Advertisement
ಗುರುವಾರ ಹೊಸದಿಲ್ಲಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದು, ನಬಾರ್ಡ್ ಅನುದಾನ ಕಡಿತದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಶೀಘ್ರವೇ ಇದನ್ನು ಸರಿಪಡಿಸುವಂತೆ ಮನವಿ ಮಾಡಿದ್ದಾರೆ.
ಉತ್ಪಾದನೆ ಹೆಚ್ಚಳ ಆಗಬೇಕು. ಹೀಗಾಗಿ ಆರ್‌ಬಿಐ ಮತ್ತು ನಬಾರ್ಡ್‌ಗೆ ಕೇಂದ್ರ ಸರಕಾರ ಸೂಚನೆ ಕೊಡಲಿ ಎಂದು ಮನವಿ ಮಾಡಿದ್ದಾಗಿ ಹೇಳಿದರು. ಈ ಬಗ್ಗೆ ಪ್ರಧಾನಿ ಮೋದಿ, ಸಚಿವೆ ನಿರ್ಮಲಾ ಸೀತಾರಾಮನ್‌ಗೆ ನಾನು ಪತ್ರ ಬರೆದಿದ್ದೆ. ಅದಕ್ಕೆ ಉತ್ತರಿಸಿರುವ
ಸಚಿವರು, ಹೆಚ್ಚಿನ ಸಾಲ ಮಂಜೂರಾತಿಗೆ ಆರ್‌ಬಿಐ ಒಪ್ಪುತ್ತಿಲ್ಲ. ಇಡೀ ದೇಶದಲ್ಲಿ ಇದೇ ರೀತಿ ಮಂಜೂರಾತಿ ನಡೆದಿದೆ ಎಂದಿದ್ದಾರೆ. ನಬಾರ್ಡ್ ಕೇಂದ್ರ ಸರಕಾರದ ವ್ಯಾಪ್ತಿಯಲ್ಲೇ ಬರುತ್ತದೆ. ಕೇಂದ್ರ ಸರಕಾರವೇ ಅಸಹಾಯಕತೆ ವ್ಯಕ್ತಪಡಿಸಿದರೆ ಏನು ಹೇಳುವುದು ಎಂದು ಸಿದ್ದರಾಮಯ್ಯ ಪ್ರಶ್ನೆ ಹಾಕಿದರು.
Related Articles
ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಬಸನಗೌಡ ಪಾಟೀಲ್ ಯತ್ನಾಳ್, ಮೇಲ್ಮನೆ ಸದಸ್ಯ ಸಿ.ಟಿ. ರವಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಏಕೆ ಪ್ರಶ್ನಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕೇಳಿದರು.
Advertisement
ಕಳೆದ ಅವಧಿಯಲ್ಲಿ 22,902 ಕೋಟಿ ರೂ.ವರೆಗೆ ರೈತರಿಗೆ ಸಾಲ ನೀಡಿದ್ದ ರಾಜ್ಯ ಸರಕಾರವು 2024 25ನೇ ಸಾಲಿನಲ್ಲಿ 35 ಲಕ್ಷ ರೈತರಿಗೆ 25 ಸಾವಿರ ಕೋಟಿ ರೂ.ವರೆಗೆ ಅಲ್ಪಾವಧಿ ಕೃಷಿ ಸಾಲ ನೀಡುವ ಗುರಿ ಹೊಂದಿದೆ. ಈ ಬಾರಿ ಮುಂಗಾರು ಮಳೆಯೂ ಚೆನ್ನಾಗಿ ಆಗಿರುವುದರಿಂದ ರೈತರಿಗೆ ಹೆಚ್ಚಿನ ಸಾಲಕ್ಕೆ ಬೇಡಿಕೆ ಬಂದಿದೆ. ಶೇ. 4.50ರ ಬಡ್ಡಿದರದಲ್ಲಿ ಕರ್ನಾಟಕಕ್ಕೆ 9,162 ಕೋಟಿ ರೂ. ಅಲ್ಪಾವಧಿ ಕೃಷಿ ಸಾಲ ಮಂಜೂರು ಮಾಡುವಂತೆ ನಬಾರ್ಡ್‌ಗೆ ಅಪೆಕ್ಸ್ ಬ್ಯಾಂಕ್ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ನಬಾರ್ಡ್ ಕೇವಲ 2,340 ಕೋಟಿ ರೂ. ಮಂಜೂರು ಮಾಡಿದ್ದು, ಇದು ಕಳೆದ ಬಾರಿಗಿಂತ 3,260 ಕೋಟಿ ರೂ. ಕಡಿಮೆಯಾಗಿದೆ. ಅಂದರೆ ಕಳೆದ ಬಾರಿಗಿಂತ ಶೇ.58ರಷ್ಟು ಕಡಿಮೆ ಮಂಜೂರಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ವಾಣಿಜ್ಯ ಬ್ಯಾಂಕ್ ಮೊರೆ ಹೋಗಬೇಕೇ?ರಾಜ್ಯ ಸರಕಾರವು ಪ್ರತೀ ರೈತರಿಗೆ 5 ಲಕ್ಷ ರೂ.ವರೆಗಿನ ಅಲ್ಪಾವಧಿ ಬೆಳೆ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ನೀಡುತ್ತದೆ. ಆದರೆ ನಬಾರ್ಡ್‌ಗೆ ಕಟ್ಟಬೇಕಾದ ಶೇ. 4.50ರ ಬಡ್ಡಿಯನ್ನು ರೈತರ ಬದಲು ರಾಜ್ಯ ಸರಕಾರವೇ ಪಾವತಿಸುತ್ತದೆ. ಇದೇ ರೀತಿ ಶೇ. 3ರ ಬಡ್ಡಿದರಕ್ಕೆ 5ರಿಂದ 15 ಲಕ್ಷ ರೂ.ವರೆಗೆ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲವನ್ನೂ ರಾಜ್ಯ ಸರಕಾರ ಕೊಡುತ್ತದೆ. ಸುಮಾರು 1,200 ಕೋಟಿ ರೂ.ಗಳನ್ನು ನಬಾರ್ಡ್‌ಗೆ ರಾಜ್ಯ ಸರಕಾರ ಬಡ್ಡಿ ರೂಪದಲ್ಲಿ ಪಾವತಿಸುತ್ತದೆ. ಹೀಗಿದ್ದರೂ ನಬಾರ್ಡ್ ಸಾಲ ಮಂಜೂರಾತಿಯನ್ನೇ ಕಡಿಮೆ ಮಾಡಿರುವುದರಿಂದ ನಾವು ಅನಿವಾರ್ಯವಾಗಿ ವಾಣಿಜ್ಯ ಬ್ಯಾಂಕ್‌ಗಳ ಮೊರೆ ಹೋಗಬೇಕಾಗುತ್ತದೆ. ಅಲ್ಲಿ ಶೇ.10 12ರಷ್ಟು ಬಡ್ಡಿ ವಿಧಿಸುತ್ತಾರೆ. ಇದು ದೇಶದ ರೈತರಿಗೆ ಮಾಡುವ ಅನ್ಯಾಯ ಅಲ್ಲವೇ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.