Advertisement

Desi Swara; ಅಮೆರಿಕದಲ್ಲಿ ಸೀತಾ ಕಲ್ಯಾಣ; ಹೊರದೇಶದಲ್ಲಿ ಅರಳುತ್ತಿದೆ ಸನಾತನ ಸಂಸ್ಕೃತಿ

12:27 PM Apr 29, 2023 | Team Udayavani |

ಸುಮಾರು ಆರು ವರ್ಷಗಳ ಅವಧಿಯಲ್ಲಿ ಸಾಕಷ್ಟು ಬಾರಿ ನಾನು ಅಮೆರಿಕ ಮತ್ತು ಕೆನಡಾ ದೇಶಗಳಿಗೆ ಪ್ರವಾಸ ಮಾಡಿದ್ದೇನೆ. ಈ ಸಂದರ್ಭದಲ್ಲಿ ಹಲವಾರು ಹಿಂದೂ ದೇವಾಲಯಗಳನ್ನು ಸಂದರ್ಶಿಸಿದ್ದೇನೆ. ಆದರೆ ಅಲ್ಲಿ ಯಾವತ್ತೂ ಭಾರತೀಯ ದೇವಸ್ಥಾನಗಳಲ್ಲಿ ಸಿಗುವಂತಹ ಅನುಭವ ಸಿಕ್ಕಿಲ್ಲ. ಆದರೆ ನ್ಯೂಜೆರ್ಸಿ ರಾಜ್ಯದ ಎಡಿಸನ್‌ ಎಂಬಲ್ಲಿರುವ ಉಡುಪಿಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರಿಂದ ಸ್ಥಾಪಿತವಾದ ಶ್ರೀ ಕೃಷ್ಣ ವೃಂದಾವನ ದೇವಸ್ಥಾನಕ್ಕೆ ಇತ್ತೀಚೆಗೆ ಭೇಟಿ ನೀಡುವ, ಅಲ್ಲಿ ನಡೆದಂತಹ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ಇದು ಒಂದು ವಿಶಿಷ್ಟ ಮತ್ತು ವಿಭಿನ್ನ ಅನುಭೂತಿಯನ್ನೇ ನೀಡಿತು.

Advertisement

ದೇವಸ್ಥಾನದೊಳಗೆ ಕಾಲಿಡುತ್ತಿದ್ದಂತೆ ಮಲ್ಲಿಗೆ ಪರಿಮಳವೂ ಸೇರಿದಂತೆ ಹತ್ತಾರು ಹೂವುಗಳಿಂದ ಅಲಂಕೃತ ದೇವರ ಮೂರ್ತಿಗಳು ಹಿತಕರ ವಾತಾವರಣ ನಮ್ಮೂರ ದೇವಸ್ಥಾನಕ್ಕೆ ಪ್ರವೇಶಿಸಿದಾಗ ನೀಡುವ ಅನುಭವವನ್ನೇ ತಂದಿಕ್ಕಿತು. ಸ್ವಂತ ಊರಿನಿಂದ ದೂರವಿ¨ªಾಗ ಹುಟ್ಟೂರು ಬಹಳಷ್ಟು ಸೆಳೆಯುತ್ತದೆ. ಆಗ ನೆನಪುಗಳನ್ನು ಮೆಲುಕು ಹಾಕುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಾಗ ಆಗುವ ಪುಳಕ ವಿಭಿನ್ನ, ವಿಶಿಷ್ಟ ಮತ್ತು ಅನಿರ್ವಚನೀಯ! ಅಂತಹ ನೆನಪುಗಳನ್ನು ಮರುಕಳಿಸುವಂತೆ ಮಾಡಿದ್ದು, ಇಲ್ಲಿ ಇತ್ತೀಚೆಗೆ ನಡೆದ ಸೀತಾ ಕಲ್ಯಾಣೋತ್ಸವ. ಹೆಚ್ಚು ಕಡಿಮೆ ದಿನವಿಡೀ ನಡೆದ ಕಾರ್ಯಕ್ರಮಕ್ಕೆ ಸುಮಾರು ನಾಲೂ°ರಕ್ಕೂ ಹೆಚ್ಚಿನ ಜನರು ಸಾಕ್ಷಿಯಾದರು.

ಕಾರ್ಯಕರ್ತರೂ ಸೇರಿದಂತೆ ಭಾಗವಹಿಸಿದ ಎಲ್ಲರೂ ಅಚ್ಚುಕಟ್ಟಾಗಿ ವಸ್ತ್ರ ಸಂಹಿತೆಯನ್ನು ಪಾಲಿಸಿದ್ದರು. ಮಹಿಳೆಯರು ಸೀರೆಯಲ್ಲಿ ಕಂಗೊಳಿಸಿದರೆ, ಪುರುಷರು ಧೋತಿ, ಮೇಲ್ವಸ್ತ್ರ.. ಧರಿಸಿ ಕಾರ್ಯಕ್ರಮದ ಶೋಭೆ ಹೆಚ್ಚಿಸಿದ್ದರು. ಮಕ್ಕಳೆಲ್ಲ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಧರಿಸಿ ಸಂಭ್ರಮಿಸುತ್ತಿದ್ದದ್ದು ಕಣ್ಣಿಗೆ ಹಬ್ಬದಂತಾಗಿತ್ತು. ಕೆಲವು ಮಕ್ಕಳ ಹಣೆಯಲ್ಲಿ ಸಂಧ್ಯಾವಂದನೆ ಮಾಡಿದ ಶ್ರೀಮುದ್ರೆಯ ಗುರುತೂ ಎದ್ದು ಕಾಣುತ್ತಿತ್ತು. ಇಂತಹ ಉತ್ಸವದ ವಾತಾವರಣ ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು ಮಾತ್ರವಲ್ಲದೇ ಭಾರತದಲ್ಲಿರುವಂತ ಅನುಭೂತಿಯನ್ನು ನನಗೆ ಕೊಟ್ಟಿತು.

ವಿಧಿವತ್ತಾಗಿ ಸಾಂಪ್ರದಾಯಿಕವಾಗಿ ಪ್ರಾರಂಭವಾದ ಸೀತಾ ಕಲ್ಯಾಣೋತ್ಸವದಲ್ಲಿ ಪುಟಾಣಿಗಳಿಂದ ಆರಂಭಿಸಿ ಹತ್ತು ಹನ್ನೆರಡು ವರ್ಷದವರೆಗಿನ ಮಕ್ಕಳು ವಿವಿಧ ತಂಡಗಳಲ್ಲಿ ಹನುಮಾನ್‌ ಚಾಲೀಸ ಮತ್ತು ಹನುಮ ಸ್ತುತಿಯ ಸುಶ್ರಾವ್ಯ ಹಾಡು, ನೃತ್ಯ ರೂಪಕದೊಂದಿಗೆ ಪ್ರಸ್ತುತಪಡಿಸುತ್ತಿದ್ದರೆ ಎಲ್ಲರೂ ಮಂತ್ರಮುಗ್ಧರಾಗಿದ್ದರು.

Advertisement

ಕಾರ್ಯಕ್ರಮಕ್ಕೆ ಬಂದವರಿಗೆಲ್ಲರಿಗೂ ಅಚ್ಚುಕಟ್ಟಾದ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ತೀರಾ ಅಸಮರ್ಥರನ್ನು ಹೊರತುಪಡಿಸಿ ಹೆಚ್ಚಿನವರು ನೆಲದಲ್ಲೇ ಕುಳಿತು ಊಟ ಮಾಡಿದರು. ಸಾಮಾನ್ಯವಾಗಿ ಬಾಳೆ ಎಲೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡವರ ಸಂಖ್ಯೆ ಹೆಚ್ಚಾಗಿದ್ದ ಕಾರಣಕ್ಕೆ ಬಳಸಿ ಎಸೆಯುವ ತಟ್ಟೆಯನ್ನು ಉಪಯೋಗಿಸಲಾಗಿತ್ತು. ಆದರೆ ಊಟದ ಸಭಾಂಗಣಕ್ಕೆ ಪ್ರವೇಶಿಸುವ ಹಂತದಿಂದ ಮೊದಲ್ಗೊಂಡು ಊಟ ಆರಂಭಿಸುವ, ಊಟ ಮುಗಿಸಿ ಕೈತೊಳೆಯಲು ಹೋಗುವ ತನಕ ಎಲ್ಲದರಲ್ಲೂ ಸಂಪ್ರದಾಯ ಮತ್ತು ಅಚ್ಚುಕಟ್ಟಾದ ಶಿಸ್ತು ಎದ್ದು ಕಾಣುತ್ತಿತ್ತು. ಇನ್ನು ಊಟಕ್ಕೆ ಬಡಿಸಿದ ಖಾದ್ಯಗಳು ಒಂದಕ್ಕಿಂತ ಒಂದು ರುಚಿಕರ. ಅಪ್ಪಟ ಉಡುಪಿ ಶೈಲಿಯ ಸಾಂಬಾರ್‌, ಪಲ್ಯ, ಅನ್ನ, ಹಯಗ್ರೀವ ಮಡ್ಡಿ, ಪಾಯಸ, ಘಮಘಮಿಸುವ ತಿಳಿಸಾರು, ಮಜ್ಜಿಗೆ ಹೀಗೆ ಭರ್ಜರಿ ಭೋಜನವಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ತೆಲುಗು ಭಾಷಿಕರು, ಉಡುಪಿ ಅಡುಗೆಯ ಬಗ್ಗೆ ಕೇಳಿದ್ದರಂತೆ. ಈಗ ಅದನ್ನು ಸವಿಯುವ ಭಾಗ್ಯ ಸಿಕ್ಕಿತು, ಉಡುಪಿಗೆ ಬಂದು ಊಟ ಮಾಡಿದಷ್ಟು ಸಂತೋಷವಾಯಿತು ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಒಟ್ಟಿನಲ್ಲಿ, ಉದ್ಯೋಗ ನಿಮಿತ್ತ ಹುಟ್ಟೂರಿನಿಂದ ಸಾವಿರಾರು ಕಿಲೋ ಮೀಟರ್‌ ದೂರದಲ್ಲಿದ್ದರೂ ಮಕ್ಕಳಲ್ಲಿ ಎಳವೆಯÇÉೇ ಸನಾತನ ಸಂಸ್ಕೃತಿಯನ್ನು ಬಿತ್ತಿ ಬೆಳೆಸುವ ಪ್ರಯತ್ನಕ್ಕೆ ಪೂರಕವಾಗಿ ಸ್ಪಂದಿಸುವ ಹೆತ್ತವರ ಪ್ರಯತ್ನಕ್ಕೆ ಇಂತಹ ಕಾರ್ಯಕ್ರಮಗಳು ಬಹಳಷ್ಟು ಉಪಯುಕ್ತ.

*ಮೋಹನದಾಸ ಕಿಣಿ ಕಾಪು, ಫ್ಲೋರಿಡಾ

Advertisement

Udayavani is now on Telegram. Click here to join our channel and stay updated with the latest news.

Next