Advertisement

RCBಗೆ ಇಂದು ಆರನೇ ಪಂದ್ಯ: ಪಂಜಾಬ್‌ ವಿರುದ್ಧ ಕಾದಿದೆ ಕಠಿನ ಪರೀಕ್ಷೆ

11:51 PM Apr 19, 2023 | Team Udayavani |

ಮೊಹಾಲಿ: ಬೃಹತ್‌ ಮೊತ್ತವನ್ನು ಗಳಿಸಿಯೂ ಇದನ್ನು ಉಳಿಸಿಕೊಳ್ಳಲಾಗದ ಸಂಕಟ ದಲ್ಲಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಗುರುವಾರ ತನ್ನ 6ನೇ ಪಂದ್ಯವನ್ನು ಆಡ ಲಿದೆ. ಮೊಹಾಲಿಯಲ್ಲಿ ಆತಿಥೇಯ ಪಂಜಾಬ್‌ ಕಿಂಗ್ಸ್‌ ವಿರುದ್ಧ ಅದೃಷ್ಟಪರೀಕ್ಷೆಗೆ ಇಳಿಯಲಿದೆ.
5 ಪಂದ್ಯಗಳಲ್ಲಿ ಎರಡನ್ನಷ್ಟೇ ಗೆದ್ದಿರುವ ಬೆಂಗಳೂರು ತಂಡ ಸದ್ಯ ಕೆಳಗಿನಿಂದ 3ನೇ ಸ್ಥಾನದಲ್ಲಿದೆ. ಪಂಜಾಬ್‌ ಐದರಲ್ಲಿ ಮೂರನ್ನು ಜಯಿಸಿದ್ದು, 5ನೇ ಸ್ಥಾನಿಯಾಗಿದೆ.
ಈ ಸಲವೂ ಅದೃಷ್ಟವಿಲ್ಲ !

Advertisement

ಕಳೆದ 15 ವರ್ಷಗಳಿಂದ ಪ್ರಶಸ್ತಿಯ ಹುಡು ಕಾಟ ದಲ್ಲೇ ಇರುವ ಆರ್‌ಸಿಬಿಯ ಅದೃಷ್ಟ ಈ ಸಲವೂ ನೆಟ್ಟಗಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಅತ್ಯುತ್ತಮ ಮಟ್ಟದ ಫಿನಿಶರ್ ಮತ್ತು ಘಾತಕ ಬೌಲರ್‌ಗಳ ತೀವ್ರ ಅಭಾವ ಬೆಂಗಳೂರು ತಂಡವನ್ನು ಬೆಂಬಿಡದ ಭೂತದಂತೆ ಕಾಡುತ್ತಿದೆ. ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಹೊರತುಪಡಿಸಿ ಉಳಿದ ಯಾವ ವಿಭಾಗದಲ್ಲೂ ತಂಡ ಶಕ್ತಿಶಾಲಿಯಾಗಿಲ್ಲ.

ನಾಯಕ ಫಾ ಡು ಪ್ಲೆಸಿಸ್‌ ಮತ್ತು ವಿರಾಟ್‌ ಕೊಹ್ಲಿ ಅವರನ್ನೊಳಗೊಂಡ ಆರ್‌ಸಿಬಿಯ ಓಪನಿಂಗ್‌ ಬಗ್ಗೆ ಎರಡು ಮಾತಿಲ್ಲ. ಕೆಲವೊಮ್ಮೆ ಇಬ್ಬರೂ ಸಿಡಿದು ನಿಲ್ಲುತ್ತಾರೆ. ಇಲ್ಲವೇ ಇವ ರಲ್ಲೊಬ್ಬರು ನಿಂತು ಆಡುತ್ತಾರೆ. ಆದರೆ ವನ್‌ಡೌನ್‌ಗೆ ಯಾರು ಎಂಬುದು ಇನ್ನೂ ಇತ್ಯರ್ಥ ವಾಗಿಲ್ಲ. ದಿನೇಶ್‌ ಕಾರ್ತಿಕ್‌, ಮೈಕಲ್‌ ಬ್ರೇಸ್‌ವೆಲ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಹಿಪಾಲ್‌ ಲೊನ್ರೋರ್‌… ಹೀಗೆ ಪಂದ್ಯಕ್ಕೊಬ್ಬರಂತೆ ಬಂದು ಹೋಗಿದ್ದಾರೆ. ಯಾರೂ ನೆಲೆ ಕಂಡಿಲ್ಲ.

ಆದರೂ ತಂಡ ಉತ್ತಮ ಮೊತ್ತವನ್ನೇ ಪೇರಿಸುತ್ತ ಬಂದಿರುವುದು ಗಮನಾರ್ಹ. ಇದಕ್ಕೆ ಮುಖ್ಯ ಕಾರಣ, ಡುಪ್ಲಿಸಿಸ್‌-ಕೊಹ್ಲಿ ಮತ್ತು ಮ್ಯಾಕ್ಸ್‌ವೆಲ್‌ ಅವರ ಬ್ಯಾಟಿಂಗ್‌ ಫಾರ್ಮ್. ಕಳೆದ ಪಂದ್ಯದಲ್ಲಿ ಚೆನ್ನೈಗೆ 226 ರನ್‌ ಬಿಟ್ಟುಕೊಟ್ಟಾಗಲೂ ಬೆಂಗಳೂರು ತಂಡ ವಿಚಲಿತಗೊಳ್ಳಲಿಲ್ಲ. ದಿಟ್ಟ ಜವಾಬು ನೀಡಿ 8ಕ್ಕೆ 218ರ ತನಕ ಮುನ್ನುಗ್ಗಿ ಬಂದುದನ್ನು ಮರೆಯುವಂತಿಲ್ಲ. ಇಲ್ಲಿ ವಿರಾಟ್‌ ಕೊಹ್ಲಿ (6) ಮತ್ತು ಮಹಿಪಾಲ್‌ (0) ವೈಫ‌ಲ್ಯ ಕಂಡಿದ್ದರು. ಆದರೆ ಡುಪ್ಲೆಸಿಸ್‌-ಮ್ಯಾಕ್ಸ್‌ವೆಲ್‌ ಸೇರಿಕೊಂಡು 10 ಓವರ್‌ಗಳಲ್ಲಿ 126 ರನ್‌ ಪೇರಿಸಿ ಹೋರಾಟವನ್ನು ಜಾರಿಯಲ್ಲಿರಿಸಿದ್ದರು. ಆದರೆ ಅನಂತರದ ಬ್ಯಾಟರ್‌ಗಳಿಗೆ ಈ ಲಯದಲ್ಲಿ ಸಾಗಲು ಸಾಧ್ಯವಾಗಲಿಲ್ಲ. ಕಾರ್ತಿಕ್‌ ಸಿಡಿದರೂ ಇನ್ನಿಂಗ್ಸ್‌ ಬೆಳೆಸಲು ವಿಫ‌ಲರಾದರು. ಶಾಬಾಜ್‌, ಪ್ರಭುದೇಸಾಯಿ, ಹಸರಂಗ, ಪಾರ್ನೆಲ್‌ ಒತ್ತಡ ತಾಳದಾದರು. ಆರ್‌ಸಿಬಿಗೆ ತುರ್ತಾಗಿ ರಿಂಕು ಸಿಂಗ್‌ ಅವರಂಥ ದಿಟ್ಟ ಬ್ಯಾಟರ್‌ ಓರ್ವನ ಆವಶ್ಯಕತೆ ಇದೆ.

ಮುಗಿಯದ ಬೌಲಿಂಗ್‌ ಗೋಳು
ಆರ್‌ಸಿಬಿ ಬೌಲಿಂಗ್‌ ಗೋಳು ಹೇಳತೀರದು. ಚೆನ್ನೈ ವಿರುದ್ಧ ನಿಯಂತ್ರಣ ಸಾಧಿಸಿದ್ದು ಮೊಹಮ್ಮದ್‌ ಸಿರಾಜ್‌ ಮಾತ್ರ. ಉಳಿದಂತೆ ಪಾರ್ನೆಲ್‌, ಮ್ಯಾಕ್ಸ್‌ವೆಲ್‌, ಹಸರಂಗ, ಹರ್ಷಲ್‌ ಪಟೇಲ್‌, ವೈಶಾಖ್‌ ವಿಜಯ್‌ಕುಮಾರ್‌ ಘೋರ ವೈಫ‌ಲ್ಯ ಕಂಡರು. ವೈಶಾಖ್‌ ಮ್ಯಾಜಿಕ್‌ ಒಂದೇ ಪಂದ್ಯಕ್ಕೆ ಸೀಮಿತಗೊಂಡಿತು. ಎಲ್ಲರೂ ಬಂದು ಲೆಕ್ಕದ ಭರ್ತಿಯ 3-4 ಓವರ್‌ ಎಸೆದು ಧಾರಾಳ ರನ್‌ ಕೊಟ್ಟು ಹೋಗುತ್ತಾರೆಯೇ ಹೊರತು ಎದುರಾಳಿ ಮೇಲೆ ಯಾವುದೇ ಪ್ರಭಾವ ಬೀರುತ್ತಿಲ್ಲ. ಒಟ್ಟಾರೆ ಹೇಳುವುದಾದರೆ, ಆರ್‌ಸಿಬಿ ಬೌಲಿಂಗ್‌ ವಿಭಾಗ ಈ ಕೂಟದಲ್ಲೇ ಅತ್ಯಂತ ಕಳಪೆ. ಜೋಶ್‌ ಹೇಝಲ್‌ವುಡ್‌ ಅಂತಿಮ ಭರವಸೆ ಆಗುಳಿದಿದ್ದಾರೆ.

Advertisement

ಮೊಹಾಲಿಯಲ್ಲಿ ಮಿಶ್ರಫ‌ಲ
ಮೊಹಾಲಿಯಲ್ಲಿ ಆತಿಥೇಯ ಪಂಜಾಬ್‌ ಮಿಶ್ರಫ‌ಲ ಅನುಭವಿಸಿದೆ. ಕೆಕೆಆರ್‌ ವಿರುದ್ಧದ ಮಳೆ ಪಂದ್ಯವನ್ನು ಡಿ-ಎಲ್‌ ನಿಯಮದಂತೆ ಗೆದ್ದರೂ ಹಾಲಿ ಚಾಂಪಿಯನ್‌ ಗುಜರಾತ್‌ ಎದುರು 6 ವಿಕೆಟ್‌ಗಳ ಸೋಲನುಭವಿಸಿದೆ.

ಕಳೆದ ಪಂದ್ಯದಲ್ಲಿ ನಾಯಕ ಶಿಖರ್‌ ಧವನ್‌ ಗೈರಲ್ಲೂ ಲಕ್ನೋವನ್ನು ಅವರದೇ ಅಂಗಳದಲ್ಲಿ 2 ವಿಕೆಟ್‌ಗಳಿಂದ ಮಣಿಸಿದ್ದು ಪಂಜಾಬ್‌ ಕಿಂಗ್ಸ್‌ ಪಾಲಿಗೊಂದು ಬೂಸ್ಟ್‌ ಆಗಿರುವುದರಲ್ಲಿ ಅನುಮಾನವಿಲ್ಲ. ನಾಯಕ ಶಿಖರ್‌ ಧವನ್‌ ಗೈರಲ್ಲೂ ಪಂಜಾಬ್‌ ದಿಟ್ಟ ಹೋರಾಟ ನೀಡಿತ್ತು. ಉಸ್ತುವಾರಿ ನಾಯಕ ಸ್ಯಾಮ್‌ ಕರನ್‌ 31ಕ್ಕೆ 3 ವಿಕೆಟ್‌ ಕಿತ್ತು ಪರಿಣಾಮಕಾರಿ ಬೌಲಿಂಗ್‌ ನಡೆಸಿದ್ದರು.

ಆದರೂ 160ರಷ್ಟು ಸಾಮಾನ್ಯ ಮೊತ್ತದ ಗುರಿ ಯನ್ನು ಬೆನ್ನಟ್ಟುವಾಗ ಪಂಜಾಬ್‌ ಆರಂಭದಲ್ಲೇ ತೀವ್ರ ಒತ್ತಡಕ್ಕೆ ಸಿಲುಕಿತ್ತು. ಪ್ರಭ್‌ಸಿಮ್ರಾನ್‌ ಸಿಂಗ್‌ ಆವರ ಸತತ ವೈಫ‌ಲ್ಯ ತಂಡವನ್ನು ಕಾಡುತ್ತಿದೆ. ಧವನ್‌ ಬದಲು ಆಡಲಿಳಿದ ಅಥರ್ವ ಟೈಡೆ ಸೊನ್ನೆ ಸುತ್ತಿ ಹೋಗಿದ್ದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಮ್ಯಾಥ್ಯೂ ಶಾರ್ಟ್‌, ಹರ್‌ಪ್ರೀತ್‌ ಸಿಂಗ್‌ ಭಾಟಿಯಾ, ಸಿಕಂದರ್‌ ರಝ ಉತ್ತಮ ಹೋರಾಟ ನಡೆಸಿದ್ದರ ಫ‌ಲವಾಗಿ ಪಂಜಾಬ್‌ ಅದೃಷ್ಟದ ಗೆಲುವನ್ನು ತನ್ನದಾಗಿಸಿಕೊಂಡಿತ್ತು.

ಒಟ್ಟಾರೆ ಹೇಳುವುದಾದರೆ ಆರ್‌ಸಿಬಿಯ ಕೊಹ್ಲಿ-ಡುಪ್ಲೆಸಿಸ್‌, ಮ್ಯಾಕ್ಸ್‌ವೆಲ್‌ ಅವರ ಬ್ಯಾಟಿಂಗ್‌ ಸಾಮರ್ಥ್ಯಕ್ಕೆ ಪಂಜಾಬ್‌ ಖಂಡಿತ ಸಾಟಿಯಲ್ಲ. ಆದರೆ ಪಂಜಾಬ್‌ ಬೌಲಿಂಗ್‌ ಆರ್‌ಸಿಬಿಗಿಂತ ಘಾತಕ. ಅರ್ಷದೀಪ್‌, ರಬಾಡ ಮತ್ತು ಸ್ಯಾಮ್‌ ಕರನ್‌, ರಾಹುಲ್‌ ಚಹರ್‌ ಅವರನ್ನೊಳಗೊಂಡ ಬೌಲಿಂಗ್‌ ಪಡೆ ಹೆಚ್ಚು ವೈವಿಧ್ಯಮಯ.

Advertisement

Udayavani is now on Telegram. Click here to join our channel and stay updated with the latest news.

Next