Advertisement

Indian Premier league: ನಾಯಕರ ಹುಡುಕಾಟದಲ್ಲಿ 5 ಐಪಿಎಲ್‌ ತಂಡ

02:04 AM Dec 03, 2024 | Team Udayavani |

ಹೊಸದಿಲ್ಲಿ: ಐದು ತಂಡಗಳು ನೂತನ ನಾಯಕರನ್ನು ಹೆಸರಿಸಬೇಕಾದ ಕಾರಣ 2025ರ ಐಪಿಎಲ್‌ ತೀವ್ರ ಕುತೂಹಲ ಮೂಡಿಸಿದೆ. ಇದರಲ್ಲಿ ಹಾಲಿ ಚಾಂಪಿಯನ್‌ ಕೋಲ್ಕತಾ ನೈಟ್‌ರೈಡರ್ ಕೂಡ ಒಂದು. ಉಳಿದ ತಂಡಗಳೆಂದರೆ ಆರ್‌ಸಿಬಿ, ಡೆಲ್ಲಿ, ಕೆಕೆಆರ್‌, ಪಂಜಾಬ್‌ ಮತ್ತು ಲಕ್ನೋ.

Advertisement

ವಿಜಯೀ ಕಪ್ತಾನ ಶ್ರೇಯಸ್‌ ಅಯ್ಯರ್‌ ಅವರನ್ನೇ ಕೈಬಿಟ್ಟು ಅಚ್ಚರಿ ಮೂಡಿಸಿದ ಕೆಕೆಆರ್‌ ಮತ್ತೋರ್ವ ಭಾರತೀಯನನ್ನೇ ಈ ಸ್ಥಾನಕ್ಕೆ ನೇಮಿಸುವ ಇರಾದೆಯಲ್ಲಿದೆ. ಇಲ್ಲಿ ಅಜಿಂಕ್ಯ ರಹಾನೆ ಹೆಸರು ಮುಂಚೂಣಿಯಲ್ಲಿದೆ ಎಂದು ಮೂಲಗಳು ಹೇಳಿವೆ.

ಅಜಿಂಕ್ಯ ರಹಾನೆ ಕಳೆದ ಹರಾಜಿನ ಮೊದಲ ಸುತ್ತಿನಲ್ಲಿ ಮಾರಾಟವಾಗದೇ ಉಳಿದಿದ್ದರು. ಬಳಿಕ 1.5 ಕೋಟಿ ರೂ. ಮೂಲಬೆಲೆಯನ್ನೇ ನೀಡಿ ರಹಾನೆ ಅವರನ್ನು ಕೆಕೆಆರ್‌ ಖರೀದಿಸಿತ್ತು. ಇದಕ್ಕೂ ಮುನ್ನ 23.75 ಕೋಟಿ ರೂ.ಗಳ ದೊಡ್ಡ ಮೊತ್ತಕ್ಕೆ ವೆಂಕಟೇಶ್‌ ಅಯ್ಯರ್‌ ಅವರನ್ನು ಮರಳಿ ಖರೀದಿಸಿ ಅಚ್ಚರಿ ಮೂಡಿಸಿತ್ತು. ತಂಡದ ನಾಯಕತ್ವಕ್ಕಾಗಿಯೇ ಕೆಕೆಆರ್‌ ವೆಂಕಟೇಶ್‌ ಅಯ್ಯರ್‌ಗೆ ಇಷ್ಟೊಂದು ಮೊತ್ತ ಸುರಿದಿದೆ ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದ ರೀಗ ರಹಾನೆ ಹೆಸರು ಮುನ್ನೆಲೆಗೆ ಬಂದಿದೆ.

“ಹೌದು. ಅಜಿಂಕ್ಯ ರಹಾನೆ ಕೆಕೆಆರ್‌ ತಂಡದ ನಾಯಕರಾಗುವುದು ಶೇ. 90ರಷ್ಟು ಖಾತ್ರಿಯಾಗಿದೆ. ಅವರನ್ನು ನಾಯಕತ್ವಕ್ಕಾಗಿಯೇ ಕೆಕೆಆರ್‌ ಖರೀದಿಸಿದೆ’ ಎಂಬುದಾಗಿ ಫ್ರಾಂಚೈಸಿ ಮೂಲ ತಿಳಿಸಿದೆ.

ಕೇವಲ ಒಂದು ಟ್ಯಾಗ್‌
ಈ ನಡುವೆ ವೆಂಕಟೇಶ್‌ ಅಯ್ಯರ್‌ ನಾಯಕತ್ವದ ಕುರಿತು ಪ್ರತಿಕ್ರಿಯಿಸಿದ್ದು, “ಕ್ಯಾಪ್ಟನ್ಸಿ ಎಂಬುದು ಕೇವಲ ಒಂದು ಟ್ಯಾಗ್‌. ಈ ತಂಡಕ್ಕಾಗಿ ಆಡಿ ಉತ್ತಮ ಕೊಡುಗೆ ನೀಡಬೇಕು ಎಂಬಂಥ ವಾತಾವರಣ ನಿರ್ಮಿಸುವುದೇ ನಾಯಕತ್ವ. ಇದು ಹೆಚ್ಚಿನ ಜವಾಬ್ದಾರಿಯನ್ನು ನೀಡುತ್ತದೆ. ನಾಯಕತ್ವ ನೀಡಿದರೆ ಅತ್ಯಂತ ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ’ ಎಂದಿದ್ದಾರೆ.

Advertisement

ಬೇಡವಾದ ಶ್ರೇಯಸ್‌
ಶ್ರೇಯಸ್‌ ಅಯ್ಯರ್‌ ಅವರನ್ನು ಮರಳಿ ಖರೀದಿಸುವ ಯಾವುದೇ ಪ್ರಯತ್ನವನ್ನು ಕೆಕೆಆರ್‌ ಮಾಡಿರಲಿಲ್ಲ. ಇವರು 26.75 ಕೋಟಿ ರೂ.ಗಳ ಬೃಹತ್‌ ಮೊತ್ತಕ್ಕೆ ಪಂಜಾಬ್‌ ಕಿಂಗ್ಸ್‌ ಪಾಲಾದದ್ದು ಈಗ ಇತಿಹಾಸ. ಅಯ್ಯರ್‌ ಮುಂದಿನ ಸೀಸನ್‌ನಲ್ಲಿ ಪಂಜಾಬ್‌ ತಂಡದ ನಾಯಕರಾಗುವ ಎಲ್ಲ ಸಾಧ್ಯತೆ ಇದೆ.

ರಾಹುಲ್‌, ಪಂತ್‌, ಅಯ್ಯರ್‌…
ಕಳೆದ ಸೀಸನ್‌ನಲ್ಲಿ ನಾಯಕರಾಗಿದ್ದ ಕೆ.ಎಲ್‌. ರಾಹುಲ್‌, ರಿಷಭ್‌ ಪಂತ್‌ ಮತ್ತು ಶ್ರೇಯಸ್‌ ಅಯ್ಯರ್‌ ಅವರೀಗ ಬೇರೆ ತಂಡಗಳ ಪಾಲಾಗಿದ್ದಾರೆ. ಜತೆಗೆ ಈ ತಂಡಗಳ ನಾಯಕರಾಗಿ ಆಯ್ಕೆಯಾಗುವುದೂ ಖಾತ್ರಿಯಾಗಿದೆ. ಇದರಂತೆ ಡೆಲ್ಲಿಯನ್ನು ರಾಹುಲ್‌, ಲಕ್ನೋವನ್ನು ಪಂತ್‌ ಹಾಗೂ ಪಂಜಾಬ್‌ ತಂಡವನ್ನು ಅಯ್ಯರ್‌ ಮುನ್ನಡೆಸುವುದನ್ನು ನಿರೀಕ್ಷಿಸಬಹುದಾಗಿದೆ. ಉಳಿದಂತೆ ಹಾರ್ದಿಕ್‌ ಪಾಂಡ್ಯ (ಮುಂಬೈ), ಸಂಜು ಸ್ಯಾಮ್ಸನ್‌ (ರಾಜಸ್ಥಾನ್‌), ಋತುರಾಜ್‌ ಗಾಯಕ್ವಾಡ್‌ (ಚೆನ್ನೈ), ಪ್ಯಾಟ್‌ ಕಮಿನ್ಸ್‌ (ಹೈದರಾಬಾದ್‌) ಮತ್ತು ಶುಭಮನ್‌ ಗಿಲ್‌ (ಗುಜರಾತ್‌) ನಾಯಕರಾಗಿ ಮುಂದುವರಿಯಲಿದ್ದಾರೆ.

ಆರ್‌ಸಿಬಿಗೆ ನಾಯಕ ಯಾರು?
ಆರ್‌ಸಿಬಿ, ಲಕ್ನೋ, ಪಂಜಾಬ್‌ ಮತ್ತು ಡೆಲ್ಲಿ ತಂಡಗಳೂ ನೂತನ ನಾಯಕರನ್ನು ಕಾಣಬೇಕಿದೆ. ಇದರಲ್ಲಿ ಅತ್ಯಂತ ಕುತೂಹಲ ಮೂಡಿಸಿರುವುದು ಆರ್‌ಸಿಬಿ ಕ್ಯಾಪ್ಟನ್‌ ಯಾರಾಗಬಹುದು ಎಂಬುದು. ಬೇರೆಲ್ಲ ತಂಡಗಳಲ್ಲೂ ನಾಯಕತ್ವಕ್ಕೆ ಸಮರ್ಥರಾದ ಆಟಗಾರರಿದ್ದಾರೆ. ಆದರೆ ಆರ್‌ಸಿಬಿಗೆ ಈ ಕೊರತೆ ಇದೆ.
ವಿರಾಟ್‌ ಕೊಹ್ಲಿ ನಾಯಕತ್ವಕ್ಕೆ ಮರಳುತ್ತಾರೆ ಎಂಬುದು ಎಬಿ ಡಿ ವಿಲಿಯರ್ ಹೇಳಿಕೆ.

ಆದರೆ ಯಶಸ್ಸು ಕಾಣದ ಕೊಹ್ಲಿ ನಾಯಕತ್ವನ್ನು ಒಪ್ಪಿಕೊಳ್ಳುವುದು ಕಷ್ಟ ಎನ್ನಲಾಗುತ್ತಿದೆ. ಭಾರತೀಯರೇ ನಾಯಕರಾಗಬೇಕಾದಲ್ಲಿ ಭುವನೇಶ್ವರ್‌ ಕುಮಾರ್‌ ಹೆಸರು ಮುಂಚೂಣಿಯಲ್ಲಿ ಕಾಣಿಸುತ್ತದೆ. ಭವಿಷ್ಯದ ದೃಷ್ಟಿಯಲ್ಲಿ ರಜತ್‌ ಪಾಟೀದಾರ್‌ಗೆ ಈ ಅವಕಾಶ ಲಭಿಸಲೂಬಹುದು. ವಿದೇಶಿ ಆಟಗಾರ ನಾದರೆ ಲಿಯಮ್‌ ಲಿವಿಂಗ್‌ಸ್ಟೋನ್‌ ಅವರನ್ನು ಪರಿಗಣಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next