Advertisement

ಶೇ.36 ಮಕ್ಕಳಲ್ಲಿ ಮೊಬೈಲ್‌ ಫೋನ್‌ ಚಟ

11:35 PM Feb 19, 2023 | Team Udayavani |

ಬೆಂಗಳೂರು: ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಕಲಿಕೆಗಾಗಿ ಮಕ್ಕಳ ಕೈಗೆ ಕೊಟ್ಟ ಮೊಬೈಲ್‌ ಬಳಕೆಯು ಗೀಳಾಗಿ ಅಂಟಿಕೊಂಡಿದೆ. ರಾಜ್ಯದಲ್ಲಿ ಶೇ.36ರಷ್ಟು ಮಕ್ಕಳು ಸ್ಮಾರ್ಟ್‌ಫೋನ್‌ ಚಟಕ್ಕೆ ದಾಸರಾಗಿರುವುದು ಸಮೀಕ್ಷೆಯೊಂದರಲ್ಲಿ ದೃಢಪಟ್ಟಿದೆ.

Advertisement

ಸ್ಮಾರ್ಟ್‌ಫೋನ್‌ ಅತಿಯಾದ ಬಳಕೆಯಿಂದ ಶೇ.18ರಷ್ಟು ಮಕ್ಕಳಲ್ಲಿ ಖನ್ನತೆ, ನಿದ್ರಾಹೀನತೆ, ಕಿರಿಕಿರಿ, ಏಕಾಗ್ರತೆ ಕೊರತೆ, ದೈಹಿಕ ಸಮಸ್ಯೆ, ಬೊಜ್ಜು, ದೃಷ್ಟಿ ಸಮಸ್ಯೆ, ನೆನಪಿನ ಶಕ್ತಿ ಕ್ಷೀಣಿಸುವುದು, ನರ ದೌರ್ಬಲ್ಯದಂತಹ ಕಾಯಿಲೆಗಳು ಕಾಣಿಸಿಕೊಂಡಿವೆ. ಇದರಿಂದ ಆತಂಕಕ್ಕೊಳಗಾಗಿರುವ ಪಾಲಕರು ಚಿಕಿತ್ಸೆಗಾಗಿ ಆಸ್ಪತ್ರೆಯ ಮೊರೆ ಹೋಗುತ್ತಿದ್ದಾರೆ.

ಮೊಬೈಲ್‌ನಲ್ಲಿ ವಿವಿಧ ವೆಬ್‌ಸೈಟ್‌ಗಳಿಗೆ ಭೇಟಿ ಕೊಟ್ಟು ಅಶ್ಲೀಲ ವಿಡಿಯೋ ವೀಕ್ಷಿಸುವ ಮಕ್ಕಳ ಪ್ರಮಾಣ ಭಾರೀ ಏರಿಕೆಯಾಗಿದೆ. 13ರಿಂದ 19 ವರ್ಷದ ಶೇ.35ರಷ್ಟು ಮಕ್ಕಳು ಅಶ್ಲೀಲ ಚಿತ್ರ/ವಿಡಿಯೋ ವೀಕ್ಷಿಸುವ ವ್ಯಸನಕ್ಕೊಳಗಾಗಿದ್ದಾರೆ. ಉಳಿದಂತೆ ಶೇ.15ರಷ್ಟು ಮಕ್ಕಳು ಆಗಾಗ ಪೋರ್ನ್ ಸೈಟ್‌ಗಳಿಗೆ ಭೇಟಿ ನೀಡಿ ಹೆಚ್ಚು ಸಮಯ ವೀಕ್ಷಿಸುತ್ತಿದ್ದಾರೆ.

ಅಶ್ಲೀಲ ವಿಡಿಯೋಗೆ ದಾಸರಾದ ಮಕ್ಕಳ ಪೈಕಿ ಶೇ.98ರಷ್ಟು ಬಾಲಕರಿದ್ದರೆ, ಶೇ.0.50ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಬಾಲಕಿಯರಿದ್ದಾರೆ. ಇದರಿಂದ ಮಕ್ಕಳಲ್ಲಿ ಲೈಂಗಿಕ ದೌರ್ಜನ್ಯದಂತಹ ಕೃತ್ಯಗಳಲ್ಲಿ ತೊಡಗಲು ಪ್ರಚೋದನೆ ಉಂಟಾಗುವ ಸಾಧ್ಯತೆಗಳಿವೆ. ಸಾಮಾಜಿಕ ಸಂಬಂಧಗಳು, ಶಾಲಾ ಕಾರ್ಯಕ್ಷಮತೆ, ನಿದ್ರೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಮಕ್ಕಳ ಮಾನಸಿಕ ಕಾಯಿಲೆಗಳಿಗೆ ಇದು ಮಾರಕವಾಗಿದೆ ಎಂದು ಮಕ್ಕಳ ತಜ್ಞರು ಹೇಳುತ್ತಾರೆ.

ಲಾಕ್‌ಡೌನ್‌ ವೇಳೆ ಪಠ್ಯ ಕಲಿಕೆಗೆಂದು ಮಕ್ಕಳ ಕೈಗೆ ಪಾಲಕರು ಸ್ಮಾರ್ಟ್‌ಫೋನ್‌ ಕೊಟ್ಟಿದ್ದರು. ಆದರೆ, ಕಳೆದ 3 ವರ್ಷಗಳಿಂದ ಇದರ ಅತಿಯಾದ ಬಳಕೆ ಮಕ್ಕಳನ್ನು ವ್ಯಸನಕ್ಕೆ ತಳ್ಳಿದೆ. ಸದ್ಯ 9ರಿಂದ 13 ವರ್ಷದ ಶೇ.40, 13ರಿಂದ 17 ವರ್ಷದ ಶೇ.50 ಮಕ್ಕಳು ಮಿತಿಗಿಂತ ಹೆಚ್ಚಾಗಿ ಮೊಬೈಲ್‌ ಬಳಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ 9ರಿಂದ 17 ವರ್ಷದ ಮಕ್ಕಳು ವಿಡಿಯೋ, ಗೇಮಿಂಗ್‌, ಸಾಮಾಜಿಕ ಜಾಲತಾಣದಂತಹ ಸುಳಿಯಲ್ಲಿ ಸಿಲುಕಿ ಹೊರ ಬರಲಾರದೇ ಒದ್ದಾಡುತ್ತಿದ್ದಾರೆ. ಇದೀಗ ಮಕ್ಕಳ ಭವಿಷ್ಯದ ಬಗ್ಗೆ ಪಾಲಕರು ಕಳವಳ ವ್ಯಕ್ತಪಡಿಸಿದ್ದು, ಸ್ಮಾರ್ಟ್‌ಫೋನ್‌ ಬಳಸಲು ವಯೋಮಿತಿ ನಿಗದಿಪಡಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

Advertisement

ಎಎಪಿಯಿಂದ ಸಮೀಕ್ಷೆ:
ಮಕ್ಕಳ ಮೊಬೈಲ್‌ ವ್ಯಸನದ ಬಗ್ಗೆ ಅಮೆರಿಕನ್‌ ಅಕಾಡೆಮಿ ಪೀಡಿಯಾಟ್ರಿಕ್‌ (ಎಎಪಿ) ಸಮೀಕ್ಷೆ ನಡೆಸಿದೆ. ಇದರ ಪ್ರಕಾರ 5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಮೊಬೈಲ್‌ ಸ್ಕ್ರೀನ್‌ ತೋರಿಸಬಾರದು. 5-7 ವರ್ಷದ ಮಕ್ಕಳು ದಿನಕ್ಕೆ ಹಂತ-ಹಂತವಾಗಿ ಗರಿಷ್ಠ 1 ಗಂಟೆ ಮೊಬೈಲ್‌ ನೋಡಬಹುದು. 7-12 ವರ್ಷದವರು ಗರಿಷ್ಠ 2 ಗಂಟೆ ಮೊಬೈಲ್‌, ಲ್ಯಾಪ್‌ಟಾಪ್‌, ಟೀವಿ ವೀಕ್ಷಿಸಬಹುದು. ಇದಕ್ಕಿಂತ ಅಧಿಕ ಪ್ರಮಾಣದಲ್ಲಿ ನೋಡಿದರೆ ಆರೋಗ್ಯದ ಮೇಲೆ ಪ್ರಭಾವ ಬೀರಲಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಅತಿಯಾದ ಮೊಬೈಲ್‌ ಬಳಕೆಯಿಂದ ಮೆದುಳಿನ ಸಾಮ್ಯತೆ ಕಡಿಮೆಯಾಗಿ ಖಿನ್ನತೆ ಉಂಟಾಗಬಹುದು. ಅತಿಕಾಯ, ಬಾಡಿ ಮಾಸ್‌ ಇಂಡೆಕ್ಸ್‌ನಂತಹ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ ಎಂದು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್‌.ಸಂಜಯ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಸ್ಮಾರ್ಟ್‌ಫೋನ್‌ಗೆ ದಾಸರಾದ ಮಕ್ಕಳಿಗೆ ಏಕಾಏಕಿ ಅದರಿಂದ ಹೊರ ಬರಲು ಕಷ್ಟವಾಗುತ್ತದೆ. ಹೀಗಾಗಿ ಅವರು ಇಷ್ಟಪಡುವ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಲು ಪಾಲಕರು ಪ್ರೋತ್ಸಾಹಿಸಿ ಕ್ರಮೇಣ ಮೊಬೈಲ್‌ ಗೀಳಿನಿಂದ ದೂರ ಮಾಡಬಹುದು.
-ಡಾ.ಎಚ್‌.ಎಸ್‌.ವಿರೂಪಾಕ್ಷ, ಮನಶ್ಶಾಸ್ತ್ರಜ್ಞ

ಸ್ಮಾರ್ಟ್‌ಫೋನ್‌ ದಾಸರಾಗುವ ಮಕ್ಕಳ ಪ್ರಮಾಣವು ಕಳೆದ 2 ವರ್ಷಗಳಿಂದ ಏರಿಕೆಯಾಗಿದೆ. ಇದರಿಂದ ಬಹುತೇಕ ಮಕ್ಕಳಲ್ಲಿ ಖನ್ನತೆಯಂತಹ ಮಾನಸಿಕ ಕಾಯಿಲೆಗಳು ಕಾಣಿಸಿಕೊಳ್ಳುತ್ತಿರುವುದು ಆತಂಕದ ಸಂಗತಿ.
-ಡಾ.ಕೆ.ಎಸ್‌.ಸಂಜಯ್‌, ನಿರ್ದೇಶಕ, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ

-ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next