾನು ಅಭಿವೃದ್ಧಿಯ ವಿರೋಧಿ ಎಂಬ ಕಾಂಗ್ರೆಸ್‌ನ ಆರೋಪ ವಿಚಿತ್ರವಾಗಿದೆ.

ಗುತ್ತಿಗೆದಾರರು, ಬಿಲ್ಡರ್‌ಗಳು ಇಲ್ಲವೇ ಬ್ರಿಲ್ಡರ್‌ಗಳ ಆಪ್ತರ ಹಿತಕ್ಕಿಂತ ಜನಹಿತ ಮುಖ್ಯವಾಗಿರಬೇಕು. ಯೋಜನೆಯನ್ನು ಸಾಕ್ಷ್ಯಸಹಿತ ವಿರೋಧಿಸಲಾಗಿತ್ತು. ಜನರಿಂದ ವಿರೋಧ ವ್ಯಕ್ತವಾದಾಗ ಜನರ ಭಾವನೆಗಳಿಗೆ ಸ್ಪಂದಿಸಿ ಅವರ ಅಗತ್ಯಗಳಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಬೇಕು. ನಗರದ ನಾಗರಿಕರೇ ಇದನ್ನು ವಿರೋಧಿಸಿದ್ದು, ನಾನು ಕೂಡ ಬೆಂಗಳೂರಿನ ನಾಗರಿಕನಾಗಿ ವಿರೋಧಿಸಿದ್ದೇನೆ. 

* ಯೋಜನೆಯಲ್ಲಿ ಸರ್ಕಾರ 400 ಕೋಟಿ ರೂ. ಕಿಕ್‌ಬ್ಯಾಕ್‌ ಪಡೆದಿದೆ ಎನ್ನಲಾದ ಆರೋಪದ ಸಂಬಂಧ ಹೋರಾಟ ಮುಂದುವರಿಸುವಿರಾ?
ನಾಗರಿಕರಿಗೆ ತಮ್ಮ ಹಕ್ಕುಗಳು ಪೂರ್ಣಪ್ರಮಾಣದಲ್ಲಿ ಸಿಗುವವರೆಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಹಾಗೂ ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next