Advertisement

Arrested: ಹೊಸ ವರ್ಷಾಚರಣೆಗೆ ಮಾದಕ ವಸ್ತು ಮಾರುತ್ತಿದ್ದ 11 ಮಂದಿ ಸೆರೆ

10:16 AM Jan 01, 2025 | Team Udayavani |

ಬೆಂಗಳೂರು: ಹೊಸ ವರ್ಷದ ಸಂದರ್ಭದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ವಿಶೇಷ ಕಾರ್ಯಾಚರಣೆ ನಡೆಸಿದ ನಗರದ 7 ಠಾಣೆಗಳ ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ 11 ಮಂದಿಯನ್ನು ಬಂಧಿಸಿ, 13 ಲಕ್ಷ ರೂ. ಮೌಲ್ಯದ ಮಾದಕ ವಸ್ತು ಗಾಂಜಾ ಜಪ್ತಿ ಮಾಡಿದ್ದಾರೆ.

Advertisement

ಈ ಕುರಿತು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಅವರು, ಬಂಧಿತ ಆರೋಪಿಗಳು ಕೇರಳ, ಅಸ್ಸಾಂ, ಒಡಿಶಾ, ತ್ರಿಪುರ, ಜಾರ್ಖಂಡ್‌, ಮಣಿಪುರ ಸೇರಿ ನೆರೆ ರಾಜ್ಯಗಳಿಂದ ನಗರಕ್ಕೆ ಗಾಂಜಾ ತಂದು ಮಾರಾಟ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ. ಆರೋಪಿಗಳ ಪೈಕಿ ಸ್ವಿಗ್ಗಿ ಡೆಲಿವರಿ ಬಾಯ್‌, ಆಟೋ ಚಾಲಕರು ಇದ್ದಾರೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆ ವಿರುದ್ಧ ಆಯಾ ಠಾಣೆಗಳಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

ಡ್ರಗ್ಸ್‌ ಮಾರಲೆಂದೇ ಡೆಲಿವರಿ ಬಾಯ್‌ ಆಗಿದ್ದ ಯುವಕ: ಅಸ್ಸಾಂನಿಂದ ಗಾಂಜಾ ತಂದು ನಗರದಲ್ಲಿ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದ ಫ‌ುಡ್‌ ಡೆಲವರಿ ಬಾಯ್‌ನನ್ನು ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ಮೂಲದ ರಾಜನ್‌ ಛತ್ರಿ(32) ಬಂಧಿತ. ಈತ ಕೆಲ ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದು, ಸೆಕ್ಯುರಿಟಿ ಕೆಲಸ ಮಾಡಿಕೊಂಡಿದ್ದು, ಇತ್ತೀಚೆಗಷ್ಟೇ ಕೆಲಸ ಬಿಟ್ಟು ಮಾದಕ ವಸ್ತು ಮಾರಾಟ ಮಾಡಲೆಂದು ಸ್ವಿಗ್ಗಿ ಡೆಲವರಿ ಬಾಯ್‌ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಚಿಕ್ಕತೋಗೂರು ಗ್ರಾಮದ ನೈಸ್‌ ರಸ್ತೆಯಲ್ಲಿ ಗಾಂಜಾ ಮಾರಾಟಕ್ಕೆ ಬಂದಿದ್ದಾಗ ಮಾಲು ಸಮೇತ ಸಿಕ್ಕಿಬಿದ್ದಿದ್ದಾನೆ ಎಂದರು.

ರಾಮಯ್ಯ ಕಾಲೇಜು ಬಳಿ ಪೆಡ್ಲರ್‌ ಬಂಧನ: ಎಂ.ಎಸ್‌. ರಾಮಯ್ಯ ಕಾಲೇಜು ಬಳಿ ಬೃಂದಾವನ ರಸ್ತೆಯಲ್ಲಿ ಗಾಂಜಾ ಮಾರಾಟ ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ರಾಹುಲ್‌ (30) ಎಂಬಾತನನ್ನು ರಾಜ ಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 1.10 ಲಕ್ಷ ರೂ. ಮೌಲ್ಯದ 5 ಕೆ.ಜಿ ಗಾಂಜಾ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈತ ಒಡಿಶಾದಿಂದ ಗಾಂಜಾ ತಂದು ಆಗಷ್ಟೇ ಮಾರಾಟಕ್ಕೆ ಸಿದ್ಧತೆ ನಡೆಸಿದ್ದ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

Advertisement

ಜಾರ್ಖಂಡ್‌ನಿಂದ ಗಾಂಜಾ ತಂದಿದ್ದ ಇಬ್ಬರ ಬಂಧನ: ಶಿವನಗರದ ಗಂಗಮ್ಮ-ತಿಮ್ಮಯ್ಯ ಆಟದ ಮೈದಾನದ ಬಳಿ ಗಾಂಜಾ ಮಾರುತ್ತಿದ್ದ ಜಾರ್ಖಂಡ್‌ ಮೂಲದ ಒಬ್ಬ ಸೇರಿ ಇಬ್ಬರು ಆರೋಪಿಗಳನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜಾರ್ಖಂಡ್‌ ಮೂಲದ ರಾಜ್‌ಕುಮಾರ್‌ ಸಿಂಗ್‌(30) ಮತ್ತು ಶಿವನಗರ ನಿವಾಸಿ ತಾಂಡವೇಶ್ವರ (32)ಬಂಧಿತರು. ಆರೋಪಿಗಳಿಂದ 90 ಸಾವಿರ ರೂ. ಮೌಲ್ಯದ 1 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ. ಆರೋಪಿಗಳ ಪೈಕಿ ರಾಜಕುಮಾರ್‌ ಸಿಂಗ್‌ ಜಾರ್ಖಂಡ್‌ನಿಂದ ಗಾಂಜಾ ತಂದು ತಾಂಡವೇಶ್ವರ ಜತೆ ಸೇರಿ ಮಾರಾಟ ಮಾಡುತ್ತಿದ್ದ. ಈ ಮಾಹಿತಿ ಮೇರೆಗೆ ಮಾಲು ಸಮೇತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಗೋವಿಂದರಾಜನಗರದಲ್ಲಿ ಇಬ್ಬರ ಬಂಧನ: ಗೋವಿಂದ ರಾಜನಗರ ಠಾಣೆ ಪೊಲೀಸರು ಠಾಣೆ ವ್ಯಾಪ್ತಿಯ ಪಟ್ಟೆಗಾರಪಾಳ್ಯದ ದೊಡ್ಡಮೋರಿ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 2.5 ಲಕ್ಷ ರೂ. ಮೌಲ್ಯದ 5 ಕೆ.ಜಿ ಗಾಂಜಾ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಒಡಿಶಾದಿಂದ ಗಾಂಜಾ ತಂದು ಮಾರಾಟ: ಮೂವರ ಬಂಧನ: ಒಡಿಶಾದಿಂದ ಗಾಂಜಾ ತರಿಸಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಯಲಹಂಕ ನ್ಯೂಟೌನ್‌ ಠಾಣೆ ಪೊಲೀಸರು ಬಂಧಿಸಿ ದ್ದಾರೆ. ಒಡಿಶಾ ಮೂಲದ ಸಬೀರ್‌, ಎಂ.ಎಸ್‌.ಪಾಳ್ಯ ನಿವಾಸಿ ರೋಷನ್‌, ಜಾಲಹಳ್ಳಿ ನಿವಾಸಿ ಜಯಂತ್‌ ಬಂಧಿತರು. ಆರೋಪಿಗಳಿಂದ 6.25 ಲಕ್ಷ ರೂ. ಮೌಲ್ಯದ 15 ಕೆ.ಜಿ ಗಾಂಜಾ, 3 ಮೊಬೈಲ್‌, 1 ಬೈಕ್‌ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳ ಪೈಕಿ ಸಬೀರ್‌ ಗಾಂಜಾ ತಂದು, ರೋಷನ್‌ಗೆ ಮಾರುತ್ತಿದ್ದ. ಈತ ಜಯಂತ್‌ ಮೂಲಕ ಪೊಟ್ಟಣಗಳಲ್ಲಿ ಗಾಂಜಾ ಮಾರುತ್ತಿರುವುದು ಗೊತ್ತಾಗಿದೆ. ಆರೋಪಿಗಳು ಇತ್ತೀಚೆಗೆ ಅಟ್ಟೂರು ಪೋಸ್ಟ್‌ ಬಳಿ ಗಾಂಜಾ ಮಾರುವಾಗ ಸಿಕ್ಕಿ ಬಿದ್ದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ಹಾಸ್ಟೆಲ್‌ ಬಳಿ ಡ್ರಗ್ಸ್‌ ಮಾರುವಾಗ ಸೆರೆ: ಹೊಸ ವರ್ಷಾಚರಣೆ ವೇಳೆ ಗಾಂಜಾ ಮಾರಾಟಕ್ಕೆ ಮುಂದಾಗಿದ್ದ ಆಟೋ ಚಾಲಕನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಂದಿನಿ ಲೇಔಟ್‌ ನಿವಾಸಿ ಸದ್ದಾಂ (34) ಬಂಧಿತ. ಆರೋಪಿಯಿಂದ 75 ಸಾವಿರ ರೂಪಾಯಿ ಮೌಲ್ಯದ 1 ಕೆ.ಜಿ. 450 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ಆರೋಪಿ ಆಟೋ ಚಾಲಕನಾಗಿದ್ದು, ಜತೆಗೆ ಹೆಚ್ಚಿನ ಹಣ ಸಂಪಾದಿಸಲು ಠಾಣೆ ವ್ಯಾಪ್ತಿಯ ಒಕ್ಕಲಿಗರ ಸಂಘದ ಹಾಸ್ಟೆಲ್‌ ಬಳಿ ಡ್ರಗ್ಸ್‌ ಮಾರುವಾಗ ಸಿಕ್ಕಿ ಬಿದ್ದಿದ್ದಾನೆ ಎಂದು ಪೊಲೀಸರು ಹೇಳಿದರು. ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

ಸಿಕ್ಕಿಂನಿಂದ ಗಾಂಜಾ ತಂದು ಮಕ್ಕ ಳಿಗೆ ಸೇಲ್‌: ದೂರದ ಈಶಾನ್ಯ ರಾಜ್ಯ ಸಿಕ್ಕಿಂನಿಂದ ಗಾಂಜಾ ತಂದು ನಗರದಲ್ಲಿ ಗಾಂಜಾ ಮಾರುತ್ತಿದ್ದ ಆರೋಪಿಯನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ,. ಯಲಹಂಕ ನ್ಯೂಟೌನ್‌ ನಿವಾಸಿ ಪ್ರೇಮ್‌(30) ಬಂಧಿತ. ಆರೋಪಿಯಿಂದ 70 ಸಾವಿರ ರೂ. ಮೌಲ್ಯದ 1 ಕೆ.ಜಿ.600 ಗ್ರಾಂ ಗಾಂಜಾ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿ ಸಿಕ್ಕಂ ಮೂಲದ ವ್ಯಕ್ತಿಂದ ಗಾಂಜಾ ತರಿಸಿಕೊಂಡು ನಗರದಲ್ಲಿ ವಿದ್ಯಾರ್ಥಿಗಳಿಗೆ ಮಾರಾಟಕ್ಕೆ ಮುಂದಾಗಿದ್ದ. ಇತ್ತೀಚೆಗೆ ಠಾಣೆ ವ್ಯಾಪ್ತಿಯ ವಿಶ್ವೇಶ್ವರಯ್ಯ ಪಾರ್ಕ್‌ ಬಳಿ ಮಾರುತ್ತಿದ್ದ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next