Advertisement

ಸ್ಮಾರ್ಟ್‌ಸಿಟಿ: ಮಂಗಳೂರಿನಲ್ಲಿ ಇಂದು 6 ಮಹಾನಗರಗಳ ವಿಸ್ತೃತ ಸಭೆ

03:45 AM Feb 03, 2017 | |

ಮಂಗಳೂರು: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ “ಸ್ಮಾರ್ಟ್‌ಸಿಟಿ’ ಯೋಜನೆಗೆ ಆಯ್ಕೆಯಾದ ಮಂಗಳೂರು ಸೇರಿದಂತೆ ರಾಜ್ಯದ 6 ಮಹಾನಗರಗಳ ಮುಂದಿನ ಆಡಳಿತ ಕಾರ್ಯನಿರ್ವಹಣೆ ಕುರಿತು ಸಮಗ್ರ ಪರಾಮರ್ಶಿಸಿ ನಿರ್ಧಾರ ಕೈಗೊಳ್ಳುವ ಬಗ್ಗೆ”ಸ್ಮಾರ್ಟ್‌ ಸಿಟಿ ಮಿಷನ್‌-ಕರ್ನಾಟಕ’ ಎಂಬ 2 ದಿನಗಳ ರಾಜ್ಯಮಟ್ಟದ ಕಾರ್ಯಾಗಾರವನ್ನು ಫೆ. 3 ಹಾಗೂ 4ರಂದು ಮಂಗಳೂರಿನ ಹೊಟೇಲ್‌ ಓಶಿಯನ್‌ಪರ್ಲ್ನಲ್ಲಿ ಆಯೋಜಿಸಲಾಗಿದೆ. 

Advertisement

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೇಯರ್‌ ಎಂ. ಹರಿನಾಥ್‌, ಕೇಂದ್ರ, ರಾಜ್ಯ ಹಾಗೂ ಪಾಲಿಕೆಯ ಸಹಯೋಗದೊಂದಿಗೆ ಜಾರಿಗೊಳಿಸಲಿರುವ ಸ್ಮಾರ್ಟ್‌ಸಿಟಿ ಪರಿಕಲ್ಪನೆ ಬಗ್ಗೆ ವಿಸ್ತೃತ ಕಾರ್ಯನಿರ್ವಹಣೆ ಬಗ್ಗೆ ತಿಳಿದುಕೊಳ್ಳಲು ಕಾರ್ಯಾಗಾರ ಆಯೋಜಿಸಲಾಗಿದೆ. ಇದರಲ್ಲಿ ರಾಜ್ಯದ 6 ಪಾಲಿಕೆಗಳ ಅಧಿಕಾರಿಗಳು, ಮೇಯರ್‌, ಉಪಮೇಯರ್‌, ರಾಜ್ಯಸರಕಾರದ ಹಿರಿಯ ಅಧಿಕಾರಿಗಳು, ವಿಶ್ವಬ್ಯಾಂಕ್‌ನ 8 ಪ್ರತಿಷ್ಠಿತ ಅಧಿಕಾರಿಗಳು ಭಾಗವಹಿಸಲಿದ್ದಾರೆ. ರಾಜ್ಯ ನಗರಾಭಿವೃದ್ಧಿ ಸಚಿವ ರೋಷನ್‌ ಬೇಗ್‌ ಕಾರ್ಯಾಗಾರವನ್ನು ಫೆ. 3ರಂದು ಬೆಳಗ್ಗೆ 9.30ಕ್ಕೆ ಉದ್ಘಾಟಿಸಲಿದ್ದು, ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಮನಪಾ ಆಯುಕ್ತ ಮೊಹಮ್ಮದ್‌ ನಝೀರ್‌ ಮಾತನಾಡಿ, ಸ್ಮಾರ್ಟ್‌ ಸಿಟಿ ರಚನೆಗೆ ಅಗತ್ಯ ಕಾರ್ಯಾನುಷ್ಠಾನ ಮತ್ತು ಕಾರ್ಯವ್ಯವಸ್ಥೆ ಯೋಜನೆ ರೂಪಿಸುವ ಸಂಬಂಧ ವಿವಿಧ ಗೋಷ್ಠಿಗಳನ್ನು ಎರಡು ದಿನ ನಡೆಸಲಾಗುವುದು. ಇವುಗಳನ್ನು ಆಧರಿಸಿ ಮುಂದೆ ಸ್ಮಾರ್ಟ್‌ ಸಿಟಿಗಳ ವಿಸ್ತೃತ ಕಾರ್ಯಾನುಷ್ಠಾನ ಯೋಜನೆ, ಆಯ-ವ್ಯಯ ನಿಗದಿ ಇತ್ಯಾದಿ ಕಾರ್ಯ ಆಯೋಜಿಸಲಾಗುವುದು. ದೇಶದ ಮತ್ತು ರಾಜ್ಯದ ಪ್ರತಿಷ್ಠಿತ ಅಧಿಕಾರಿಗಳ ತಂಡ ಹಾಗೂ ವಿದೇಶದ ನುರಿತರ ತಂಡ ಕಾರ್ಯಾಗಾರದಲ್ಲಿ ಭಾಗವಹಿಸಲಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮನಪಾ ಮುಖ್ಯಸಚೇತಕ ಎಂ. ಶಶಿಧರ ಹೆಗ್ಡೆ, ವಿವಿಧ ಸ್ಥಾಯೀ ಸಮಿತಿ ಅಧ್ಯಕ್ಷರಾದ ಲ್ಯಾನ್ಸಿ ಲಾಟ್‌ ಪಿಂಟೋ, ಕವಿತಾ ಸನಿಲ್‌, ಅಪ್ಪಿ, ಬಶೀರ್‌ ಅಹಮದ್‌, ಕಾರ್ಪೊರೇಟರ್‌ ನವೀನ್‌ ಡಿ’ಸೋಜಾ, ಉಪ ಆಯುಕ್ತ ಗೋಕುಲ್‌ದಾಸ್‌ ನಾಯಕ್‌ ಮೊದಲಾದವರು ಉಪಸ್ಥಿತರಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next