Advertisement

ಶಿರಸಿ:ಹಿಂಸಾಚಾರ: ಅಂಗಡಿ, ಗುಡಿಗಳ ಮೇಲೆ ಕಲ್ಲು ತೂರಾಟ

06:00 AM Dec 13, 2017 | Team Udayavani |

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಆರಂಭವಾದ “ಕೋಮು ಜ್ವಾಲೆ’ ಈಗ ಶಿರಸಿಗೂ ವ್ಯಾಪಿಸಿದೆ. ಪರೇಶ ಮೇಸ್ತ ಹತ್ಯೆ ಖಂಡಿಸಿ ಮಂಗಳವಾರ ಕರೆ ನೀಡಿದ್ದ ಶಿರಸಿ ಬಂದ್‌ ಹಿಂಸಾಚಾರಕ್ಕೆ ತಿರುಗಿದ್ದು, ಅಂಗಡಿ, ಪ್ರಾರ್ಥನಾ ಮಂದಿರ, ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿ ಬೆಂಕಿ ಹಚ್ಚಲಾಗಿದೆ. ಈ ವೇಳೆ ಎಂಟಕ್ಕೂ ಅಧಿಕ ಸಾರಿಗೆ ಸಂಸ್ಥೆ ಬಸ್‌ಗಳಿಗೆ ಹಾನಿಯಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಅಶ್ರು ವಾಯು ಪ್ರಯೋಗಿಸಿದ ಪೊಲೀಸರು ಬಳಿಕ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. 

Advertisement

ವಿಶ್ವ ಹಿಂದೂ ಪರಿಷತ್‌, ಬಜರಂಗ ದಳ, ಹಿಂದೂ ಜಾಗರಣ ವೇದಿಕೆ ಹಾಗೂ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ನಗರದ ವಿಕಾಸಾಶ್ರಮ ಬಯಲಿನಿಂದ ಮೆರವಣಿಗೆ ಮೂಲಕ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ಮನವಿ ಸಲ್ಲಿಸಲು ತೀರ್ಮಾನಿಸ ಲಾಗಿತ್ತು. ಬೆಳಗ್ಗೆ 9ರ ವೇಳೆಗೆ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಗಣಪತಿ ನಾಯ್ಕ, ಆರ್‌.ಡಿ. ಹೆಗಡೆ, ನಂದನ್‌ ಸಾಗರ್‌, ಗೋಪಾಲ ದೇವಾಡಿಗ, ಬಜರಂಗ ದಳದ ವಿಠಲ ಪೈ ಸಹಿತ ಎರಡು ಸಾವಿರಕ್ಕೂ ಅಧಿಕ ಕಾರ್ಯಕರ್ತರು ನೆರೆದಿದ್ದರು.

ಆದರೆ ಜಿಲ್ಲಾಧಿಕಾರಿಗಳು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಮೆರವಣಿಗೆ, ಪ್ರತಿಭಟನೆ ನಡೆಸುವಂತಿಲ್ಲ ಎಂದು ಎಸ್ಪಿ ವಿನಾಯಕ ಪಾಟೀಲ್‌ ಪ್ರತಿಭಟನನಿರತರಲ್ಲಿ ಮನವಿ ಮಾಡಿದರು. ನಾವು ಶಾಂತಿಯುತ ಪ್ರತಿ ಭಟನೆ ಮಾಡುತ್ತೇವೆ, ಯಾವುದೇ ಕಾರಣಕ್ಕೂ ಗಲಾಟೆ ಆಗುವುದಿಲ್ಲ. ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ಮನವಿ ಸಲ್ಲಿಸಲು ಅವಕಾಶ ಮಾಡಿಕೊಡಿ ಎಂದು ಕಾಗೇರಿ ಸಹಿತ ಇತರರು ಮನವಿ ಮಾಡಿ ದರು. ಈ ವೇಳೆ ಸಹಾಯಕ ಆಯುಕ್ತ ರಾಜು ಮೊಗವೀರ ಅವರೂ ಸ್ಥಳಕ್ಕೆ ಬಂದರು.

ಕಚೇರಿಗೆ ತೆರಳಿ ಮನವಿ ಸಲ್ಲಿಸುವ ಸಂಬಂಧ ಮಾತಿಗೆ ಮಾತು ಬೆಳೆದಾಗ ಬಂಧನದ ಎಚ್ಚರಿಕೆ ನೀಡಲಾಯಿತು. ಶಾಸಕ ಕಾಗೇರಿ ಸಹಿತ 25ಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಕೆಲ ಕಾರ್ಯಕರ್ತರು ಕುಳಿತಲ್ಲಿಂದ ಏಳದಿದ್ದಾಗ ಕಲ್ಲೂ ತೂರಿ ಬಂದು ಗಲಾಟೆ ದ್ವಿಗುಣಗೊಳ್ಳಲು ಕಾರಣವಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿ, ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೂ ಪರಿಸ್ಥಿತಿ ತಹಬದಿಗೆ ಬರಲಿಲ್ಲ. ಇದೇ ವೇಳೆ ಕಾರ್ಯಕರ್ತರು, ಕೆಲವು ಪೊಲೀಸರಿಗೆ ಗಾಯಗಳಾದವು. ಕಾರ್ಯಕರ್ತರೇ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು.

ಬೈಕ್‌ಗೆ ಬೆಂಕಿ ಹಚ್ಚಿದರು: ಚದುರಿದ ಗುಂಪುಗಳೂ ನಗರದ ಪ್ರಮುಖ ರಸ್ತೆಯಲ್ಲಿ ಕೆಲವು ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿತು. ನಗರದಲ್ಲಿ ಐದು ರಸ್ತೆ, ನಟರಾಜ್‌ ರಸ್ತೆ, ಸಿಪಿ ಬಜಾರ್‌, ದೇವಿಕೆರೆ, ಬಸ್‌ ನಿಲ್ದಾಣ, ಶಿವಾಜಿ ಚೌಕ, ಮಾರಿಕಾಂಬಾ ದೇವಸ್ಥಾನ, ಜೂ ಸರ್ಕಲ್‌, ಮಾರಿಕಾಂಬಾ ಕಾಲೇಜು ಎದುರು ಟೈರ್‌ಗೆ ಬೆಂಕಿ ಹಾಕಲಾಯಿತು. ದೇವಿಕೆರೆಯ ಉಡುಪಿ ಕಲೆಕ್ಷನ್‌ ಅಂಗಡಿಯಲ್ಲಿದ್ದ ಸಾಮಗ್ರಿಗಳಿಗೂ ಬೆಂಕಿ ಹಾಕಲಾಯಿತು. ಎರಡು ಬೈಕ್‌ಗೆ ಬೆಂಕಿ ಹಾಕಲಾಯಿತು. ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣ ಆಗಿದ್ದು, ಡಿಐಜಿ ಹೇಮಂತ ನಿಂಬಾಳ್ಕರ್‌ ಹಾಗೂ ಡಿಸಿ ಎಸ್‌.ಎಸ್‌.ನಕುಲ್‌, ಎಸ್ಪಿ ವಿನಾಯಕ ಪಾಟೀಲ್‌, ಗದಗ ಎಸ್ಪಿ ಸಂತೋಷ ಬಾಬು, ಚಿತ್ರದುರ್ಗದ ಹೆಚ್ಚುವರಿ ಎಸ್ಪಿ ರಾಮಸಿದ್ಧಿ ಸಹಿತ ಹುಬ್ಬಳ್ಳಿ, ಬೆಳಗಾವಿ, ಗದಗ, ಉಡುಪಿ, ಚಿಕ್ಕಬಳ್ಳಾಪುರದ ಹಿರಿಯ ಪೊಲೀಸ್‌ ಅಧಿ ಕಾರಿಗಳು, ಒಂದೂವರೆ ಸಾವಿರಕ್ಕೂ ಅಧಿಕ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಸಂಜೆ ಡಿಸಿ ನಕುಲ್‌ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಲಾಗಿದೆ.

Advertisement

6ನೇ ದಿನವೂ ಮೀನುಗಾರಿಕೆ ಸ್ಥಗಿತ: ಡಿ.6ರ ಗಲಭೆಯ ಅನಂತರ ಮೀನುಗಾರಿಕಾ ಬೋಟ್‌ಗಳು ಸಮುದ್ರಕ್ಕಿಳಿಯದ ಕಾರಣ ಬಹುಕೋಟಿ ನಷ್ಟವಾಗಿದೆ. ನಿತ್ಯ 150ಕ್ಕೂ ಹೆಚ್ಚು ಬೋಟ್‌ಗಳೊಂದಿಗೆ 500ಕ್ಕೂ ಹೆಚ್ಚು ಮೀನುಗಾರರು ಕಡಲಿಗೆ ಇಳಿಯುತ್ತಿದ್ದರು. ಮೀನಿನ ವ್ಯವಹಾರದಲ್ಲಿ ಸುಮಾರು 500 ಜನ ಬಂದರಿನಲ್ಲಿ ಕೆಲಸ ಮಾಡುತ್ತಿದ್ದರು. ಎಲ್ಲವೂ ನಿಂತು ಹೋಗಿದೆ. ಬಹುಸಂಖ್ಯಾಕರ ಸುಮಾರು 80 ಮತ್ತು ಅಲ್ಪಸಂಖ್ಯಾಕ ವರ್ಗದ 70ರಷ್ಟು ಬೋಟ್‌ಗಳು ಒಂದಾಗಿ ಕಡಲಿಗಿಳಿಯುತ್ತಿದ್ದವು. ಅನಿರೀಕ್ಷಿತ ಗಲಭೆ, ಸಾವು, ವದಂತಿ, ಬೆದರಿಕೆಗಳಿಂದ ಮೀನು ವ್ಯವಹಾರದಲ್ಲಿದ್ದವರು ಗಾಬರಿಗೊಂಡಿದ್ದು ಮೀನುಗಾರಿಕೆಯಿಂದ ದೂರ ಉಳಿದಿದ್ದಾರೆ.

ನಾಪತ್ತೆಯಾಗಿದ್ದ ವ್ಯಕ್ತಿ ಪತ್ತೆ: ಹೊನ್ನಾವರ ಗಲಭೆ ವೇಳೆ ನಾಪತ್ತೆಯಾಗಿದ್ದ ಶಿರಸಿಯ ಅಬ್ದುಲ್‌ ಗಫೂರ್‌ ಸುಂಠಿ ನಾಲ್ಕು ದಿನಗಳ ಬಳಿಕ ಪತ್ತೆಯಾಗಿದ್ದಾರೆ. ಮಂಗಳವಾರ ಮುಂಜಾನೆ 6 ಗಂಟೆ ವೇಳೆ ದಿಬ್ಬಣಗಲ್‌ ಬಸ್‌ ನಿಲ್ದಾಣಕ್ಕೆ ಬಂದ ಅಬ್ದುಲ್‌ ಸುಂಠಿ, ತನ್ನ ಮನೆಗೆ ಕರೆ ಮಾಡಲು ಅಲ್ಲಿದ್ದ ವ್ಯಕ್ತಿ ಬಳಿ ಮೊಬೈಲ್‌ ಪಡೆದು ಕರೆ ಮಾಡಿದ್ದ. ಈತನ ಸಂಭಾಷಣೆ ಆಲಿಸಿದ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಬ್ದುಲ್‌ನನ್ನು ವಶಕ್ಕೆ ಪಡೆದಿದ್ದಾರೆ.

ಬಳಿಕ ದಿಬ್ಬಣಗಲ್‌ ಬಸ್‌ ನಿಲ್ದಾಣದ ಸಮೀಪದಲ್ಲೇ ಇರುವ ರಾ ಕಾ ಕ್ಯಾಶ್ಯೂ ಕಾರ್ಖಾನೆ ಮಾಲಕ ವಿಜಯಾನಂದ ಶಾನುಭಾಗ್‌ ಅವರ ಮನೆಗೆ ತೆರಳಿ ಈತನ ಫೋಟೋ ತೋರಿಸಿ ವಿಚಾರಣೆ ನಡೆಸಿದ್ದಾರೆ. ಈತ ಎರಡು ದಿನಗಳ ಹಿಂದೆ ರಾತ್ರಿ 9ರ ಸುಮಾರಿಗೆ ಗೇಟ್‌ ಬಳಿ ಬಂದು ಕುಡಿಯಲು ನೀರು, ತಿನ್ನಲು ಅನ್ನ ಕೇಳಿದ. ಹುಚ್ಚನಿರಬೇಕೆಂದು ನೀರಿನ ಬಾಟಲಿ, ಬಿಸ್ಕಿಟ್‌ ಪೊಟ್ಟಣ ಕೊಟ್ಟು ಕಳುಹಿಸಿರುವುದಾಗಿ ತಿಳಿಸಿದ್ದಾರೆ.

ಇಂದು ಸಿದ್ದಾಪುರ ಬಂದ್‌: ಹೊನ್ನಾವರ, ಕುಮಟಾ, ಶಿರಸಿ ಬಳಿಕ ಬುಧವಾರ ಸಿದ್ದಾಪುರ ಬಂದ್‌ಗೆ ಕರೆ ನೀಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇದೇ ವೇಳೆ ಮಂಗಳವಾರ ಹತ್ತಿ ಗೋಡೌನ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು ಪರಿಸ್ಥಿತಿ ಬಿಗುವಿನಿಂದ ಕೂಡಿದೆ.

ಸಹಜ ಸ್ಥಿತಿಯತ್ತ ಕುಮಟಾ, ಹೊನ್ನಾವರ
ಕುಮಟಾದಲ್ಲಿ ಭುಗಿಲೆದ್ದಿದ್ದ ಹಿಂಸೆ ತಹಬದಿಗೆ ಬಂದಿದೆ. ಸತತ ಆರು ದಿನಗಳಿಂದ ಬಂದ್‌ ಆಚರಿಸಲಾಗುತ್ತಿರುವ ಹೊನ್ನಾವರ ಕೂಡ ಸಹಜ ಸ್ಥಿತಿಗೆ ಮರಳಿದೆ. ಈ ಎರಡೂ ಪಟ್ಟಣಗಳಲ್ಲಿ ಮಂಗಳವಾರ ಪರಿಸ್ಥಿತಿ ಶಾಂತಗೊಂಡಿದ್ದರೂ ಬೂದಿ ಮುಚ್ಚಿದ ಕೆಂಡದಂತಿದೆ. ವ್ಯಾಪಾರ ವಹಿವಾಟು ಶುರುವಾಗಿದೆ. ಉಭಯ ಪಟ್ಟಣದ ಆಯಕಟ್ಟಿನ ಜಾಗಗಳಲ್ಲಿ ಪೊಲೀಸ್‌ ಬಂದೋಬಸ್ತ್ ಮುಂದುವರೆಸಲಾಗಿದೆ. ಐಜಿಪಿ ಕಾರು ಸುಟ್ಟಿದ್ದು ಹಾಗೂ ಕಲ್ಲು ತೂರಾಟದ ಘಟನೆಗೆ ಸಂಬಂಧಪಟ್ಟಂತೆ ಇನ್ನೂ ಕೆಲವರನ್ನು ವಶಕ್ಕೆ ಪಡೆದು ವಿಚಾರಿಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ರಾಜ್ಯಪಾಲರಿಗೆ  ಬಿಜೆಪಿ ದೂರು
ಬೆಂಗಳೂರು: ಪರೇಶ್‌ ಮೇಸ್ತ ಸಹಿತ  ರಾಜ್ಯದಲ್ಲಿ ನಡೆದಿರುವ ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಬಿಜೆಪಿ ಸಂಸದರು, ಶಾಸಕರು, ಪಾಲಿಕೆ ಸದಸ್ಯರು ಮಂಗಳವಾರ ವಿಧಾನಸೌಧ ಆವರಣದ ಗಾಂಧಿ ಪ್ರತಿಮೆಯಿಂದ ರಾಜಭವನದವರೆಗೆ ಪ್ರತಿಭಟನ ಮೆರವಣಿಗೆ ನಡೆಸಿದರು. ಅಲ್ಲದೆ ರಾಜ್ಯಪಾಲ ವಾಲಾ ಅವರನ್ನು ಭೇಟಿಯಾಗಿ ಈ ಹತ್ಯೆಗಳ ಬಗ್ಗೆ ಎನ್‌ಐಎ ತನಿಖೆ ನಡೆಸಬೇಕು ಮತ್ತು ಪಿಎಫ್ಐ, ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸುವಂತೆ ರಾಜ್ಯ ಸರಕಾರಕ್ಕೆ ಸೂಚನೆ ನೀಡಬೇಕು ಎಂದು ಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next