Advertisement
ಸೀತೆಯ ಹುಟ್ಟಿದ ತಾಣ ಮಿಥಿಲಾ ನಗರ ಎನ್ನುವ ನಂಬಿಕೆಯಿದೆ. ಜನಕ ಮಹಾರಾಜ ಆಳಿದ ರಾಜ್ಯವೇ ಮಿಥಿಲಾ. ಅದೀಗ ಎಲ್ಲಿದೆ ಎಂದು ಹುಡುಕುತ್ತಾ ಹೋದರೆ, ಕೆಲವು ನಂಬಲರ್ಹ ಸಾಕ್ಷ್ಯಗಳು ಸಿಗುವುದು ನೇಪಾಳದ ಜನಕಪುರದಲ್ಲಿ. ಬಿಹಾರದ ಉತ್ತರಕ್ಕೆ ಅಂಟಿಕೊಂಡ ಪುಟ್ಟ ರಾಷ್ಟ್ರ ನೇಪಾಳ. ಅತ್ಯಂತ ಪ್ರಾಚೀನ ಕಾಲದಲ್ಲಿ ನೇಪಾಳದ ಗಂಡಕೀ ನದಿಯಿಂದ ಭಾರತದ ಚಂಪಾರಣ್ಯದ ವರೆಗೆ ಮಿಥಿಲಾನಗರ ವಿಸ್ತರಿಸಿತ್ತು ಎನ್ನಲಾಗುತ್ತದೆ. “ವಿದೇಹ’ ಎನ್ನುವ ರಾಜ್ಯದ ರಾಜಧಾನಿಯೇ ಮಿಥಿಲಾ. ಪ್ರಸ್ತುತ “ಜನಕಪುರ’ವೆಂದು ಪ್ರಸಿದ್ಧಿ ಪಡೆದಿದೆ.
Related Articles
Advertisement
ಜನಕನ ದೇಗುಲ: ರಾಮಮಂದಿರದ ಈಶಾನ್ಯ ದಿಕ್ಕಿನಲ್ಲಿ ಈ ಮಂದಿರವಿದೆ. ಇದರಲ್ಲಿ ಜನಕರಾಜ, ಸುನಯನಾ ಮತ್ತು ಸೀತಾ ಮೂರ್ತಿಗಳಿವೆ. ಮಂದಿರದ ಹತ್ತಿರ ಗಂಗಾಸಾಗರವೆಂಬ ವಿಸ್ತೃತ ಸರೋವರವಿದೆ. ಇದರೊಳಗೆ ಸೀತಾಮೂರ್ತಿ ಪ್ರಾಪ್ತವಾಯಿತು ಎನ್ನುತ್ತಾರೆ. ಈ ದೇಗುಲದ ಸಮೀಪವೇ ಇರುವುದು, ದಶರಥ ಮಂದಿರ. ಇಲ್ಲಿ ಹಲವಾರು ಪುಣ್ಯಪ್ರದ ಸರೋವರಗಳಿದ್ದು, ತೀರ್ಥಸ್ನಾನಕ್ಕೆ ಪ್ರವಾಸಿಗರು ಮುಗಿಬೀಳುವುದನ್ನು ಕಾಣಬಹುದು. ತ್ರೇತಾಯುಗದ ಜನಕರಾಜನ ಅರಮನೆಗಳು ಈಗಿಲ್ಲದಿದ್ದರೂ, ಕೆಲವೊಂದು ಗುರುತುಗಳ ಮೂಲಕ ಮಿಥಿಲಾ ನಗರವೇ ಇದಾಗಿದೆ ಎನ್ನುವುದಕ್ಕೆ ಅನೇಕ ಸಾಕ್ಷ್ಯಗಳಿವೆ.
ರಾಮನು ಶಿವಧನುಸ್ಸು ಮುರಿದಿದ್ದು…: ಜನಕಪುರದಿಂದ 20 ಕಿ.ಮೀ. ದೂರದಲ್ಲಿ ಧನುಷಾ ಎಂಬ ಗ್ರಾಮವಿದೆ. ಇಲ್ಲಿ ಸೀತಾ ಸ್ವಯಂವರ ನಡೆಯಿತೆಂದೂ, ರಾಮನು ಶಿವಧನುಸ್ಸನ್ನು ಮುರಿದು ಸೀತೆಯನ್ನು ವರಿಸಿದನೆಂತಲೂ ಹೇಳುತ್ತಾರೆ. ಇಲ್ಲಿ ಒಂದು ಧನುಸ್ಸಿನಾಕಾರಾದ ಪಾಷಾಣ ಖಂಡವಿದೆ. ರಾಮಚಂದ್ರನಿಂದ ಮುರಿಯಲ್ಪಟ್ಟ ಧನುಸ್ಸು ಶಿಲೆಯಾಗಿ ಇಲ್ಲಿದೆಯೆಂದು ನಂಬಲಾಗುತ್ತದೆ.
ಇದುವೇ ಮಾರ್ಗ…: ಜಯನಗರ- ದರ್ಭಾಂಗಕ್ಕೆ ಈಶಾನ್ಯ ರೈಲಗಳು ಹೋಗುತ್ತವೆ. ದರ್ಭಾಂಗದಿಂದ 68 ಕಿ.ಮೀ. ದೂರದಲ್ಲಿ ಜಯನಗರ ಬರುತ್ತದೆ. ಇಲ್ಲಿಂದ ಮುಂದೆ ನೇಪಾಳದ ರೈಲ್ವೆ, “ಜನಕಪುರ ಎಕ್ಸ್‌ಪ್ರೆಸ್’ ಮೂಲಕ ಸೀತೆಯ ಜನ್ಮ ಸ್ಥಳವನ್ನು ತಲುಪಬಹುದು. ಸ್ಟೇಷನ್‌ನಿಂದ 1.5 ಕಿ.ಮೀ. ದೂರದಲ್ಲಿ ಜನಕಮಹಲ್ ಇದೆ. ನಗರದಲ್ಲಿ ಅನೇಕ ಹೋಟೆಲ್, ಧರ್ಮಶಾಲೆಗಳಿವೆ. ಕಠ್ಮಂಡುವಿನಿಂದಲೂ ಇಲ್ಲಿಗೆ 303 ಕಿ.ಮೀ. ದೂರವಿದ್ದು, ನೇರ ಬಸ್ ಸಂಚಾರವಿದೆ.
* ಕೋಟೇಶ್ವರ ಸೂರ್ಯನಾರಾಯಣ ರಾವ್