ವಿಜಯಪುರ: ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮಾಡಿದೆ ಎಂದು ಕೂಗು ಎಬ್ಬಿಸುತ್ತಿರುವ ಬಿಜೆಪಿ ನಾಯಕರು, ಭ್ರಷ್ಟಾಚಾರ ಹಗರಣದಲ್ಲೇ ಬಂಧಿತ ಬಿಜೆಪಿ ಮಾಜಿ ಶಾಸಕ ಡಿ.ಎಸ್.ವೀರಯ್ಯ ಬಂಧನದ ಕುರಿತು ಜಾಣ ಮೌನ ತಾಳಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ವಾಗ್ದಾಳಿ ನಡೆಸಿದರು.
ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚೆಕ್ ಮೂಲಕ ಲಂಚ ಪಡೆದ ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿ ಬಂದಿರುವ ತಮ್ಮ ನಾಯಕರ ಕುರಿತು ಮಾತನಾಡಲಿ. ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ನಡೆದಿರುವ ಹಗರಣಗಳ ಬಗ್ಗೆ ಮಾತನಾಡಲಿ ಎಂದು ಆಗ್ರಹಿಸಿದರು.
ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಕುರಿತು ಸ್ವಯಂ ಅವರದೇ ಪಕ್ಷದ ಶಾಸಕ ಬಸನಗೌಡ ಪಾಟೀಲ ಧ್ವನಿ ಎತ್ತಿದಾಗ ಯಾವ ನಾಯಕರೂ ಅಲ್ಲಗಳೆಯದಿರುವುದೇ ಬಿಜೆಪಿ ಭ್ರಷ್ಟಾಚಾರ ಪಕ್ಷ ಎಂಬುದನ್ನು ಸ್ಪಷ್ಟೀಕರಿಸುತ್ತದೆ ಎಂದರು.
ಹಿಂದುಳಿದ ವರ್ಗದ ಹಿನ್ನೆಲೆಯಿಂದ ಬಂದಿರುವ ಕಳಂಕ ರಹಿತ ಆಡಳಿತ ನೀಡುತ್ತಿರುವ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಹುನ್ನಾರ ನಡೆಸಿದೆ ಎಂದು ಹರಿಹಾಯ್ದರು.
ಬಿಜೆಪಿ ದಲಿತ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತ ವಿರೋಧಿ ಮನಸ್ಥಿತಿ ಹೊಂದಿದೆ ಎಂಬುದಕ್ಕೆ ಬಿಜೆಪಿ ಹಿರಿಯ ಶಾಸಕ ಯತ್ನಾಳ ಗ್ಯಾರಂಟಿ ಯೋಜನೆ ಸ್ಥಗಿತ ಮಾಡಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿರುವುದೇ ಸಾಕ್ಷಿ ಎಂದರು.
ಉಡುಪಿ ಪೇಜಾವರ ಶ್ರೀಗಳು ಬಿಜೆಪಿ ವಕ್ತಾರರಂತೆ ಮಾತನಾಡುತ್ತಿದ್ದಾರೆ. ರಾಜಕೀಯ ಪ್ರೇರಿತ ಹೇಳಿಕೆ ಮೂಲಕ ಕಾವಿ ಗೌರವ ಕಳೆಯುವ ಕೆಲಸ ನಿಲ್ಲಿಸಲಿ ಎಂದು ಟೀಕಿಸಿದರು.
ಡಾ.ರವಿ ಬಿರಾದಾರ ಉಪಸ್ಥಿತರಿದ್ದರು.