Advertisement

Karnataka BJP:ಕೋರ್‌ ಕಮಿಟಿ ಪುನಾರಚನೆಗೆ ಬಿಜೆಪಿಯ 3ನೇ ಬಣ ಪಟ್ಟು

11:25 PM Nov 18, 2024 | Team Udayavani |

ಬೆಂಗಳೂರು: ಪಕ್ಷದ ನೀತಿ-ನಿರ್ಣಯಗಳ ವಿಷಯದಲ್ಲಿ ಪ್ರಮುಖವಾಗಿರುವ “ಕೋರ್‌ ಕಮಿಟಿ’ ಪುನಾರಚನೆಗೆ ಬಿಜೆಪಿಯ ತಟಸ್ಥ ಬಣ (3ನೇ ಬಣ) ಪಟ್ಟು ಹಿಡಿದಿದ್ದು, ಪಕ್ಷದೊಳಗಿನ ಗೊಂದಲಗಳಿಗೆ ಶೀಘ್ರ ಇತಿಶ್ರೀ ಹಾಡಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ದೂರು ಕೊಡಲು ನಿರ್ಧರಿಸಿದೆ.

Advertisement

ವಿಜಯೇಂದ್ರ ಬಣ- ಯತ್ನಾಳ್‌ ಬಣ ಗೊಂದಲದಿಂದ ಬಿಜೆಪಿಯ ವರ್ಚಸ್ಸಿಗೆ ದಿನದಿಂದ ದಿನಕ್ಕೆ ಧಕ್ಕೆಯಾಗುತ್ತಿದೆ ಎಂಬ ತೀರ್ಮಾನಕ್ಕೆ ಬಂದಿರುವ ಈ ತಟಸ್ಥ ಬಣ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ವರಿಷ್ಠರ ಭೇಟಿಗೆ ಸಮಯ ಕೇಳಲು ನಿರ್ಧರಿಸಿದೆ. ಕೋರ್‌ ಕಮಿಟಿ ಪುನಾರಚನೆ ಮಾಡಬೇಕೆಂಬುದು ಈ ತಂಡದ ಪ್ರಧಾನ ಬೇಡಿಕೆಯಾಗಿದೆ.

ಕುತೂಹಲಕಾರಿ ಸಂಗತಿ ಎಂದರೆ ಈ ತಟಸ್ಥ ಬಣದಲ್ಲಿರುವವವರು ಯತ್ನಾಳ್‌ ಪರ, ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಧ್ವನಿ ಎತ್ತಿದವರಲ್ಲ. ಆದರೆ ಸಂಘಟನೆ ಹಾಗೂ ಸಂಘ ಪರಿವಾರದ ಹಿನ್ನೆಲೆ ಉಳ್ಳವರಾಗಿದ್ದು, ಯತ್ನಾಳ್‌ ಬಣದ ಬಗ್ಗೆ ಸಹಾನುಭೂತಿ ಹೊಂದಿದವರಾಗಿದ್ದಾರೆ. ಹೀಗಾಗಿ ಈ ತಂಡದ ವರಿಷ್ಠರ ಭೇಟಿಯು ಪರೋಕ್ಷವಾಗಿ ವಿಜಯೇಂದ್ರ ವಿರುದ್ಧವೇ ಆಗಿದೆ.

ಕೋರ್‌ ಕಮಿಟಿ ಪುನಾರಚನೆ ಏಕೆ?
ಕೋರ್‌ ಕಮಿಟಿ ಪುನಾರಚನೆ ಆಗಲೇಬೇಕೆಂಬುದು ಈ ತಂಡದ ಪ್ರಮುಖ ಬೇಡಿಕೆ. ಪಕ್ಷದ ನೀತಿ-ನಿರೂಪಣೆ, ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಹಿತ ಅನೇಕ ವಿಚಾರಗಳನ್ನು ನಿರ್ಧರಿಸುವುದು ಕೋರ್‌ ಕಮಿಟಿ. ಸದ್ಯ ಯಡಿಯೂರಪ್ಪ, ಬಸವರಾಜ್‌ ಬೊಮ್ಮಾಯಿ, ಡಿ.ವಿ. ಸದಾನಂದ ಗೌಡ, ಪ್ರಹ್ಲಾದ್‌ ಜೋಶಿ, ವಿಜಯೇಂದ್ರ, ಬಿ. ಶ್ರೀರಾಮುಲು, ಆರ್‌. ಅಶೋಕ್‌ ಡಾ| ಅಶ್ವತ್ಥನಾರಾಯಣ, ಸಿ.ಟಿ. ರವಿ, ರಾಜ್ಯ ಉಸ್ತುವಾರಿ ರಾಧಾ ಮೋಹನ್‌ ಅಗರ್ವಾಲ್‌ ಹಾಗೂ ಸುಧಾಕರ್‌ ರೆಡ್ಡಿ ಇದರಲ್ಲಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆ ಬಳಿಕ ಮಾಡಿಕೊಂಡ ಹಂಗಾಮಿ ವ್ಯವಸ್ಥೆ ಇದಾಗಿದ್ದು, ಎಲ್ಲ ಜಾತಿ, ಪ್ರದೇಶ ಹಾಗೂ ಸಂಘಟನಾತ್ಮಕ ಹಿನ್ನೆಲೆಯವರಿಗೆ ಪ್ರಾತಿನಿಧ್ಯ ಇಲ್ಲದಂತಾಗಿದೆ. ಪಕ್ಷ ರೂಪಿಸುವ ಹೋರಾಟಗಳ ಬಗ್ಗೆಯೂ ಇತ್ತೀಚಿನ ದಿನಗಳಲ್ಲಿ ಕೋರ್‌ ಕಮಿಟಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ. ಯಾವುದೇ ಚರ್ಚೆ ಇಲ್ಲದೆ ನಡೆಸುವ ತೀರ್ಮಾನಕ್ಕೇ ಪಕ್ಷದ ತೀರ್ಮಾನ ಎಂಬ “ಮುದ್ರೆ’ ಒತ್ತುತ್ತಿರುವುದು ಈ ಬಣಕ್ಕೆ ಸಮ್ಮತವಾಗಿಲ್ಲ. ಈ ಹಿನ್ನೆಲೆಯಲ್ಲಿ ಕೋರ್‌ ಕಮಿಟಿ ಪುನಾರಚನೆ ಬೇಡಿಕೆಯನ್ನು ವರಿಷ್ಠರ ಮುಂದೆ ಇಡಲು ನಿರ್ಧರಿಸಲಾಗಿದೆ.

Advertisement

ವರಿಷ್ಠರ ಭೇಟಿಗೆ ಈಗಾಗಲೇ ಸಮಯ ಕೋರಲಾಗಿದ್ದು, ಸದ್ಯದಲ್ಲೇ ಸಂಘದ ಹಿರಿಯರನ್ನೂ ಭೇಟಿ ಮಾಡಲು ನಿರ್ಧರಿಸಲಾಗಿದೆ. ಮಹಾರಾಷ್ಟ್ರ ಚುನಾವಣೆ ಬಳಿಕ ವರಿಷ್ಠರು ಈ ಬಗ್ಗೆ ಒಂದು ನಿಲುವು ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next