ಮುಂಬೈ: ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ಶಿವಸುಂದರ್ ದಾಸ್ ಅವರನ್ನು ಭಾರತ ಮಹಿಳಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಿಸಲಾಗಿದೆ. ಸದ್ಯ ಮುಂಬರುವ ಇಂಗ್ಲೆಂಡ್ ಸರಣಿಗೆ ಈ ಆಯ್ಕೆ ಮಾಡಲಾಗಿದೆ.
ಶಿವಸುಂದರ್ ದಾಸ್ ಅವರು ಭಾರತದ ಪರ 23 ಟೆಸ್ಟ್ ಪಂದ್ಯವಾಡಿದ್ದಾರೆ. 35 ಸರಾಸರಿಯಲ್ಲಿ 1300 ರನ್ ಗಳಿಸಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಎರಡು ಶತಕ ಮತ್ತು ಒಂಬತ್ತು ಅರ್ಧಶತಕಗಳನ್ನು ಬಾರಿಸಿದ್ದಾರೆ.
ಎನ್ ಸಿಎದಲ್ಲಿ ರಾಹುಲ್ ದ್ರಾವಿಡ್ ಅಡಿ ಬ್ಯಾಟಿಂಗ್ ಕೋಚ್ ಆಗಿ ಕಳೆದ ಕೆಲವು ವರ್ಷಗಳಿಂದ ಶಿವಸುಂದರ್ ದಾಸ್ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಅನುಭವ ತನಗೆ ಸಹಾಯವಾಗಲಿದೆ ಎಂಬ ನಂಬಿಕೆ ಅವರದ್ದು. ಈ ಹಿಂದೆ ತಾನು ಇಂಗ್ಲೆಂಡ್ ನಲ್ಲಿ ಆಡಿದ್ದು, ಇದು ತನಗೆ ಪ್ರಸ್ತುತ ಸಹಾಯವಾಗಲಿದೆ ಎನ್ನುತ್ತಾರೆ.
ಭಾರತ ವನಿತಾ ತಂಡಕ್ಕೆ ಕೆಲ ದಿನಗಳ ಹಿಂದೆಯಷ್ಟೇ ರಮೇಶ್ ಪೊವಾರ್ ಅವರನ್ನು ಮುಖ್ಯ ಕೋಚ್ ರನ್ನಾಗಿ ಆಯ್ಕೆ ಮಾಡಲಾಗಿತ್ತು. ಈ ಹಿಂದೆ ಕೋಚ್ ಆಗಿದ್ದ ವಿವಿ ರಾಮನ್ ಅವರನ್ನು ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯವಾಗಿ ಸೋತ ಬಳಿಕ ಹುದ್ದೆಯಿಂದ ತೆಗೆಯಲಾಗಿತ್ತು.
ಭಾರತ ಮಹಿಳಾ ತಂಡ ಇಂಗ್ಲೆಂಡ್ ನಲ್ಲಿ ಒಂದು ಟೆಸ್ಟ್, ತಲಾ ಮೂರು ಏಕದಿನ ಮತ್ತು ಟಿ 20 ಪಂದ್ಯಗಳನ್ನಾಡಲಿದೆ. ಈಗಾಗಲೇ ತಂಡ ಪ್ರಕಟವಾಗಿದ್ದು, ಮಿಥಾಲಿ ರಾಜ್ ಅವರು ಏಕದಿನ ಮತ್ತು ಟೆಸ್ಟ್ ತಂಡವನ್ನು ಮುನ್ನಡೆಸಿದರೆ, ಹರ್ಮನ್ ಪ್ರೀತ್ ಕೌರ್ ಟಿ20 ತಂಡವನ್ನು ಮುನ್ನಡೆಸಲಿದ್ದಾರೆ.