Advertisement

ದೇಶದ ಅರ್ಥವ್ಯವಸ್ಥೆ ಚೇತರಿಕೆಯ ಹಾದಿಯಲ್ಲಿದೆ : ಸಚಿವೆ ನಿರ್ಮಲಾ ಸೀತಾರಾಮನ್‌

08:54 PM Nov 03, 2020 | sudhir |

ನವದೆಹಲಿ: ಕೋವಿಡ್ ನಿಂದ ಕುಂಠಿತಗೊಂಡಿರುವ ದೇಶದ ಅರ್ಥವ್ಯವಸ್ಥೆ ಚೇತರಿಕೆಯ ಹಾದಿಯಲ್ಲಿದೆ. ಅದಕ್ಕೆ ಪೂರಕವಾಗಿ ವಿವಿಧ ಕ್ಷೇತ್ರಗಳು ಚೇತೋಹಾರಿ ಪ್ರಗತಿ ಕಾಣುತ್ತಿರುವ ಸುಳಿವು ಸಿಗುತ್ತಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

Advertisement

ಅರ್ಥ ವ್ಯವಸ್ಥೆ ಸುಧಾರಿಸುತ್ತಿರುವ ಪ್ರಕ್ರಿಯೆ ಈಗಷ್ಟೇ ಶುರುವಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡ ಬಳಿಕ ಖಚಿತವಾಗಿ ಮಾಹಿತಿ ನೀಡುತ್ತೇನೆ ಎಂದು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಹಣದುಬ್ಬರ ನಿಯಂತ್ರಣ ಸವಾಲಿನ ವಿಚಾರ ಎಂದು ಒಪ್ಪಿಕೊಂಡ ನಿರ್ಮಲಾ, ಯಾವುದೇ ವಸ್ತುವಿನ ಪೂರೈಕೆಯಲ್ಲಿ ವ್ಯತ್ಯಯವಾದರೆ ಅದು ಸಮಸ್ಯೆ ತಂದೊಡ್ಡುತ್ತದೆ. ಕೆಲವೊಂದು ಉತ್ಪನ್ನಗಳಿಗೆ ಸೂಕ್ತ ಸಂಗ್ರಹ, ವಿಲೇವಾರಿ ವ್ಯವಸ್ಥೆಗಳ ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದಿದ್ದಾರೆ.

ಸುಧಾರಣೆ ಆದ್ಯತೆ:
ಮುಂದಿನ ಬಜೆಟ್‌ನಲ್ಲಿ ಯಾವ ಕ್ಷೇತ್ರಕ್ಕೆ ಆದ್ಯತೆ ನೀಡಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ನಿರ್ಮಲಾ, “ಮೂಲ ಸೌಕರ್ಯ ಮತ್ತು ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ’ ಎಂದಿದ್ದಾರೆ. ಗುರುವಾರ ಪ್ರಧಾನಿ ಮೋದಿ ಜಗತ್ತಿನ ಪ್ರಮುಖ ಹೂಡಿಕೆದಾರರ ಜತೆಗೆ ಸಮಾಲೋಚನೆ ನಡೆಸಲಿದ್ದಾರೆ. ಅದು ದೂರಗಾಮಿ ಧನಾತ್ಮಕ ಪರಿಣಾಮ ಬೀರಲಿದೆ. ಮೂಲ ಸೌಕರ್ಯ ಕ್ಷೇತ್ರಗಳತ್ತ ಹೆಚ್ಚಿನ ಮೊತ್ತ ವಿನಿಯೋಗವಾದರೆ ಅದು ಅರ್ಥ ವ್ಯವಸ್ಥೆಗೆ ಹೆಚ್ಚು ಬಲ ನೀಡುತ್ತದೆ. ರಾಷ್ಟ್ರೀಯ ಮೂಲ ಸೌಕರ್ಯ ಯೋಜನೆಯಡಿ ಹೂಡಿಕೆದಾರರಿಗೆ 7 ಸಾವಿರ ಯೋಜನೆಗಳನ್ನು ಆಯ್ಕೆ ಮಾಡುವ ಅವಕಾಶ ನೀಡಲಾಗಿದೆ ಎಂದರು.

ಇದನ್ನೂ ಓದಿ:91 ಗಂಟೆಗಳ ಕಾಲ ಅವಶೇಷಗಳ ಅಡಿಯಲ್ಲಿ ಸಿಲುಕಿದರೂ ಬದುಕುಳಿದ 3 ವರ್ಷದ ಬಾಲೆ!

Advertisement

ಖಾತ್ರಿ ಯೋಜನೆ ಪರಿಶೀಲನೆ:
ಗ್ರಾಮೀಣ ಪ್ರದೇಶಗಳಲ್ಲಿ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಂತೆ ನಗರ ಪ್ರದೇಶಗಳಲ್ಲಿ ಅದೇ ಮಾದರಿಯ ಯೋಜನೆ ಜಾರಿಗೊಳಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ವಿತ್ತ ಸಚಿವೆ “ಈ ಬಗ್ಗೆ ಸರ್ಕಾರಕ್ಕೆ ಸಲಹೆಗಳು ಬಂದಿವೆ. ಯಾವ ರೀತಿ ಅದನ್ನು ಜಾರಿಗೊಳಿಸಬೇಕು ಎಂಬುದರ ಬಗ್ಗೆ ಇನ್ನಷ್ಟೇ ಯೋಚಿಸಬೇಕಾಗಿದೆ’ ಎಂದರು.

ಪ್ರತಿ ತಾಲೂಕು ಕೇಂದ್ರಗಳಿಗೆ ಕೊರೊನಾ ಲಸಿಕೆ ತಲುಪಿಸಿ ವಿತರಿಸುವ ವ್ಯವಸ್ಥೆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ದೇಶದಲ್ಲಿ ಅಭಿವೃದ್ಧಿಪಡಿಸಲಾದ ಲಸಿಕೆಗಳಲ್ಲಿನ ಪ್ರಗತಿ ಆಶಾದಾಯಕವಾಗಿದೆ ಎಂದರು.

ಮಧ್ಯಮ ವರ್ಗ ಒಂದೇ ಅಲ್ಲ: ಕೇಂದ್ರ ಸರ್ಕಾರ ಪ್ರಕಟಿಸಿದ ಪರಿಹಾರಾತ್ಮಕ ಕ್ರಮಗಳಿಂದ ಮಧ್ಯಮ ವರ್ಗಕ್ಕೆ ಲಾಭವಾಗಿಲ್ಲ ಎಂಬ ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ನಿರ್ಮಲಾ, “ಎಲ್ಲಾ ವರ್ಗದವರಿಗೂ ಸರ್ಕಾರ ಆದ್ಯತೆ ನೀಡುತ್ತದೆ. ಮಧ್ಯಮ ವರ್ಗ ಒಂದೇ ಅಲ್ಲ. ಉದ್ಯೋಗಿಗಳು ಇಪಿಎಫ್ಒಗೆ ನೀಡಬೇಕಾಗಿರುವ ಪಾಲನ್ನು ಸರ್ಕಾರವೇ ನೀಡುತ್ತಿರುವುದು ಮಧ್ಯಮ ವರ್ಗಕ್ಕೆ ನೀಡಿದ ಕೊಡುಗೆಯಲ್ಲವೇ’ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next