ಬಳ್ಳಾರಿ: ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯ, ಹಿಂಸಾಚಾರ ಖಂಡಿಸಿ ದೇಶಭಕ್ತ ನಾಗರೀಕರ ವೇದಿಕೆ ಕರೆ ನೀಡಿದ್ದ ಬಳ್ಳಾರಿ ಬಂದ್ ಗೆ ನಗರದಲ್ಲಿ ಡಿ.4ರ ಬುಧವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಬೆಳಗ್ಗೆ 8 ಗಂಟೆ ಸುಮಾರಿಗೆ ವೇದಿಕೆಯಿಂದ ಬೈಕ್ ರ್‍ಯಾಲಿ ನಡೆಸಿದ ಕಾರ್ಯಕರ್ತರು, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ, ಬಂದ್ ಬೆಂಬಲಿಸುವಂತೆ ಕೋರಿದರು.
ಬಂದ್ ಗೆ ಪೂರ್ವ ನಿಯೋಜಿತವಾಗಿ ಆಟೋ ಪ್ರಚಾರ ಮಾಡಿದ್ದರಿಂದ ಕೆಲ ವ್ಯಾಪಾರಿಗಳು ತಮ್ಮ ಮಳಿಗೆಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿಕೊಳ್ಳುವ ಮೂಲಕ ಬಂದ್ ಗೆ ಬೆಂಬಲ ನೀಡಿದ್ದಾರೆ.
ಇನ್ನು ಬಂದ್ ಹಿನ್ನೆಲೆ ಪ್ರತಿಭಟನಾ ನಿರತರು ಗಡಿಗಿ ಚನ್ನಪ್ಪ ವೃತ್ತದಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಂಡಿರುವ ಹಿನ್ನೆಲೆ ಸಾರಿಗೆ ಬಸ್ ಗಳು ನಗರದ ಹಳೆ ಬಸ್ ನಿಲ್ದಾಣಕ್ಕೆ ಆಗಮಿಸದೆ ಹೊಸ ಬಸ್ ನಿಲ್ದಾಣದಿಂದಲೇ ಸಂಚಾರ ಆರಂಭಿಸಿದವು. ನಿಲ್ದಾಣಕ್ಕೆ ಆಗಮಿಸುತ್ತಿದ್ದ ಪ್ರಯಾಣಿಕರನ್ನು ಅಲ್ಲಿನ ಸಿಬ್ಬಂದಿಗಳು ಹೊಸ ಬಸ್ ನಿಲ್ದಾಣಕ್ಕೆ ಕಳುಹಿಸುತ್ತಿದ್ದರು.
ಕೆಲವೊಂದು ಶಾಲೆಗಳು ರಜೆ ಘೋಷಿಸುವ ಮೂಲಕ ಬಂದ್ ಗೆ ಬೆಂಬಲಿಸಿದ್ದು, ಸರ್ಕಾರಿ ಶಾಲಾ, ಕಾಲೇಜುಗಳು, ಸರ್ಕಾರಿ ಕಚೇರಿಗಳು, ಪ್ರಯಾಣಿಕರ ಆಟೋಗಳು, ಜನದಟ್ಟಣೆ, ವಾಹನಗಳ ದಟ್ಟಣೆ ಎಂದಿನಂತೆ ಚಾಲನೆಯಲ್ಲಿದ್ದವು.